ADVERTISEMENT

ಶ್ರೀಕಂಠಪುರ: ಚಿಕ್ಕ– ಚೊಕ್ಕ ಹಸಿರು ಶಾಲೆ

ಗುಂಡ್ಲುಪೇಟೆ: ಅರಣ್ಯದಂಚಿನ ಸರ್ಕಾರಿ ಶಾಲೆಯಲ್ಲಿ ವಿವಿಧ ಸೌಲಭ್ಯಗಳು

ಮಲ್ಲೇಶ ಎಂ.
Published 6 ಸೆಪ್ಟೆಂಬರ್ 2019, 19:45 IST
Last Updated 6 ಸೆಪ್ಟೆಂಬರ್ 2019, 19:45 IST
ಹಸಿರು ಹೊದ್ದಿರುವ ಶ್ರೀಕಂಠಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಹಸಿರು ಹೊದ್ದಿರುವ ಶ್ರೀಕಂಠಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ   

ಗುಂಡ್ಲುಪೇಟೆ:ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಓಂಕಾರ ವಲಯದ ಅಂಚಿನಲ್ಲಿರುವ ಶ್ರೀಕಂಠಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಸಿರು ಶಾಲೆ‌ ಎಂದೇ ಖ್ಯಾತಿ. ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ‘ಹಸಿರು ಶಾಲೆ’ ಎಂಬ ಗರಿಗೆ ಸತತ ನಾಲ್ಕು ವರ್ಷಗಳಿಂದ ಈ ಶಾಲೆ ಪಾತ್ರವಾಗುತ್ತಿದೆ.

ಶಾಲೆಯಲ್ಲಿ 1ರಿಂದ 5ನೇ ತರಗತಿಯರೆಗೆ 27 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಇಬ್ಬರು ಶಿಕ್ಷಕರು ಮಕ್ಕಳ ಕನಸನ್ನು ಪೋಷಣೆ ಮಾಡುತ್ತಿದ್ದಾರೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಾಂತಪ್ಪ ಮತ್ತು ಮಹದೇವಸ್ವಾಮಿ ಇಬ್ಬರೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾದವರು.

ಬೋಧಕರು ಹಾಗೂ ಮಕ್ಕಳು ಸೇರಿಶಾಲೆಯ ಸುತ್ತ ವಿವಿಧ ಜಾತಿಯ ಸಸ್ಯಗಳು, ಮರಗಳನ್ನು ಬೆಳೆಸಿದ್ದಾರೆ. ಶಿಕ್ಷಕರು ಮತ್ತು ದಾನಿಗಳ ಸಹಾಯ ಪಡೆದು ವಿದ್ಯಾರ್ಥಿಗಳ ಸುರಕ್ಷತೆಗೆ ತಂತಿ ಬೇಲಿಯನ್ನೂ ಅಳವಡಿಸಿದ್ದಾರೆ.

ADVERTISEMENT

‘ಇಲ್ಲಿ ಓದುವ ಮಕ್ಕಳಿಗೆ ಪ್ರತಿ ವರ್ಷ ಕಲಿಕಾ ಸಾಮಗ್ರಿಗಳನ್ನು ಶಾಲೆಯಿಂದಲೇ ನೀಡಲಾಗುತ್ತದೆ. ಇದಕ್ಕಾಗಿ ದಾನಿಗಳು ಸಹಾಯ ಮಾಡುತ್ತಾರೆ’ ಎಂದು ಮುಖ್ಯ ಶಿಕ್ಷಕ ಶಾಂತಪ್ಪ ತಿಳಿಸಿದರು.

ಇಲ್ಲಿ ಜ್ಞಾನಾರ್ಜನೆ ಮಾಡಿದ ಅನೇಕ ಮಕ್ಕಳು ನವೋದಯ, ಕಸ್ತೂರಿ ಬಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಆದರ್ಶ ವಿದ್ಯಾಲಯಗಳಿಗೆ ಆಯ್ಕೆಯಾಗಿದ್ದಾರೆ.

‘ಕಂಪ್ಯೂಟರ್, ಪ್ರೊಜೆಕ್ಟರ್‌, ಸ್ಕ್ರೀನ್ ಪ್ರಿಂಟರ್‌ಗಳನ್ನು ಬಳಸಿ ಬೋಧನೆ ಮಾಡಿ ಕಲಿಕೆ ಸುಲಭಗೊಳಿಸಲಾಗುತ್ತದೆ. ಶೌಚಾಲಯ, ಗ್ರಂಥಾಲಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಇದೆ. ಶಾಲಾಭಿವೃದ್ದಿ ಹಾಗೂ ಶಾಲಾ ಮಂತ್ರಿಮಂಡಲ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ತಿಂಗಳಿಗೊಮ್ಮೆ ಓಂಕಾರ ವಾಣಿ ಎಂಬ ಮಾಸ ಪತ್ರಿಕೆಯನ್ನು ವಿದ್ಯಾರ್ಥಿಗಳು ಹೊರ ತರುತ್ತಾರೆ’ ಎಂದು ಶಿಕ್ಷಕ ಮಹದೇವಸ್ವಾಮಿ ಅವರು ತಿಳಿಸಿದರು.

ಇಲ್ಲಿನ ಸಹ ಶಿಕ್ಷಕರಾದ ಎಂ.ಮಹದೇವಸ್ವಾಮಿ ಅವರು ಈ ವರ್ಷ ಜಿಲ್ಲೆಯ ಅತ್ಯುತ್ತಮ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗಿದೆ.

ವಿದ್ಯಾರ್ಥಿಗಳ ಸಹಕಾರ ಬ್ಯಾಂಕ್!

ವಿದ್ಯಾರ್ಥಿಗಳೇ ಸ್ಥಾಪನೆ ಮಾಡಿಕೊಂಡಿರುವ ಸಹಹಾರ ಬ್ಯಾಂಕ್‌ ಕಾರ್ಯಾಚರಿಸುವುತ್ತಿರುವುದು ಈ ಶಾಲೆಯ ವಿಶೇಷ. ಇಲ್ಲಿನ ಮಕ್ಕಳು ಬ್ಯಾಂಕ್‌ ಮೂಲಕ ₹35 ಸಾವಿರ ಉಳಿತಾಯ ಮಾಡಿಕೊಂಡಿದ್ದಾರೆ.

ಮಕ್ಕಳು ತಮಗೆ ಸಿಗುವ ಚಿಲ್ಲರೆ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುತ್ತಾರೆ. ಅವರಿಗೆ ಅವಶ್ಯಕತೆ ಇದ್ದಾಗ ಹಣ ಕೊಡಲಾಗುತ್ತದೆ. ಪ್ರವಾಸ ಹೋಗುವಾಗ, ವಿಶೇಷ ಸಾಮಗ್ರಿಗಳನ್ನು ಕೊಳ್ಳುವ ಸಮಯದಲ್ಲಿ ಅಥವಾ ತುರ್ತು ಸಮಯದಲ್ಲಿ ಹಣವನ್ನು ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.