ಕೊಳ್ಳೇಗಾಲ: 68 ವರ್ಷಗಳಿಂದ ನಿರಂತರವಾಗಿ ಹೆಣ್ಣುಮಕ್ಕಳಿಗೆ ಜ್ಞಾನ ಧಾರೆ ಎರೆಯುತ್ತಾ ಬಂದಿರುವ ನಗರದ ಶ್ರೀಮತಿ ವಸಂತ ಕುಮಾರಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ (ಎಸ್‌ವಿಕೆ) ಬೋಧನೆ, ಕ್ರೀಡಾ ಚಟುವಟಿಕೆ ಹಾಗೂ ಸೌಲಭ್ಯಗಳ ವಿಚಾರದಲ್ಲಿ ತಾಲ್ಲೂಕಿನಲ್ಲೇ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.
1951ರಲ್ಲಿ ಅಂದಿನ ತಮಿಳುನಾಡಿನ ಸರ್ಕಾರದ ಅವಧಿಯಲ್ಲಿ ಮುಡಿಗುಂಡದ ಗುರುಕಾರ್ ಮಾದಪ್ಪ ಎಂಬುವವರು ಅವರ ತಂಗಿ ವಸಂತ ಕುಮಾರಿ ಅವರ ನೆನಪಿಗಾಗಿ ಈ ಶಾಲೆಯನ್ನು ಪ್ರಾರಂಭಿಸಿದರು. ತಾಲ್ಲೂಕಿನ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳಿಗೆ ಹೋಗಬೇಕೆಂಬುದು ಅವರ ಮಹದಾಸೆಯಾಗಿತ್ತು.ಕೆಲವು ವರ್ಷಗಳ ಬಳಿಕ ಶಾಲೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದರು.
‘ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ಐಎಎಸ್, ಕೆಎಎಸ್ ಸೇರಿದಂತೆ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ’ ಎಂದು ಹೇಳುತ್ತಾರೆ ಶಿಕ್ಷಕ ಉಮಾಶಂಕರ್.
2001ರಲ್ಲಿ ಶಾಲೆಯಲ್ಲಿ 1,377 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಈಗ ಈ ಸಂಖ್ಯೆ 320ಕ್ಕೆ ಇಳಿದಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
ಈ ಶಾಲೆಯಲ್ಲಿ 13 ಮಂದಿ ನುರಿತ ಶಿಕ್ಷಕರು ಇದ್ದಾರೆ. 17 ಕೊಠಡಿ, ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಅಗತ್ಯದಷ್ಟು ಶೌಚಾಲಯ, ಕೈತೋಟ, ಉತ್ತಮವಾದ ಆಟದ ಮೈದಾನ ಸೇರಿದಂತೆ ಅನೇಕ ಸೌಕರ್ಯಗಳನ್ನು ಹೊಂದಿದೆ. ವೃತ್ತಿ ಶಿಕ್ಷಣ ಕೌಶಲ ಭರಿತ ತರಬೇತಿ ಕೇಂದ್ರ ಹೊಂದಿದ ತಾಲ್ಲೂಕಿನ ಏಕೈಕ ಶಾಲೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.
ಸಾಧಕರ ಶಾಲೆ: ಈ ಶಾಲೆಯ ಮಕ್ಕಳು ವಿಜ್ಞಾನದ ವಿಷಯದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ. ಸತತ ಮೂರು ವರ್ಷಗಳಿಂದ ರಾಜ್ಯಮಟ್ಟದ ಹಾಕಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ತ್ರೋಬಾಲ್, ಟೇಬಲ್ ಟೆನಿಸ್, ಚೆಸ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.
ಕರಾಟೆ ತರಬೇತಿ: ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಶಾಲೆಯಲ್ಲಿ ಪ್ರತಿನಿತ್ಯ ಉಚಿತ ಕರಾಟೆ ಹೇಳಿಕೊಡಲಾಗುತ್ತಿದೆ. ಆಸಕ್ತ ಮಕ್ಕಳು ತರಬೇತಿಯಲ್ಲಿ ಭಾಗವಹಿಸಬಹುದು. ತರಬೇತುದಾರ ನಂಜುಂಡಸ್ವಾಮಿ ಅವರ ಮಾರ್ಗದರ್ಶನಲ್ಲಿ ಹೆಣ್ಣು ಮಕ್ಕಳು ಕರಾಟೆಯಲ್ಲಿ ಪಳಗುತ್ತಿದ್ದಾರೆ.
ಇಲ್ಲಿನ ನಾಲ್ವರು ವಿದ್ಯಾರ್ಥಿನಿಯರು ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ ಇಬ್ಬರು ಪ್ರಶಸ್ತಿಯನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆ ಮುಗಿದ ನಂತರ 10 ನಿಮಿಷಗಳ ಕಾಲ ಧ್ಯಾನ ಮಾಡುವ ಹವ್ಯಾಸವನ್ನು ಇಲ್ಲಿನ ಮಕ್ಕಳು ಬೆಳೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.