
ಸಂತೇಮರಹಳ್ಳಿ: ಹೋಬಳಿಗೆ ಸೇರಿದ ಕಸ್ತೂರು ಗ್ರಾಮದ ದೊಡ್ಡಮ್ಮ ತಾಯಿ ಬಂಡಿ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ವಿವಿಧ ತಾಲ್ಲೂಕು ಹಾಗೂ ನೆರೆಯ ಜಿಲ್ಲೆಗಳಿಂದ ಬಂದಿದ್ದ ಭಕ್ತರು ದೊಡ್ಡಮ್ಮ ತಾಯಿಯ ಬಂಡಿ ಜಾತ್ರೆ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಧನ್ಯತಾಭಾವ ಮೆರೆದರು.
ಕಸ್ತೂರು ಬಂಡಿ ಜಾತ್ರೆ ಎಂದರೆ ಬಂಡಿಗಳದ್ದೆ ಕಲರವ. ಮೊದಲಿಗೆ ದೊಡ್ಡಮ್ಮ ತಾಯಿ ದೇವಸ್ಥಾನದ ಮುಂಭಾಗ ಕಸ್ತೂರು ಗ್ರಾಮದ ಬಂಡಿ ಬಂದು ನಿಂತಾಗ ದೇವಸ್ಥಾನದ ಅರ್ಚಕ ಪೂಜೆ ಸಲ್ಲಿಸಿ ಬಂಡಿಗೆ ತೀರ್ಥ ಎರಚುತ್ತಿದ್ದಂತೆ ಸುತ್ತಲು ಕಾಯಿ ಹಿಡಿದು ನಿಂತಿದ್ದ ಭಕ್ತರು ಬಂಡಿಯ ಚಕ್ರಕ್ಕೆ ಈಡುಗಾಯಿ ಒಡೆದು ಸಂಭ್ರಮಿಸಿ ಹರಕೆ ತೀರಿಸಿದರು. ಆ ಸಮಯದಲ್ಲಿ ನೆರೆದಿದ್ದ ಭಕ್ತರ ಜಯಘೋಷ ಮುಗಿಲು ಮುಟ್ಟಿತು.
ಕಸ್ತೂರು ಗ್ರಾಮದ ಬಂಡಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿಸಿ ಪೂಜೆ ಸಲ್ಲಿಸಿದ ನಂತರ ಒಂದರ ಹಿಂದೆ ಮತ್ತೊಂದು ಗ್ರಾಮಗಳ ಬಂಡಿಗಳು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದವು. ಈ ಜಾತ್ರೆಯಲ್ಲಿ ಬಂಡಿಗಳಿಗೆ ಎತ್ತುಗಳನ್ನು ಸಿಂಗರಿಸಿ ಕಟ್ಟಿ ವಿವಿಧ ಬಗೆಯ ಹೂವು, ಬಣ್ಣ ಬಣ್ಣದ ವಸ್ತ್ರ, ಬಾಳೆಗೊನೆ, ಎಳನೀರು, ರಂಗು ರಂಗಿನ ಬಣ್ಣದ ಪಟ್ಟಿಗಳು, ಬಾರಿ ಗಾತ್ರದ ಹೂವಿನ ಹಾರಗಳು ಮತ್ತು ತಾವು ಬೆಳೆದಿದ್ದ ಫಸಲನ್ನು ಕಟ್ಟಿದ್ದರು.
ಒಂದು ಗ್ರಾಮಕ್ಕಿಂತ ಮತ್ತೊಂದು ಗ್ರಾಮದ ಬಂಡಿಗಳನ್ನು ಸ್ಪರ್ಧಾತ್ಮಕವಾಗಿ ಕಟ್ಟಲಾಗಿತ್ತು. ಅಲಂಕೃತ ಬಂಡಿಗಳು ಜಾತ್ರೆಗೆ ಆಗಮಿಸಿದ ಭಕ್ತಾಧಿಗಳ ಕಣ್ಮನ ಸೆಳೆಯಿತು.
