ADVERTISEMENT

ಶಾಲಾರಂಭ; ಮಕ್ಕಳಿಗೆ ಅದ್ದೂರಿ ಸ್ವಾಗತ

ಮೊದಲ ದಿನ ಶೇ 40ರಷ್ಟು ವಿದ್ಯಾರ್ಥಿಗಳು ಹಾಜರು; ಶಾಲೆಗಳಲ್ಲಿ ಹಬ್ಬದ ವಾತಾವರಣ

​ಪ್ರಜಾವಾಣಿ ವಾರ್ತೆ
Published 16 ಮೇ 2022, 16:05 IST
Last Updated 16 ಮೇ 2022, 16:05 IST
ಚಾಮರಾಜನಗರ ತಾಲ್ಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅವರು ವಿದ್ಯಾರ್ಥಿಗಳಿಗೆ ಹೂವು ನೀಡಿ ತರಗತಿಗೆ ಸ್ವಾಗತಿಸಿದರು. ಡಿಡಿಪಿಐ ಮಂಜುನಾಥ್‌, ಬಿಇಒ ಸೋಮಣ್ಣೇಗೌಡ ಇತರರು ಇದ್ದರು
ಚಾಮರಾಜನಗರ ತಾಲ್ಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅವರು ವಿದ್ಯಾರ್ಥಿಗಳಿಗೆ ಹೂವು ನೀಡಿ ತರಗತಿಗೆ ಸ್ವಾಗತಿಸಿದರು. ಡಿಡಿಪಿಐ ಮಂಜುನಾಥ್‌, ಬಿಇಒ ಸೋಮಣ್ಣೇಗೌಡ ಇತರರು ಇದ್ದರು   

ಚಾಮರಾಜನಗರ/ಕೊಳ್ಳೇಗಾಲ/ಯಳಂದೂರು/ಗುಂಡ್ಲುಪೇಟೆ: ಜಿಲ್ಲೆಯಾದ್ಯಂತ ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿದ್ದು, ಮಕ್ಕಳು ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕಿದರೆ; ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಈ ವರ್ಷ 15 ದಿನ ಮೊದಲೇ ಶಾಲೆ ಆರಂಭವಾಗಿದ್ದು, ಮೊದಲ ದಿನ ಮಕ್ಕಳ ಹಾಜರಾತಿ ಕಡಿಮೆ ಇತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಶೇ 40ರಷ್ಟು ಮಕ್ಕಳು ಮೊದಲ ದಿನ ಶಾಲೆಗೆ ಬಂದಿದ್ದಾರೆ.

ಜಿಲ್ಲೆಯಲ್ಲಿರುವ ಸರ್ಕಾರಿ, ಖಾಸಗಿ ಶಾಲೆಗಳು ಸೇರಿದಂತೆ 975 ಪ್ರಾಥಮಿಕ ಹಾಗೂ 235 ಪ್ರೌಢಶಾಲೆಗಳು ಸೋಮವಾರ ಆರಂಭಗೊಂಡಿವೆ.

ADVERTISEMENT

ಆದರದ ಸ್ವಾಗತ: ಎರಡು ವರ್ಷಗಳಿಂದ ಶೈಕ್ಷಣಿಕ ವರ್ಷ ಆರಂಭಕ್ಕೆ ಕೋವಿಡ್‌ ಹಾವಳಿ ಇತ್ತು. ಹಾಗಾಗಿ, ತಡವಾಗಿ ತರಗತಿಗಳು ಆರಂಭಗೊಂಡಿದ್ದವು. ಈ ಬಾರಿ ಸೋಂಕಿನ ಕಾಟ ಇಲ್ಲದಿರುವುದರಿಂದ ಶಾಲಾರಂಭಕ್ಕೆ ಯಾವುದೇ ಅಡೆತಡೆ ಉಂಟಾಗಲಿಲ್ಲ.

ಮಕ್ಕಳ ಸ್ವಾಗತಕ್ಕಾಗಿ ಶಾಲೆಗಳನ್ನು ತಳಿರು ತೋರಣ, ರಂಗೋಲಿಯಿಂದ ಶೃಂಗರಿಸಲಾಗಿತ್ತು. ಶಿಕ್ಷಕರು ಮಕ್ಕಳಿಗೆ ಆರತಿ ಬೆಳಗಿ, ಹೂವು ನೀಡಿ, ಚಾಕೋಲೆಟ್‌, ಬಿಸ್ಕತ್ತು, ಸಿಹಿ ನೀಡಿ ಸ್ವಾಗತಿಸಿದರು. ಗುಂಡ್ಲುಪೇಟೆ ತಾಲ್ಲೂಕಿನ ಹೊಂಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಅಲಂಕೃತ ಎತ್ತಿನ ಬಂಡಿಗಳಲ್ಲಿ ಕೂರಿಸಿ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು.

