ADVERTISEMENT

ಸರ್ವಜ್ಞನ ಆದರ್ಶ ಅಳವಡಿಸಿಕೊಳ್ಳು ತಹಶೀಲ್ದಾರ್ ತನ್ಮಯ್ ಸಲಹೆ

ತ್ರಿಪದಿ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿದರು: ಎಂ.ಎಸ್.ತನ್ಮಯ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:02 IST
Last Updated 21 ಫೆಬ್ರುವರಿ 2026, 6:02 IST
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಸರ್ವಜ್ಞ ಜಯಂತಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಸರ್ವಜ್ಞ ಜಯಂತಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಗುಂಡ್ಲುಪೇಟೆ: ಉನ್ನತ ಶಿಕ್ಷಣ ಪಡೆದು ಸರ್ವಜ್ಞನ ಮೌಲ್ಯ ಅಳವಡಿಸಿಕೊಳ್ಳಬೇಕೆಂದು ತಹಶೀಲ್ದಾರ್ ಎಂ.ಎಸ್.ತನ್ಮಯ್ ಸಲಹೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಸರ್ವಜ್ಞ ಜಯಂತಿಯಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಮಾತನಾಡಿದರು. ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು. ಜ್ಞಾನವನ್ನು ಅರಿತು ಜ್ಞಾನಕ್ಕಿಂತ ಯಾವುದು ದೊಡ್ಡದಲ್ಲ ಎಂದು ತಿಳಿಸಿದ್ದಾರೆ ಎಂದು ಶ್ಲಾಘಿಸಿದರು.

ಜ್ಞಾನದ ಮುಂದೆ ಯಾವುದೂ ಇಲ್ಲ, ಓದಿ ವಿದ್ಯಾವಂತರಾಗಿ ಜ್ಞಾನವಂತರಾದರೆ ಜಗತ್ತೇ ನಿಮ್ಮ ಕೈಯಲ್ಲಿರುತ್ತದೆ. ಇದರಿಂದ ಸಮಾಜದಲ್ಲಿ ಆದರ್ಶವಾಗಿ ಬದುಕು ಸಾಗಿಸಬಹುದು. ಸಂತ ಕವಿ ಸರ್ವಜ್ಞ ನಮಗೆ ಬಿಟ್ಟು ಹೋಗಿರುವುದು ಜ್ಞಾನವೇ ಹೊರತು ಬೇರೆನು ಅಲ್ಲ. ಹಾಗಾಗಿ ಕುಂಬಾರ ಸಮುದಾಯವರು ಶಿಕ್ಷಣ ಪಡೆದಯಬೇಕು. ಸರ್ವಜ್ಞ ತ್ರಿಪದಿಗಳು ಕನ್ನಡ ಸಾಹಿತ್ಯಕ್ಕೆ ಮೇರು ಕಿರೀಟದಂತಿದ್ದು, ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದಿದ್ದ ಸರ್ವಜ್ಞನ ಸಂದೇಶ ಸರ್ವ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಹೇಳಿದರು.

ADVERTISEMENT

ಮುಖ್ಯ ಭಾಣಷಕಾರ ಸಾಹಿತಿ ದೇವರಾಜು ಮಾತನಾಡಿ, ಸರ್ವಜ್ಞ ವಚನಗಳು ಇಂದಿಗೂ ದಾರಿ ದೀಪಾವಾಗಿದ್ದು, ನಾವು ಜೀವನದಲ್ಲಿ ಅವರ ಚಿಂತನೆಗಳು ಅಳವಡಿಸಿಕೊಂಡರೆ ಮಾತ್ರ ಅವರಿಗೆ ಗೌರವ ನೀಡಿದಂತಾಗುತ್ತದೆ. ಕನ್ನಡದಲ್ಲಿ ಸರ್ವಜ್ಞ ಎಂದರೆ ಎಲ್ಲವನ್ನೂ ತಿಳಿದುಕೊಂಡವನು ಎಂದರ್ಥ. ಸರ್ವಜ್ಞ ಸುಮಾರು ಏಳು ಸಾವಿರ ಪದ್ಯಗಳನ್ನು ರಚಿಸಿದ್ದು, ಪ್ರಸ್ತುತ ಮೂರು ಸಾವಿರ ಪದ್ಯಗಳು ಲಭ್ಯವಿದೆ. ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ತ್ರಿಪದಿ ಪದ್ಯಗಳನ್ನು ರಚನೆ ಮಾಡಿದರು ಎಂದು ತಿಳಿಸಿದರು.

ಮುಖಂಡ ವೆಂಕಟರಾಜು ಮಾತನಾಡಿ, ತಾಲ್ಲೂಕು ಆಡಳಿತದ ವತಿಯಿಂದ ಇಂದು ಸರಳವಾಗಿ ಜಯಂತಿ ಆಚರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಶಾಸಕ ಎಚ್.ಎಸ್.ಗಣೇಶಪ್ರಸಾದ್ ಅವರೊಂದಿಗೆ ಚರ್ಚಿಸಿ ಅದ್ದೂರಿಯಾಗಿ ಸರ್ವಜ್ಞ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕುಂಬಾರ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷೆ ಭಾಗ್ಯಮ್ಮ, ಮಾಜಿ ಸದಸ್ಯ ಹನುಮಂತಶೆಟ್ಟಿ, ಗ್ರಾ.ಪಂ ಮಾಜಿ ಸದಸ್ಯ ನಾಗರಾಜು, ನಾಗಶೆಟ್ಟಿ, ಸಂಪತ್ತು, ಬಾಚಹಳ್ಳಿ ಮಂಜುನಾಥ್ ಸೇರಿದಂತೆ ಕುಂಬಾರ ಸಮುದಾಯ ಯಜಮಾನರು ಮತ್ತು ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.