ADVERTISEMENT

ಕೊಳ್ಳೇಗಾಲ: ನಿರ್ವ‌ಹಣೆ ಇಲ್ಲದೆ ಸೊರಗಿದ ಗಿಡಗಳು

ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ನೆಟ್ಟ ಸಸಿಗಳು, ಪರಿಸರ ಪ್ರೇಮಿಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 20:30 IST
Last Updated 7 ನವೆಂಬರ್ 2020, 20:30 IST
ನಿರ್ವಹಣೆಯ ಕೊರತೆಯಿಂದ ಗಿಡಗಳು ಸೊರಗಿರುವುದು
ನಿರ್ವಹಣೆಯ ಕೊರತೆಯಿಂದ ಗಿಡಗಳು ಸೊರಗಿರುವುದು   

ಕೊಳ್ಳೇಗಾಲ: ಸಾಮಾಜಿಕ ಅರಣ್ಯ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನೆಡಲಾಗಿರುವ ಕೆಲ ಗಿಡಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಕೆಲವು ಸಸಿಗಳು ಒಣಗಿ ಹೋದರೆ, ಮತ್ತೂ ಕೆಲವು ಬಿಡಾಡಿ ದನಗಳಿಗೆ ಹಾಗೂ ಕುರಿಗಳಿಗೆ ಆಹಾರವಾಗಿವೆ.

ನಗರ ಹಾಗೂ ಗ್ರಾಮೀಣ ಪ್ರದೇಶವನ್ನು ಹಸಿರೀಕರಣ ಮಾಡುವ ಉದ್ದೇಶದಿಂದ ಮತ್ತು ಸಾರ್ವಜನಿಕರಿಗೆ ಉತ್ತಮ ಪರಿಸರ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಾವಿರಾರು ಗಿಡಗಳನ್ನು ನೆಟ್ಟಿದೆ.

ವಿಶ್ವ ಪರಿಸರ ದಿನದ ಅಂಗವಾಗಿ ಮಲೆ ಮಹದೇಶ್ವರ ವನ್ಯಧಾಮದ ಆಡಳಿತವು ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದಿಂದ ಚಿಲುಕವಾಡಿ ಗ್ರಾಮದ 12 ಕಿ.ಮೀ ರಸ್ತೆಯ ಬದಿಯಲ್ಲಿ 1,100 ವಿವಿಧ ಜಾತಿಯ ಗಿಡಗಳನ್ನು ನೆಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹಾಗೂ ಸ್ಥಳೀಯ ಶಾಸಕ ಎನ್.ಮಹೇಶ್ ಅವರು ಸ್ವತಃ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ADVERTISEMENT

‘ಈ ಗಿಡಗಳಲ್ಲಿ ಕೆಲವೊಂದು ಉತ್ತಮವಾಗಿ ಬೆಳೆದಿವೆ. ಬಹುತೇಕ ಕಡೆ ನಿರ್ವಹಣೆ ಕೊರತೆಯಿಂದಾಗಿ ಸಸಿಗಳು ಸೊರಗಿವೆ. ಹೆಚ್ಚಿನ ಗಿಡಗಳನ್ನು ಕಾಡು ಬಳ್ಳಿಗಳು ಆವರಿಸಿವೆ. ಚಿಗುರಿದ ಗಿಡಗಳನ್ನು ಜಾನುವಾರುಗಳು ತಿನ್ನುವುದರಿಂದ ಅವರು ಮೇಲೇಳುತ್ತಿಲ್ಲ’ ಎಂದು ಚಿಲುಕವಾಡಿ ಗ್ರಾಮದ ಶರತ್‍ ನಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಕ್ರಮಕ್ಕಷ್ಟೇ ಕಾಳಜಿ: ವಿಶ್ವ ಪರಿಸರ ದಿನದಂದು ಗಿಡಗಳನ್ನು ನೆಡುವುದಕ್ಕೆ ಮಾತ್ರ ಎಲ್ಲರೂ ಪ್ರಾಶಸ್ತ್ಯ ನೀಡುತ್ತಾರೆ. ನೆಟ್ಟ ನಂತರ ಗಿಡಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂಬುದು ಸಾರ್ವಜನಿಕರ ದೂರು.

ಇಲಾಖೆಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗಿಡ ನಂತರ ಅತ್ತ ತಲೆ ಹಾಕುವುದಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಗಿಡಗಳ ರಕ್ಷಣೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದಿಲ್ಲ ಎಂದು ಆರೋಪಿಸುತ್ತಾರೆ ಪರಿಸರ ಪ್ರೇಮಿಗಳು.

‘ಸಂಘ ಸಂಸ್ಥೆಗಳು, ಅಧಿಕಾರಿಗಳು, ರಾಜಕಾರಣಿಗಳುಕಾಟಾಚಾರಕ್ಕೆ ಗಿಡಗಳನ್ನು ನೆಟ್ಟು ಫೋಟೊಗೆ ಪೋಸ್‌ ನೀಡುವುದನ್ನು ನಿಲ್ಲಿಸಬೇಕು. ಗಿಡಗಳನ್ನು ನೆಟ್ಟ ನಂತರ ಅವುಗಳನ್ನು ಮಕ್ಕಳ ಹಾಗೆ ನೋಡಿಕೊಳ್ಳಬೇಕು ಎಂದು ಪೋಸ್ ನೀಡುತ್ತಾರೆ ಇದು ನಿಲ್ಲಬೇಕು. ಗಿಡಗಳನ್ನು ಮಕ್ಕಳ ಹಾಗೆ ನೋಡಿಕೊಳ್ಳಬೇಕು’ ಎಂದು ಪರಿಸರ ಪ್ರೇಮಿ ಮಂಜುಳಾ ಅವರು ಹೇಳಿದರು.

ಗಿಡಗಳನ್ನು ರಕ್ಷಿಸಲು ಕ್ರಮ

‘ಗಿಡ ನೆಟ್ಟ ಕೆಲವು ಕಡೆಗಳಲ್ಲಿ ಮಣ್ಣು ಉತ್ತಮವಾಗಿ ಇರುವುದಿಲ್ಲ. ಅಂತಹ ಜಾಗದಲ್ಲಿ ಗಿಡಗಳನ್ನು ಹಾಕಿದರೂ ಪ್ರಯೋಜನವಾಗುತ್ತಿಲ್ಲ. ಮಣ್ಣು ಫಲವತ್ತಾಗಿಲ್ಲದೇ ಇರುವುದರಿಂದ ಗಿಡಗಳು ಸೊರಗುತ್ತವೆ. ಸೊರಗಿರುವ ಗಿಡಗಳನ್ನು ಗುರುತಿಸಿ, ಅವುಗಳನ್ನು ರಕ್ಷಿಸಲು ಕ್ರಮ ವಹಿಸಲಾಗುವುದು’ ಎಂದು ಕೊಳ್ಳೇಗಾಲ ಬಫರ್‌ ವಲಯದ ಅರಣ್ಯ ಅಧಿಕಾರಿ ಪ್ರವೀಣ್‌ ರಾಮಪ‍್ಪ ಛಲವಾದಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲೆಲ್ಲಿ ಗಿಡಗಳ ನಿರ್ವಹಣೆ ಕೊರತೆಯಿದೆ ಎಂದು ಪರೀಶೀಲನೆ ನಡೆಸಿ, ಅಂತಹ ಗಿಡಗಳನ್ನು ಸರಿ ಪಡಿಸುತ್ತೇವೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.