ADVERTISEMENT

ಮಕ್ಕಳಿಂದ ಪ್ರತಿಫಲ ನಿರೀಕ್ಷಿಸಿದರೆ ನಿರಾಸೆ ಖಚಿತ: ಡಾ.ಎಂ.ಆರ್.ರವಿ

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 16:39 IST
Last Updated 13 ಅಕ್ಟೋಬರ್ 2021, 16:39 IST
ಹಿರಿಯ ನಾಗರಿಕರ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಉದ್ಘಾಟಿಸಿದರು. ವಿವಿಧ ಇಲಾಖೆ ಅಧಿಕಾರಿಗಳಾದ ಸೋಮಶೇಖರ್‌, ಗೀತಾಲಕ್ಷ್ಮಿ, ಚಂದ್ರಶೇಖರ್‌, ನಗರಸಭೆ ಅಧ್ಯಕ್ಷೆ ಆಶಾ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ನಗರಸಭೆ ಉಪಾಧ್ಯಕ್ಷೆ ಸುಧಾ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್‌ ಇದ್ದಾರೆ
ಹಿರಿಯ ನಾಗರಿಕರ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಉದ್ಘಾಟಿಸಿದರು. ವಿವಿಧ ಇಲಾಖೆ ಅಧಿಕಾರಿಗಳಾದ ಸೋಮಶೇಖರ್‌, ಗೀತಾಲಕ್ಷ್ಮಿ, ಚಂದ್ರಶೇಖರ್‌, ನಗರಸಭೆ ಅಧ್ಯಕ್ಷೆ ಆಶಾ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ನಗರಸಭೆ ಉಪಾಧ್ಯಕ್ಷೆ ಸುಧಾ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್‌ ಇದ್ದಾರೆ   

ಚಾಮರಾಜನಗರ: ‘ಪೋಷಕರಾಗಿ ನಮ್ಮ ಜವಾಬ್ದಾರಿಯನ್ನು ಮಾತ್ರ ಮಾಡಬೇಕು. ಅದಕ್ಕೆ ಮಕ್ಕಳಿಂದ ಪ್ರತಿಫಲಾಪೇಕ್ಷೆ ಮಾಡಬಾರದು. ನಿರೀಕ್ಷೆ ಇದ್ದಲ್ಲಿ ನಿರಾಸೆ ಕಟ್ಟಿಟ್ಟ ಬುತ್ತಿ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕ ಸಬಲೀಕರಣ ಕ್ಷೇತ್ರದಲ್ಲಿ ಭಾಗಿಯಾಗಿರುವ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಭಾರತೀಯರು ಭಾವ ಜೀವಿಗಳು. ವಯಸ್ಸಾಗುತ್ತಿದ್ದಂತೆಯೇ ಮಕ್ಕಳು, ಕುಟುಂಬದ ಸದಸ್ಯರನ್ನು ಹೆಚ್ಚೆಚ್ಚು ಹಚ್ಚಿಕೊಳ್ಳುತ್ತಾರೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಾಗಲ್ಲ. ಪೋಷಕರು ತಮ್ಮ ಜವಾಬ್ದಾರಿ ಮುಗಿಸಿ, ವಯಸ್ಸಾಗುತ್ತಿದ್ದಂತೆಯೇ ಮಕ್ಕಳಿಂದ ನಿರ್ದಿಷ್ಟ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ನಮ್ಮಲ್ಲಿ ತಂದೆ–ತಾಯಿಗೆ ಮಕ್ಕಳು ಚಿಕ್ಕವರಾಗಿದ್ದರೂ ಮಕ್ಕಳೇ, ಬೆಳೆದು ದೊಡ್ಡವರಾದರೂ ಮಕ್ಕಳೇ. ಮಕ್ಕಳು ದೂರವಾದರೆ ಮಾನಸಿಕವಾಗಿ ಕುಗ್ಗುವುದರ ಜೊತೆಗೆ ಏಕಾಂಗಿತನ ಅನುಭವಿಸುತ್ತಾರೆ’ ಎಂದರು.

ADVERTISEMENT

‘ಹಿರಿಯರನ್ನು ಗೌರವಿಸುವುದು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿ. ಗೌರವ ಎನ್ನುವುದು ನಮ್ಮ ಮನಸ್ಸಿನಿಂದ ಬರಬೇಕು. ಹಿರಿಯರ ಅನುಭವವೇ ನಮಗೆ ದೊಡ್ಡ ಪಾಠ. ಹಿರಿಯ ನಾಗರಿಕರನ್ನು ತಾತ್ಸಾರ ಮಾಡದೇ ಜವಾಬ್ದಾರಿಯಿಂದ ನೋಡಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ ಮಾತನಾಡಿ ‘ಮಾನವ ಅತಿ ಬುದ್ಧಿವಂತನಾಗುತ್ತಿದ್ದಂತೆ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ವಿಪರ್ಯಾಸ. ಮಕ್ಕಳ ಸುಖಕರ ಜೀವನಕ್ಕೆ ಹಿರಿಯರ ಪರಿಶ್ರಮ ಸಾಕಷ್ಟಿದೆ. ಅಂತಹ ವಯಸ್ಸಾದ ಪೋಷಕರ ಬೇಕು ಬೇಡಗಳನ್ನು ಕೇಳಲಾರದಂತಹ ಪರಿಸ್ಥಿತಿ ಆಧುನಿಕ ಕಾಲದಲ್ಲಿ ನಿರ್ಮಾಣವಾಗಿದೆ’ ಎಂದರು.

ನಗರಸಭೆ ಅಧ್ಯಕ್ಷೆ ಆಶಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿದರು.

ನಗರಸಭೆ ಉಪಾಧ್ಯಕ್ಷೆ ಪಿ.ಸುಧಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷ್ಮೀ, ಅಂಗವಿಕಲರ ಕಲ್ಯಾಣ ಅಧಿಕಾರಿ ಸೋಮಶೇಖರ್‌, ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಇದ್ದರು.

14567 ಸಹಾಯವಾಣಿ

ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು ಹಿರಿಯ ನಾಗರಿಕರ ಸಹಾಯವಾಣಿ ಉಚಿತ (ಎಲ್ಡರ್ ಲೈನ್) ದೂರವಾಣಿ ಸಂಖ್ಯೆ 14567 ಅನ್ನು ಅನಾವರಣಗೊಳಿಸಿದರು.

ಹಿರಿಯ ನಾಗರಿಕರಿಗೆ ಏನೇ ತೊಂದರೆ ಇದ್ದರೂ ಈ ಸಹಾಯವಾಣಿಗೆ ಕರೆ ಮಾಡಿದರೆ ಸಹಾಯ ಮಾಡಲಾಗುತ್ತದೆ ಎಂದು ಸಹಾಯವಾಣಿಯ ಸಿಬ್ಬಂದಿ ಮಾಹಿತಿ ನೀಡಿದರು.

ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಿರಿಯರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರವನ್ನು ವಿತರಿಸಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.