ಕಸ್ತೂರು, ಭೋಗಾಪುರ, ಮರಿಯಾಲ, ಕಿರಗಸೂರು, ಸಪ್ಪಯ್ಯನಪುರ, ಕೆಲ್ಲಂಬಳ್ಳಿ, ಮೂಕಳ್ಳಿ, ಆನಹಳ್ಳಿ, ತೊರವಳ್ಳಿ, ಪುಟ್ಟೇಗೌಡನ ಹುಂಡಿ, ಹೊನ್ನೇಗೌಡನ ಹುಂಡಿ, ಪುಟ್ಟಯ್ಯನ ಹುಂಡಿ, ದಾಸನೂರು, ಚಿಕ್ಕಹೊಮ್ಮ, ದೊಡ್ಡಹೊಮ್ಮ ಹಾಗೂ ಹೆಗ್ಗವಾಡಿ ಗ್ರಾಮಸ್ಥರು ಬಂಡಿಗಳನ್ನು ಕಟ್ಟಿ ಊರಲ್ಲಿ ಪೂಜೆ ಸಲ್ಲಿಸಿದ ನಂತರ ವಾದ್ಯ ಮೇಳಗಳು ಹಾಗೂ ವೀರಗಾಸೆ ಕಲಾವಿದರೊಂದಿಗೆ ದೊಡ್ಡಮ್ಮ ತಾಯಿ ದೆವಸ್ಥಾನಕ್ಕೆ ಬಂದು ಪ್ರದಕ್ಷಿಣೆ ಹಾಕಿಸಿದರು. ಸುತ್ತಲಿನ ಗ್ರಾಮಗಳಿಂದ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ತಮ್ಮ ಗ್ರಾಮದ ಬಂಡಿಗಳು ಬಂದಾಗ ಕೇಕೆ ಹಾಕಿ ಹುರಿದುಂಬಿಸಿದರು.
ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಮಹಿಳೆಯರು ದೀವಟಿಗೆ ಸೇವೆ (ಪಂಜು) ಉರಿಸಿ ದೊಡ್ಡಮ್ಮ ತಾಯಿ ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಸನಿಹದಲ್ಲಿರುವ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲೂ ಭಕ್ತರು ಪೂಜೆ ಸಲ್ಲಿಸಿದರು.
ಜಾತ್ರೆಯ ಅಂಗವಾಗಿ ತಾಲ್ಲೂಕು ಆಡಳಿತ ಸಕಲ ವ್ಯವಸ್ಥೆ ಮಾಡಿತ್ತು. ಜಾತ್ರೆಗೆ ಆಗಮಿಸುವ ಎಲ್ಲ ಕಡೆಗಳಿಂದ ದೂರದಲ್ಲಿಯೆ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಜಾತ್ರೆಗೆ ಆಗಮಿಸಿದ ಭಕ್ತರು ಬ್ಯಾರಿಕೇಡ್ ಮೂಲಕ ಸುಗಮವಾಗಿ ಸಂಚರಿಸಲು ಅನುಕೂಲವಾಯಿತು. ದೇವಸ್ಥಾನದಲ್ಲಿ ಪೂಜಾ ಸಾಮಗ್ರಿಗಳು ಹಾಗೂ ವ್ಯಾಪಾರಸ್ಥರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳ ಆಟಿಕೆ ವಸ್ತುಗಳು ಹಾಗೂ ತಿಂಡಿ ತಿನಿಸುಗಳ ಭರ್ಜರಿ ವ್ಯಾಪಾರ ನಡೆಯಿತು.
ದೊಡ್ಡಮ್ಮ ತಾಯಿ ಜಾತ್ರಾ ಮಹೋತ್ಸವಕ್ಕೆ ಬಂಡಿ ಕಟ್ಟುವ 16 ಗ್ರಾಮಗಳಲ್ಲದೇ 23 ಗ್ರಾಮಗಳಲ್ಲಿ ಹಬ್ಬ ನಡೆಯಿತು. ಹಬ್ಬ ಆಚರಿಸುವ ಗ್ರಾಮಗಳಲ್ಲಿ ತಳಿರು ತೋರಣ ಹಾಗೂ ಧ್ವನಿವರ್ಧಕ ಸೇರಿದಂತೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹಬ್ಬ ಆಚರಿಸುವ ಗ್ರಾಮಗಳ ಮಹಿಳೆಯರು ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ಜಾತ್ರೆಗೆ ಭಾಗವಹಿಸಲು ಆಗುವುದಿಲ್ಲ. ಹಾಗಾಗೀ ಮುಂದಿನ ಭಾನುವಾರ ಮಹಿಳೆಯರಿಗಾಗಿ ಚಿಕ್ಕ ಜಾತ್ರೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.