ADVERTISEMENT

ಮನೆ ಬಾಗಿಲಿಗೆ ಸರ್ಕಾರದ ಸೇವೆ

ಮಾರ್ಟ್‌ 2ರಿಂದ ಜಿಲ್ಲೆಯಲ್ಲಿ ‘ಸೇವಾ ಮಿತ್ರ’ ಅನುಷ್ಠಾನ, ಪಿಂಚಣಿ ಸೌಲಭ್ಯ ಕಲ್ಪಿಸಲು ಒತ್ತು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 10:00 IST
Last Updated 29 ಫೆಬ್ರುವರಿ 2020, 10:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಪ್ರಜೆಗಳ ಮನೆ ಬಾಗಿಲಿಗೆ ಸರ್ಕಾರದ ಸೇವೆಯನ್ನು ಒದಗಿಸುವ ಯೋಜನೆ ಜಿಲ್ಲೆಯಲ್ಲಿ ಮಾರ್ಚ್‌ 2ರಿಂದ ಅನುಷ್ಠಾನಕ್ಕೆ ಬರಲಿದೆ. ಜಿಲ್ಲೆಯಲ್ಲಿ ಇದಕ್ಕೆ ‘ಸೇವಾ ಮಿತ್ರ’ ಎಂದು ಹೆಸರಿಡಲಾಗಿದ್ದು, ಆರಂಭದಲ್ಲಿ ಪಿಂಚಣಿ ಸೇವೆಯನ್ನು ಒದಗಿಸಲು ಜಿಲ್ಲಾಡಳಿತ ಒತ್ತು ನೀಡಲಿದೆ.

ಸಾಮಾಜಿಕಭದ್ರತಾ ಯೋಜನೆಯಡಿ ನೀಡಲಾಗುವ ವಿವಿಧ ಪಿಂಚಣಿ ಸೌಲಭ್ಯವನ್ನು ಪಡೆಯಲು ನಾಗರಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶ. ಇದರ ಅಡಿಯಲ್ಲಿ ಫಲಾನುಭವಿಗಳು ಮನೆಯಿಂದಲೇ ಅರ್ಜಿ ಸಲ್ಲಿಸಿ, ಮನೆಯಲ್ಲಿಯೇ ಪಿಂಚಣಿ ಮಂಜೂರಾತಿ ಮಾಡಿಕೊಳ್ಳುವ ಅವಕಾಶವಿದೆ. ಇದರಿಂದ ಕಚೇರಿ ಅಲೆದಾಟ ತಪ್ಪಲಿದ್ದು, ಮಧ್ಯವರ್ತಿಗಳ ಹಾವಳಿಯಿಂದಲೂ ಮುಕ್ತಿ ಸಿಗಲಿದೆ ಎಂಬುದು ಜಿಲ್ಲಾಡಳಿತದ ನಿರೀಕ್ಷೆ.

ಕಂದಾಯ ಇಲಾಖೆಯು ‘ಸೇವಾ ಮಿತ್ರ’ಯೋಜನೆಯನ್ನು ನಿರ್ವಹಿಸಲಿದ್ದು,ಗ್ರಾಮ ಸಹಾಯಕರು ಇನ್ನು ಮುಂದೆ ಸೇವಾ ಮಿತ್ರರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ಯೋಜನೆ, ಮನಸ್ವಿನಿ ಯೋಜನೆ ಹಾಗೂ ಮೈತ್ರಿ ಯೋಜನೆಯ ಪಿಂಚಣಿಗಾಗಿ ಈ ಸೇವೆ ಪಡೆಯಬಹುದು. ಜಿಲ್ಲೆಯಲ್ಲಿಪ್ರತಿ ತಿಂಗಳು ಸರಾಸರಿ 1000 ಮಂದಿ ವಿವಿಧ ಪಿಂಚಣಿಗಳಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.

ADVERTISEMENT

ಸೇವೆ ಪಡೆಯುವ ವಿಧಾನ: ಸೇವಾ ಮಿತ್ರ ಸೌಕರ್ಯ ಪಡೆಯಲು ಬಯಸುವವರು ತಮ್ಮ ತಾಲ್ಲೂಕಿನ ಕಂಟ್ರೋಲ್ ರೂಂಗೆ ಕರೆ ಮಾಡಿ ಪಿಂಚಣಿಗಾಗಿ ಮನವಿ ಮಾಡಿದರೆ ಸಾಕು. ಗ್ರಾಮ ಸಹಾಯಕರು ಕರೆ ಮಾಡಿದವರ ಮನೆಗೆ ಖುದ್ದು ತೆರಳಿ ಅಗತ್ಯ ದಾಖಲೆಗಳನ್ನು ಪಡೆಯಲಿದ್ದಾರೆ.

