ADVERTISEMENT

ಚಾಮರಾಜನಗರ: 70 ಹೊಸ ಪ್ರಕರಣ, ಒಂದು ಸಾವು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 15:19 IST
Last Updated 16 ಏಪ್ರಿಲ್ 2021, 15:19 IST
ಜಿಲ್ಲೆಯ ಕೋವಿಡ್‌ ಲಸಿಕಾ ಕೇಂದ್ರದಲ್ಲಿ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ಸಿಬ್ಬಂದಿ ಲಸಿಕೆ ನೀಡುತ್ತಿರುವುದು
ಜಿಲ್ಲೆಯ ಕೋವಿಡ್‌ ಲಸಿಕಾ ಕೇಂದ್ರದಲ್ಲಿ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ಸಿಬ್ಬಂದಿ ಲಸಿಕೆ ನೀಡುತ್ತಿರುವುದು   

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 70 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. 29 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 345ಕ್ಕೆ ಏರಿಕೆಯಾಗಿದೆ. ಈ ಪೈಕಿ 200 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐಸಿಯುನಲ್ಲಿ ದಾಖಲಾಗುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದ್ದು, ಸದ್ಯ 16 ಮಂದಿ ಇದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ 58 ವರ್ಷದ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾರೆ. ಇವರು 15ರಂದು ಗುಂಡ್ಲುಪೇಟೆಯ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಕೋವಿಡ್‌ ಇರುವುದು ದೃಢಪಟ್ಟಿತ್ತು. ತಕ್ಷಣ ಅವರನ್ನು ನಗರದ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾಡಳಿತದ ವರದಿ ಹೇಳಿದೆ. ‌ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 116ಕ್ಕೆ ಏರಿದೆ. ಇತರ ಕಾರಣಗಳಿಂದ 20 ಜನರು ಅಸುನೀಗಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಈವರೆಗೆ 7,630 ಪ್ರಕರಣಗಳು ವರದಿಯಾಗಿವೆ. 7,149 ಮಂದಿ ಗುಣಮುಖರಾಗಿದ್ದಾರೆ. ಶುಕ್ರವಾರ 772 ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು,687 ವರದಿ ನೆಗೆಟಿವ್‌ ಬಂದಿವೆ. 75 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಮೂರು ಪ್ರಕರಣಗಳು ಮೈಸೂರಿಗೆ ಸೇರಿದ್ದರೆ, ಎರಡು ಪ್ರಕರಣಗಳಲ್ಲಿ ಸೋಂಕಿತರ ವಿವರ ಪತ್ತೆಯಾಗಿಲ್ಲ.

ಕೊಳ್ಳೇಗಾಲ ಡಿವೈಎಸ್‌ಪಿಗೆ ಕೋವಿಡ್‌:ಕೊಳ್ಳೇಗಾಲ‌ ಡಿವೈಎಸ್ಪಿ ಹಾಗೂ ನಗರದ ಪಿಎಸ್ಐ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

‘ಎರಡು ದಿನಗಳ ಹಿಂದೆ ಇವರಿಬ್ಬರಿಗೂ ನೆಗಡಿ, ಕೆಮ್ಮು, ಗಂಟಲು ನೋವು ಕಾಣಿಸಿಕೊಂಡಿತ್ತು. ಗುರುವಾರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಈಗ ಕೋವಿಡ್ ದೃಡಪಟ್ಟಿದೆ. ಇವರು ಹೋಂ‌ ಐಸೋಲೇಷನ್‌ನಲ್ಲಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ರೆಮ್ಡಿಸಿವರ್ ಪೂರೈಕೆಗೆ ಕ್ರಮ: ಸಚಿವ

ತೀವ್ರ ರೀತಿಯ ರೋಗ ಲಕ್ಷಣ ಹೊಂದಿರುವ ಕೋವಿಡ್‌ ರೋಗಿಗಳಿಗೆ ನೀಡಲಾಗುವ ರೆಮ್ ಡಿಸಿವರ್ ಚುಚ್ಚುಮದ್ದು ಕೊರತೆ ಕಂಡು ಬಂದಿದ್ದು, ಈ ಬಗ್ಗೆ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.

ಹನೂರು ತಾಲ್ಲೂಕಿನ ಲೊಕ್ಕನಹಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ರೆಮ್ಡಿಸಿವರ್‌‌ ಕೊರತೆ ಇರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಪೂರೈಸಲು ಕ್ರಮ ವಹಿಸಲಾಗುವುದು’ ಎಂದರು.

‘ರೆಮ್ಡಿಸಿವರ್ ಚುಚ್ಚುಮದ್ದಿನ ಕೊರತೆ ರಾಜ್ಯದ ಎಲ್ಲ ಕಡೆ ಕೊರತೆ ಇದೆ.‌ ಜಿಲ್ಲೆಗೆ ಬೇಕಾಗುವಷ್ಟು ಚಿಕಿತ್ಸೆ ಪೂರೈಕೆ ಮಾಡುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತನಾಡುತ್ತೇನೆ. ರೆಮ್ಡಿಸಿವರ್‌ಗೆ ಪರ್ಯಾಯವಾಗಿ ಮತ್ತೊಂದು ಔಷಧ ಬರುತ್ತಿದ್ದು ಆ ಬಗ್ಗೆ ಕೂಡ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.