ಸಂತೇಮರಹಳ್ಳಿ ಹೋಬಳಿಯಮೂಡಲ ಅಗ್ರಹಾರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಸಿಂಗರಿಸಿದ ಎತ್ತಿನ ಗಾಡಿಯೊಂದಿಗೆ ಮಕ್ಕಳ ಮನೆಗಳಿಗೆ ತೆರಳಿ ಅವರನ್ನು ಗಾಡಿಯಲ್ಲಿ ಕೂರಿಸಿ ಶಾಲೆಗೆ ಕರೆತಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ತಾಲ್ಲೂಕಿನ ಮಂಗಲ ಪ್ರೌಢಶಾಲೆ ಹಾಗೂ ಸಂತೇಮರಹಳ್ಳಿ ಪ್ರೌಢಶಾಲೆಗಳಿಗೆ ತೆರಳಿ, ಖುದ್ದಾಗಿ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿದರು. ಅವರಿಗೆ ಡಿಡಿಪಿಐ ಎಸ್‌.ಎನ್‌.ಮಂಜುನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಸಾಥ್‌ ನೀಡಿದರು.

ಹಾಲು, ಮಧ್ಯಾಹ್ನದ ಬಿಸಿಯೂಟ: ಮೊದಲ ದಿನವೇ ಮಕ್ಕಳಿಗೆ ಹಾಲು ಹಾಗೂ ಮಧ್ಯಾಹ್ನದ ಬಿಸಿಯೂಟ ವಿತರಿಸಲಾಯಿತು. ಮೊದಲ ದಿನವಾಗಿದ್ದರಿಂದ ಬಿಸಿಯೂಟದೊಂದಿಗೆ ಪಾಯಸವನ್ನು ಸಿದ್ಧಪಡಿಸಲಾಗಿತ್ತು. ಮಕ್ಕಳು ಖುಷಿಯಿಂದಲೇ ಸವಿದರು.

ಪುಸ್ತಕ ವಿತರಣೆ: ಮಕ್ಕಳಿಗೆ ಹೊಸ ಪಠ್ಯಪುಸ್ತಕ ವಿತರಿಸಲಾಯಿತು. ಪಠ್ಯ ಪುಸ್ತಕ ಸಿಗದಿದ್ದವರಿಗೆ ಶಾಲೆಯಲ್ಲಿರುವ ಪುಸ್ತಕ ಬ್ಯಾಂಕ್‌ನ ಪುಸ್ತಕಗಳನ್ನು ನೀಡಲಾಯಿತು.

ಗುಂಡ್ಲುಪೇಟೆ ವರದಿ: ತಾಲ್ಲೂಕಿನಲ್ಲಿ 200ಕ್ಕೂ ಹೆಚ್ಚು ಶಾಲೆಗಳಲ್ಲಿ ಶಿಕ್ಷಕರು ವಿನೂತನವಾಗಿ ಮಕ್ಕಳನ್ನು ಬರಮಾಡಿಕೊಂಡರು.

ತಾಲ್ಲೂಕಿನ ಹೊಂಗಹಳ್ಳಿ, ಹುಂಡೀಪುರ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಹೊಂಗಹಳ್ಳಿ ಶಾಲೆಯಲ್ಲಿ 20 ಜೊತೆ ಎತ್ತಿನ ಗಾಡಿಯನ್ನು ಶೃಂಗಾರ ಮಾಡಿ, ಸಮವಸ್ತ್ರ, ಗಾಂಧಿ ಟೋಪಿ ಧರಿಸಿದ ಮಕ್ಕಳನ್ನು ಕೂರಿಸಿ ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಿ ಗೌರವ ಪೂರ್ವಕವಾಗಿ ಸ್ವಾಗತಿಸಲಾಯಿತು.ಇಡೀ ಊರೇ ಹಬ್ಬಕ್ಕಿಂತ ಹೆಚ್ಚಾಗಿ ಸಂಭ್ರಮಿಸಿತು.

ಯಳಂದೂರು ವರದಿ:ತಾಲ್ಲೂಕಿನ ಎಲ್ಲಶಾಲೆಗಳಲ್ಲಿ ಹಬ್ಬದ ವಾತಾವರಣವಿತ್ತು. ಕೊಠಡಿಗಳನ್ನು ತಳಿರು–ತೋರಣಗಳಿಂದ ಸಿಂಗರಿಸಿ, ರಂಗೋಲಿ ಹಾಕಿದ್ದ ಶಿಕ್ಷಕ ಸಮೂಹ; ಫಲ, ಪುಷ್ಪಗಳನ್ನು ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿತು. ಕೆಲವೆಡೆ ಎತ್ತಿನ ಗಾಡಿ ಮೆರವಣಿಗೆ, ಕುಂಭಾಭಿಷೇಕದ ಸ್ವಾಗತ ಕಳೆಗಟ್ಟಿತು. ಕೆಲವೆಡೆ ತೆಂಗಿನ ಕಾಯಿ ಒಡೆದು ಮಕ್ಕಳನ್ನು ಶಾಲೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು.

