ADVERTISEMENT

ಪಠ್ಯದೊಂದಿಗೆ ಹಸಿರು ಉಳಿಸುವ ಪಾಠ

ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಹೊಸಳ್ಳಿ ಶಾಲೆಯಲ್ಲಿ ಪ‍ರಿಸರ ಶಿಕ್ಷಣಕ್ಕೂ ಒತ್ತು

ಬಿ.ಬಸವರಾಜು
Published 16 ನವೆಂಬರ್ 2019, 12:57 IST
Last Updated 16 ನವೆಂಬರ್ 2019, 12:57 IST
ಕೈತೋಟದ ನಿರ್ವಹಣೆಯಲ್ಲಿ ತೊಡಗಿರುವ ಮಕ್ಕಳು
ಕೈತೋಟದ ನಿರ್ವಹಣೆಯಲ್ಲಿ ತೊಡಗಿರುವ ಮಕ್ಕಳು   

ಹನೂರು: ಮಕ್ಕಳ ಶೈಕ್ಷಣಿಕ ಸಾಧನೆಯಲ್ಲಿ ಕಲಿಕೆಯ ಪರಿಸರ ನಿರ್ವಹಿಸುವ ಪಾತ್ರ ದೊಡ್ಡದು. ಶಾಲೆಯಲ್ಲಿ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿ ಹಸಿರು ಪರಿಸರವೂ ಇದ್ದರೆ ಮಕ್ಕಳ ಸಾಧನೆ ಉತ್ತಮವಾಗಿರುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ತಾಲ್ಲೂಕಿನ ಹೊಸಳ್ಳಿ ಶಾಲೆಯೂ ಇದಕ್ಕೆ ಒಂದು ನಿದರ್ಶನವಾಗಬಲ್ಲುದು.

ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಮಕ್ಕಳಲ್ಲಿ ಪರಿಸರದ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.

91 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಈ ಶಾಲೆಯು ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಹಚ್ಚ ಹಸಿರಿನ ಪರಿಸರ ಶಾಲೆಯ ಅಂದವನ್ನು ಹೆಚ್ಚಿಸಿದೆ. ಕೈತೋಟ, ಗಿಡ ನೆಡುವಿಕೆ, ಪರಿಸರ ಸಂರಕ್ಷಣೆಯ ಚಟುವಟಿಕೆಗಳಿಗೆ ಬೋಧಕರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ.

ADVERTISEMENT

‘ಶಾಲೆ ಸುತ್ತಲೂ ಅರಣ್ಯದಿಂದಲೇ ಆವೃತವಾಗಿದೆ. ತಗರತಿ ಬಿಟ್ಟರೆ ಪರಿಸರವೇ ಮತ್ತೊಂದು ಪಾಠ ಶಾಲೆ ಎನ್ನುವಷ್ಟರ ಮಟ್ಟಿಗೆ ನಮ್ಮ ಮಕ್ಕಳು ಇಲ್ಲಿನ ಪರಿಸರದೊಂದಿಗೆ ಬೆರೆತುಹೋಗಿದ್ದಾರೆ. ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗೆಕೊಠಡಿಗಳ ಸುತ್ತಲೂ ಇದ್ದ ಖಾಲಿ ಸ್ಥಳದಲ್ಲಿ ಗಿಡ ಬೆಳೆಸುವ ಅಭ್ಯಾಸ ಮಾಡಿಸಿದ ಪರಿಣಾಮ ಇಂದು ಶಾಲೆಯಲ್ಲಿ ಒಂದು ಉತ್ತಮ ಕೈತೋಟ ನಿರ್ಮಾಣವಾಗಿದೆ. ಬೋಧಕರು ಶಿಕ್ಷಣದ ಜೊತೆಗೆ ಪರಿಸರ, ಕೃಷಿಯ ತಿಳಿಹೇಳುವ ಮೂಲಕ ಮಕ್ಕಳಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುತ್ತಿದ್ದಾರೆ’ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯ ಮಹಾದೇವಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೈತೋಟ ನಿರ್ವಹಣೆ: ಕೈತೋಟದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ವಿದ್ಯಾರ್ಥಿಗಳದ್ದು. ಇದಕ್ಕಾಗಿ ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಾಗಿ ವಿಭಜಿಸಲಾಗಿದೆ.ನೀರಿನ ಮಿತಬಳಕೆ, ನಿರ್ವಹಣೆ, ಸ್ವಚ್ಛತೆ ಸೇರಿದಂತೆ ವಿವಿಧ ಹೊಣೆಗಳನ್ನು ಒಂದೊಂದು ಗುಂಪಿಗೆ ವಹಿಸಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳೇ ಇದನ್ನು ನಿರ್ವಹಣೆ ಮಾಡುತ್ತಾರೆ.

