ಚಾಮರಾಜನಗರ: ‘ಜ್ಞಾನಾರ್ಜನೆಗೆ ನಗರ ಪ್ರದೇಶದ ಶಾಲೆಗಳೇ ಬೇಕು ಎಂಬ ಕಲ್ಪನೆ ತಪ್ಪು. ಕಲಿಯುವ ಆಸಕ್ತಿ ಇದ್ದರೆ ಯಾವ ಶಾಲೆಯಲ್ಲಾದರೂ ಓದಬಹುದು. ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬಂದರಷ್ಟೇ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಹೇಳಿದರು.
ತಾಲ್ಲೂಕಿನ ವೆಂಕಟಯ್ಯನಛತ್ರ ಪ್ರೌಢ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮಗ್ನರಾಗಬೇಕು. ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು. ಪ್ರಶ್ನೆ ಪತ್ರಿಕೆ ಎಷ್ಟೇ ಕಠಿಣವಾಗಿದ್ದರೂ ಧೈರ್ಯದಿಂದ ಬರೆಯುತ್ತೇನೆ ಎಂಬ ವಿಶ್ವಾಸ ನಮ್ಮಲ್ಲಿ ಮೂಡಬೇಕು. ಯಾರದೋ ಒತ್ತಡಕ್ಕೆ ವ್ಯಾಸಂಗ ಮಾಡಬಾರದು. ಪಠ್ಯ ಪುಸ್ತಕ ಅಧ್ಯಯನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸಬೇಕು’ ಎಂದರು.
‘ಈ ಶಾಲೆಯಲ್ಲಿನ ವಿದ್ಯಾರ್ಥಿಗಳ ಕಲಿಕಾಸಕ್ತಿ ಸಂತಸ ಮೂಡಿಸಿದೆ. ಸಂವಿಧಾನ ಜಾಗೃತಿ ಜಾಥಾ ಬಂದಾಗ ಸಂವಿಧಾನದ ಪೀಠಿಕೆ ಓದಬೇಕು. ಅದನ್ನು ಬಾಯಿಪಾಠ ಮಾಡಿಕೊಂಡು ಎಲ್ಲಾ ಮಕ್ಕಳು ಓದುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ. ಕಲಿಕೆಗೆ ನೆರವಾಗಲಿ ಎಂಬ ಉದ್ದೇಶದಿಂದ ಡಿಜಿಟಲ್ ಕಲಿಕೆಗೆ ಅನೇಕ ಸವಲತ್ತು ಕಲ್ಪಿಸಲಾಗುತ್ತಿದ್ದು, ಅದರ ಸದುಪಯೋಗ ಪಡೆಯಬೇಕು’ ಎಂದರು.
ಪ್ರಯೋಗಾಲಯ ಉದ್ಘಾಟನೆಯ ಅಂಗವಾಗಿ 50 ಮಕ್ಕಳು ವಿಶೇಷವಾಗಿ ಮೆಹಂದಿಯಲ್ಲಿ ವಿಜ್ಞಾನ ಚಿತ್ರಗಳನ್ನು ಬಿಡಿಸಿದರೆ, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಂಗೋಲಿ ಮೂಲಕ ವಿಜ್ಞಾನ ಚಿತ್ರಗಳನ್ನು ಬಿಡಿಸಿದರು. 20 ಮಕ್ಕಳು ವಿವಿಧ ಪ್ರಯೋಗಗಳನ್ನು ಮಾಡಿದರು.
ಶಾಲೆಯ ಉಪಾಪ್ರಾಂಶುಪಾಲರಾದ ನಾಗರತ್ನ.ಎಸ್, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ರಾಜ್, ಸಹ ಕಾರ್ಯದರ್ಶಿ ಮಲ್ಲೇಶ್, ಶಿಕ್ಷಕರಾದ ವೆಂಕಟಾಚಲ, ಸುಧಾಕರ್, ಶೈಲಜಾ, ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.