ADVERTISEMENT

ಸಂತೇಮರಹಳ್ಳಿಯ ಉಮ್ಮತ್ತೂರು ಕೆರೆ ಎಂದು ತುಂಬುವುದೋ?

ಮೂರು ವರ್ಷಗಳ ಹಿಂದೆ ಶಂಕುಸ್ಥಾಪನೆ, ನನೆಗುದಿಗೆ ಬಿದ್ದ ಕಾಮಗಾರಿ

ಮಹದೇವ್ ಹೆಗ್ಗವಾಡಿಪುರ
Published 21 ಜುಲೈ 2020, 19:30 IST
Last Updated 21 ಜುಲೈ 2020, 19:30 IST
ಹೂಳು ತುಂಬಿದ ಉಮ್ಮತ್ತೂರು ಕೆರೆಯ ನೋಟ
ಹೂಳು ತುಂಬಿದ ಉಮ್ಮತ್ತೂರು ಕೆರೆಯ ನೋಟ   

ಸಂತೇಮರಹಳ್ಳಿ: ಉಮ್ಮತ್ತೂರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮೂರು ವರ್ಷ ಕಳೆಯುತ್ತಾ ಬಂದರೂ ಕೆರೆಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿಲ್ಲ. ಕೆರೆಗೆ ನೀರು ತುಂಬಿ, ಜನರಿಗೆ ಅನುಕೂಲವಾಗಲಿದೆ ಎಂಬ ಸುತ್ತಮುತ್ತಲಿನ ಗ್ರಾಮಸ್ಥರ ನಿರೀಕ್ಷೆ ಸುಳ್ಳಾಗಿದೆ.

ಜಿಲ್ಲೆಯ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಸಂತೇಮರಹಳ್ಳಿ ಹೋಬಳಿಯ ಉಮ್ಮತ್ತೂರು ಕೆರೆಯೂ ಒಂದು. ಈಗಾಗಲೇ ಜಿಲ್ಲೆಯ ಹಲವು ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸಲಾಗಿದೆ. ಉಮ್ಮತ್ತೂರು ಕೆರೆಗೆ ನೀರು ತುಂಬಿಸುವ ಕಾಮಗಾರಿ ಮಾತ್ರ ನನೆಗುದಿಗೆ ಬಿದ್ದಿದೆ.

ಯೋಜನೆಯಲ್ಲಿ ಉಮ್ಮತ್ತೂರು ಕೆರೆಯನ್ನೂ ಸೇರಿಸಬೇಕು ಎಂದು ಒತ್ತಾಯಿಸಿ ಉಮ್ಮತ್ತೂರು, ದಾಸನೂರು, ಹನುಮನಪುರ, ಮೂಡಲ ಅಗ್ರಹಾರ, ಕುದೇರು, ದೇಮಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಯ ಮುಂಭಾಗ ಒಂದು ವಾರಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿಗಳು, ಸಂಸದರು, ಶಾಸಕರು ಜನಪ್ರತಿನಿಧಿಗಳು ಭೇಟಿ ನೀಡಿ, ಕೆರೆಗೆ ನೀರು ತುಂಬಿಸಲು ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ನಿಲ್ಲಿಸಿದ್ದರು.

ADVERTISEMENT

ಕಾಂಗ್ರೆಸ್ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಚುನಾವಣೆ ಹತ್ತಿರವಿರುವಾ‌ಗ ಕೆರೆಗೆ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಯೋಜನೆಗೆ ಚಾಲನೆ ನೀಡಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಕೆರೆಗೆ ನೀರು ಹರಿಯುವ ಲಕ್ಷಣ ಕಾಣುತ್ತಿಲ್ಲ.