ವಿರಾಮದ ಸಮಯದಲ್ಲಿ ವಿದ್ಯಾರ್ಥಿಗಳಿಗೆಸಸ್ಯಪ್ರಭೇದಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡುವ ಉದ್ದೇಶದಿಂದ ಆರಂಭವಾದ ಗಿಡ ಬೆಳೆಸುವ ಪ್ರವೃತ್ತಿ ದಿನಗಳೆದಂತೆ ವಿದ್ಯಾರ್ಥಿಗಳಿಗೆ ಅಭ್ಯಾಸವಾಗಿ ಹೋಗಿದೆ.

ಬಿಸಿಯೂಟಕ್ಕೆ ತಾಜಾ ಸೊ‍ಪ್ಪು ತರಕಾರಿ

ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತಾಜಾ ಸೊಪ್ಪು ತರಕಾರಿಗಳನ್ನು ಶಾಲೆಯಲ್ಲಿಯೇ ಬೆಳೆಯಲಾಗುತ್ತದೆ.

‘ಗಿಡಗಳಿಗೆ ನಮ್ಮ ಸ್ವಂತ ಹಣ ವ್ಯಯಿಸಿ ಹನಿ ನೀರಾವರಿ, ತುಂತುರು ನೀರಾವರಿ ವ್ಯವಸ್ಥೆ ಮಾಡಿದ್ದೇವೆ. ಸಸ್ಯ ಪ್ರಭೇದಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಉದ್ದೇಶದಿಂದ ಲಭ್ಯವಿರುವ ಕಡೆ ಗಿಡಗಳನ್ನು ತಂದು ನೆಡಲಾಗಿದೆ. ಮರದ ಎಲೆ, ಇನ್ನಿತರ ತ್ಯಾಜ್ಯ ಬಳಸಿ ಸಸ್ಯಗಳಿಗೆ ಬೇಕಾದ ಸಾವಯವ ಗೊಬ್ಬರವನ್ನು ಇಲ್ಲಿಯೇ ತಯಾರಿಸಿಕೊಳ್ಳುತ್ತಿದ್ದೇವೆ’ ಎಂದು ಮುಖ್ಯ ಶಿಕ್ಷಕ ಚಿನ್ನಪ್ಪಯ್ಯ ಹೇಳಿದರು.

ಮೊದಲಿಗೆ ಹೂ ಹಾಗೂ ಇನ್ನಿತರ ಗಿಡಗಳನ್ನು ಮಾತ್ರ ಬೆಳೆಸುತ್ತಿದ್ದೆವು. ಈಗ ತರಕಾರಿಗಳನ್ನೂ ಬೆಳೆಯುತ್ತಿದ್ದೇವೆ. ಬಿಸಿಯೂಟಕ್ಕೆ ಇದನ್ನು ಬಳಸಿಕೊಳ್ಳುತ್ತಿದ್ದೇವೆ.
ಸಂಗೀತಾ, 7ನೇ ತರಗತಿ

ತರಗತಿ ಆರಂಭವಾಗುವುದಕ್ಕೂ ಮುನ್ನ ಗಿಡಗಳನ್ನು ನೆಡುವುದು, ನೀರು ಹಾಕುವುದು ಮಾಡುತ್ತೇನೆ. ರಜಾ ಸಮಯದಲ್ಲಿ ಶಾಲೆಗೆ ಬಂದು ನೋಡಿಕೊಳ್ಳುತ್ತೇನೆ
ಲೋಕೇಶ್, 6ನೇ ತರಗತಿ

ಆವರಣದಲ್ಲಿ ಖಾಲಿಯಿರುವ ಸ್ಥಳಗಳಲ್ಲಿ ಗಿಡ ನೆಟ್ಟು ಪರಿಸರದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿದ್ದೇವೆ. ಮುಖ್ಯಶಿಕ್ಷಕು ಹಾಗೂ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ
ಗಿರೀಶ್, ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.