ವಿದ್ಯಾರ್ಥಿನಿಯರು ಪೂರ್ಣ ಕುಂಭಗಳೊಂದಿಗೆ ಗ್ರಾಮದ ಬಡಾವಣೆಯಲ್ಲಿ ತೆರಳಿ, ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪೋಷಕರಿಗೆ ಮನವಿ ಮಾಡಿದರು.

ವಿದ್ಯಾರ್ಥಿಯನ್ನು ಶಾಲೆಗೆ ದಾಖಲಿಸಿದ ಸಿಇಒ

ತಾಲ್ಲೂಕಿನ ಸಂತೇಮರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ವಿದ್ಯಾರ್ಥಿಯೊಬ್ಬನನ್ನು ಶಾಲೆಗೆ ದಾಖಲಿಸಿಕೊಳ್ಳುವ ಮೂಲಕ 2022–23ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅವರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿ ಸಂವಾದ ನಡೆಸಿದರು.

‘ಮಕ್ಕಳು ತರಗತಿಗೆ ಬರುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಂಡು ಕೋವಿಡ್‌ ನಿಯಮ ಪಾಲಿಸಬೇಕು. ಶಾಲೆಯಲ್ಲಿರುವ ಡಿಜಿಟಲ್ ಗ್ರಂಥಾಲಯ ಮತ್ತು ಕೊಠಡಿಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

‘ಈಗಾಗಲೇ ಪುಸ್ತಕ ಬ್ಯಾಂಕ್ ಸೌಲಭ್ಯ ಒದಗಿಸಲಾಗಿದ್ದು, ಪ್ರತಿ ದಾಖಲಾತಿಯೊಂದಿಗೆ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ನೀಡಬೇಕು. ಶಿಕ್ಷಕರು ಆರಂಭದಲ್ಲಿ ಶೈಕ್ಷಣಿಕ ಚಟುವಟಿಕೆಗೆ ವೇಗ ನೀಡಬೇಕು’ ಎಂದು ಸಲಹೆ ನೀಡಿದರು.

ಡಿಡಿಪಿಐ ಮಂಜುನಾಥ್ ಮಾತನಾಡಿ ‘ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ವರ್ಷದ ಪ್ರಾರಂಭದಿಂದಲೇ ಯೋಜನೆಗಳನ್ನು ರೂಪಿಸಿಕೊಂಡು ತರಗತಿಗಳಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು. ಬಿಇಒ ಸೋಮಣ್ಣೇಗೌಡ ಇದ್ದರು.

ಹನೂರು:13,453 ಮಕ್ಕಳು ಹಾಜರು

ಹನೂರು: ತಾಲ್ಲೂಕಿನ ಶಾಲೆಗಳಲ್ಲಿ ಮೊದಲ ದಿನ ಶೇ 50ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.

ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ಸೇರಿ 175 ಸರ್ಕಾರಿ ಶಾಲೆಗಳು, 6 ವಸತಿ ಶಾಲೆ, 10 ಗಿರಿಜನ ಆಶ್ರಮ ಶಾಲೆ, 23 ಅನುದಾನಿತ ಶಾಲೆ ಹಾಗೂ 20 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 247 ಶಾಲೆಗಳಿವೆ.

ತಾಲ್ಲೂಕಿನಲ್ಲಿ 24,456 ಮಕ್ಕಳಿದ್ದಾರೆ. ಈ ಪೈಕಿ 13,453 ಮಕ್ಕಳು ಮಾತ್ರ ಹಾಜರಾಗಿದ್ದರು.

‘ಹನೂರು ಶೈಕ್ಷಣಿಕ ವಲಯದಲ್ಲಿ ಬಹುತೇಕ ಮಕ್ಕಳು ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡುವುದರಿಂದ ಹಾಜರಾತಿ ಕಡಿಮೆಯಿದೆ. ಹಾಸ್ಟೆಲ್ ಪ್ರಾರಂಭವಾದರೆ ಹಾಜರಾತಿ ಸಂಖ್ಯೆ ಏರಿಕೆಯಾಗಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ತಿಳಿಸಿದರು.

--

ಮಳೆಯ ಕಾರಣಕ್ಕೆ ಮೊದಲ ದಿನ ಹಾಜರಾತಿ ಕಡಿಮೆ ಇತ್ತು. ಮಕ್ಕಳು ಉತ್ಸಾಹದಿಂದ ಇದ್ದರು. ಶಾಲಾರಂಭವನ್ನು ಹಬ್ಬದ ರೀತಿ ಆಚರಿಸಿದ್ದೇವೆ
ಎಸ್‌.ಎನ್‌.ಮಂಜುನಾಥ್‌ ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.