‘ಪ್ರತಿಭಟನೆ ಸಮಯದಲ್ಲಿ ಹಾಲಿ ಶಾಸಕ ಎನ್.ಮಹೇಶ್ ಅವರು ಬಿಎಸ್‍ಪಿ ಕಾರ್ಯಕರ್ತರೊಂದಿಗೆ ಸಂತೇಮರಹಳ್ಳಿಯಿಂದ ಉಮ್ಮತ್ತೂರು ಕೆರೆವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಿದ್ದರು. ಈಗ ಅವರೇ ಕ್ಷೇತ್ರದ ಶಾಸಕರಾಗಿದ್ದಾರೆ. ಆದರೆ, ಕೆರೆಗೆ ನೀರು ತುಂಬಿಸಲು ಗಮನ ಹರಿಸುತ್ತಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

ಹೂಳು, ಒತ್ತುವರಿ ಸಮಸ್ಯೆ

340 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಈ ಹಿಂದೆ ಎಂಟು ಅಡಿ ಆಳ ಇತ್ತು. ಈಗ ಹೂಳು ತುಂಬಿಕೊಂಡಿದೆ. ಹಾಗಾಗಿ, ಕೆರೆ ಇದೆ ಎಂಬುದೇ ಸ್ಪಷ್ಟವಾಗಿ ಕಾಣುವುದಿಲ್ಲ. ಒತ್ತುವರಿ ಸಮಸ್ಯೆಯೂ ಕೆರೆಯನ್ನು ಬಾಧಿಸುತ್ತಿದೆ. ಸುತ್ತಲಿನ ಬೆಟ್ಟಗುಡ್ಡಗಳಿಂದ ಕೆರೆಗೆ ಮಳೆ ನೀರು ಹರಿದು ಬರುತ್ತಿದ್ದ ಪ್ರದೇಶಗಳು ಕೂಡ ಒತ್ತುವರಿಯಾಗಿವೆ.

ಕೆರೆಯ ಮಧ್ಯ ಭಾಗದಲ್ಲಿ ಕಾಡುಜಾತಿಯ ಮರಗಳು ವ್ಯಾಪಕವಾಗಿ ಬೆಳೆದು ನಿಂತಿವೆ. ಗೊಬ್ಬಳಿ ಮರಗಳು ಭಾರಿ ಪ್ರಮಾಣದಲ್ಲಿ ಇವೆ. ಕಾಡು ಹಾಗೂ ಹೂಳನ್ನು ತೆರವುಗೊಳಿಸಿದರೆ ಕೆರೆಯಲ್ಲಿ ಸ್ವಲ್ಪವಾದರೂ ನೀರು ಸಂಗ್ರಹವಾಗಬಹುದು ಎಂಬುದು ಉಮ್ಮತ್ತೂರು ಗ್ರಾಮಸ್ಥರ ಅಭಿಪ್ರಾಯ.

‘ಕೆರೆ ಈಗ ಇರುವ ಸ್ಥಿತಿಯಲ್ಲಿ ನೀರು ತುಂಬಿಸಿದರೆ ಪ್ರಯೋಜನವಿಲ್ಲ. ಕೆರೆಯ ಹೂಳು ತೆಗೆದರೆ ಮಾತ್ರ ನೀರು ಸಂಗ್ರಹಗೊಂಡು ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಹಾಗಾಗಿ, ಕೆರೆ ಹೂಳು ತೆಗೆಸಿ ಗಿಡ ಮರಗಳನ್ನು ಕತ್ತರಿಸಿ, ನೀರು ತುಂಬಿಸಬೇಕು’ ಎಂದು ಕೆರೆ ಅಭಿವೃದ್ಧಿ ಹೋರಾಟ ಸಮಿತಿಯ ನಾಗೇಂದ್ರ ಪ್ರಸಾದ್ ಹಾಗೂ ಬಸವರಾಜು ಅವರು ಒತ್ತಾಯಿಸಿದರು.

ಸೆಪ್ಟೆಂಬರ್‌ ಮೊದಲ ವಾರದೊಳಗೆ ನೀರು

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು, ‘ಉಮ್ಮತ್ತೂರು ಕೆರೆಗೆ ನದಿಮೂಲದಿಂದ ನೀರು ತುಂಬಿಸುವ ಯೋಜನೆ ಸಂಬಂಧಿಸಿದಂತೆಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳ ಜೊತೆ ಮಾತಕತೆ ನಡೆಸಿದ್ದಾರೆ. ಚುಂಚನಹಳ್ಳಿ ಬಳಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿಗೆ ಅಡಚಣೆ ಉಂಟಾಗಿದೆ. ಇದನ್ನು ಸರಿಪಡಿಸಿ ಸೆಪ್ಟೆಂಬರ್ ಮೊದಲ ವಾರದೊಳಗೆ ಕೆರೆಗೆ ನೀರು ತುಂಬಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.