ಎರಡನೇ ಹಂತದಲ್ಲಿ ಅರ್ಜಿಗಳನ್ನು ನಿಯಮಾನುಸಾರ ಶೀಘ್ರವಾಗಿ ಕಚೇರಿಯಲ್ಲಿ ಪರಿಶೀಲಿಸಿ, ಅರ್ಹರಿಗೆ ಪಿಂಚಣಿ ಮಂಜೂರು ಮಾಡಲಾಗುತ್ತದೆ. ನಂತರ ಗ್ರಾಮ ಸಹಾಯಕರು ಫಲಾನುಭವಿಗಳ ಮನೆಗೆ ಭೇಟಿ ನೀಡಿ ಮಂಜೂರಾತಿ ಆದೇಶವನ್ನು ತಲು‍ಪಿಸಲಿದ್ದಾರೆ. ಮಂಜೂರಾದ ಬಳಿಕ ಪಿಂಚಣಿ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ.

ಜಿಲ್ಲಾ ಸಮಿತಿ: ಯೋಜನೆ ಅನುಷ್ಠಾನ ಹಾಗೂ ಸಮರ್ಪಕ ಕಾರ್ಯನಿರ್ವಹಣೆಗಾಗಿ ಜಿಲ್ಲಾ ಸಮಿತಿ ರಚಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೋಡೆಲ್ ಅಧಿಕಾರಿಯಾಗಿ, ಉಪ ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

‘ಸರ್ಕಾರದ ಆಶಯದಂತೆ ಅಶಕ್ತರಿಗೆ ಸಾಮಾಜಿಕ ಭದ್ರತೆ ನೀಡುವುದರೊಂದಿಗೆ ಘನತೆಯ ಜೀವನ ನಡೆಸಲು ಪೂರಕವಾಗಿರುವ ಸೇವಾ ಮಿತ್ರ ಯೋಜನೆಯನ್ನು ಜಿಲ್ಲೆಯ ಜನರು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದ್ದಾರೆ.

ಸಲ್ಲಿಸಬೇಕಾದ ದಾಖಲೆಗಳು

ಸೇವಾ ಮಿತ್ರ ಯೋಜನೆಯಡಿ ಪಿಂಚಣಿ ಸವಲತ್ತು ಪಡೆಯಲು ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು.

ಅಂಗವಿಕಲ ವೇತನಕ್ಕಾಗಿ ಅಂಗವಿಕಲ ಪ್ರಮಾಣ ಪತ್ರ, ಮನಸ್ವಿನಿ ಸೌಲಭ್ಯಕ್ಕಾಗಿ ಅವಿವಾಹಿತರು ಅಥವಾ ವಿಚ್ಛೇದಿತರು ಎಂಬುದಕ್ಕೆ ಸ್ವಯಂ ಘೋಷಿತ ಪ್ರಮಾಣ ಪತ್ರ ಹಾಗೂ ಮೈತ್ರಿ ಯೋಜನೆಗಾಗಿ ನೋಂದಾಯಿತ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಹೆಚ್ಚುವರಿಯಾಗಿ ಸಲ್ಲಿಸಬೇಕಾಗುತ್ತದೆ. ಜತೆಗೆ ಗ್ರಾಮ ಲೆಕ್ಕಾಧಿಕಾರಿಯಿಂದ ವಾಸಸ್ಥಳ ಪ್ರಮಾಣ ಪತ್ರ ಮತ್ತು ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನೂ ಒದಗಿಸಬೇಕು.

ತಾಲ್ಲೂಕು ಕಂಟ್ರೋಲ್ ರೂಂ ವಿವರ

ಸೇವಾ ಮಿತ್ರಕ್ಕಾಗಿ ಮನವಿ ಸಲ್ಲಿಸಲು ಆಯಾ ತಾಲ್ಲೂಕಿನಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ರಜಾ ದಿನಗಳನ್ನು ಬಿಟ್ಟು ಉಳಿದೆಲ್ಲಾ ದಿನಗಳ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಕಂಟ್ರೋಲ್ ರೂಂ ಕಾರ್ಯನಿರ್ವಹಿಸಲಿದೆ.

ಚಾಮರಾಜನಗರ: 08226-222046, ಕೊಳ್ಳೇಗಾಲ: 08224-252042, ಗುಂಡ್ಲುಪೇಟೆ: 08229-222225, ಯಳಂದೂರು: 08226-240029 ಹಾಗೂ ಹನೂರು:08224-268032

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.