ADVERTISEMENT

ಚಾಮರಾಜನಗರ: ಧಾರ್ಮಿಕ ಪ್ರವಾಸೋದ್ಯಮಕ್ಕೆ ‘ಶಕ್ತಿ’ ಉತ್ತೇಜನ

ಧಾರ್ಮಿಕ ಕ್ಷೇತ್ರ, ಉತ್ಸವ, ಜಾತ್ರೆಗಳಿಗೆ ಭೇಟಿನೀಡುವ ಭಕ್ತರ ಸಂಖ್ಯೆ ಹೆಚ್ಚಳ

ಬಾಲಚಂದ್ರ ಎಚ್.
Published 9 ಮೇ 2025, 8:38 IST
Last Updated 9 ಮೇ 2025, 8:38 IST
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು (ಸಂಗ್ರಹ ಚಿತ್ರ)
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು (ಸಂಗ್ರಹ ಚಿತ್ರ)   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ, ಐತಿಹಾಸಿಕ ಜಾತ್ರೆ, ಉತ್ಸವಗಳಿಗೆ ಭೇಟಿನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಧಾರ್ಮಿಕ ಕ್ಷೇತ್ರಗಳು ಭಕ್ತರಿಂದ ಗಿಜಿಗುಡುತ್ತಿವೆ, ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.

ಮಾದಪ್ಪನ ದರ್ಶನಕ್ಕೆ ಭಕ್ತ ಸಾಗರ: ಪ್ರಸಿದ್ಧ ಯಾತ್ರಾ ಸ್ಥಳ, ‍ಪ‍ವಾಡ ಪುರುಷ ಮಾದಪ್ಪನ ನೆಲೆಯಾಗಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿವರ್ಷ ರಾಜ್ಯ, ಹೊರ ರಾಜ್ಯ ಸೇರಿದಂತೆ ಹಲವೆಡೆಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಶ್ರೀಕ್ಷೇತ್ರದಲ್ಲಿ ನಡೆಯುವ ಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರೋತ್ಸವಗಳು ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿವೆ.

ಧಾರ್ಮಿಕ ಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ದೇವಸ್ಥಾನಗಳ ಆದಾಯವೂ ಹೆಚ್ಚಾಗಿದೆ. ಜಿಲ್ಲೆಯ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಯ ಜೊತೆಗೆ ಹೋಟೆಲ್‌, ವಸತಿಗೃಹ, ಪ್ರವಾಸಿ ಟ್ಯಾಕ್ಸಿ ಸೇರಿದಂತೆ ಇತರೆ ಅವಲಂಬಿತ ಉದ್ಯಮಗಳು ಆರ್ಥಿಕವಾಗಿ ಪುನಶ್ಚೇತನಗೊಳ್ಳುತ್ತಿವೆ.

ADVERTISEMENT

ಪ್ರವಾಸೋದ್ಯಮಕ್ಕೆ ‘ಶಕ್ತಿ’: ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆ ಜಾರಿಗೊಳಿಸಿದ ನಂತರ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳು ಹಾಗೂ ಉತ್ಸವಗಳಿಗೆ ಭಕ್ತಸಾಗರವೇ ಹರಿದು ಬರುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. 2024ರಲ್ಲಿ ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ನಡೆದ ಶಿವರಾತ್ರಿ ಜಾತ್ರೋತ್ಸವಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ ಭಕ್ತರ ಸಂಖ್ಯೆ 4.27 ಲಕ್ಷ.

2025ರಲ್ಲಿ ನಡೆದ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರ ಸಂಖ್ಯೆ ಬರೋಬ್ಬರಿ 7.19ಲಕ್ಷ. ಒಂದು ವರ್ಷಕ್ಕೆ ಸಾರಿಗೆ ಬಸ್‌ಗಳಲ್ಲಿ ಸಂಚರಿಸಿದ ಪ್ರಯಾಣಿಕರ ಸಂಖ್ಯೆ 2.92 ಲಕ್ಷ ಏರಿಕೆಯಾಗಿದೆ. 

ಹಾಗೆಯೇ, 2024ರಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಯುಗಾದಿ ಜಾತ್ರೋತ್ಸವದಲ್ಲಿ ಭಾಗವಹಿಸಲು 1.04 ಲಕ್ಷ ಭಕ್ತರು ಸಾರಿಗೆ ಬಸ್‌ಗಳಲ್ಲಿ ಸಂಚರಿಸಿದ್ದಾರೆ. 2025ರಲ್ಲಿ 1.24 ಭಕ್ತರು ಪಾಲ್ಗೊಂಡಿದ್ದಾರೆ.

ಚಿಕ್ಕಲ್ಲೂರು ಜಾತ್ರೆ: ಮಂಟೇಸ್ವಾಮಿ ಪರಂಪರೆಯನ್ನು ಅನೂಚೂನವಾಗಿ ಪಾಲಿಸಿಕೊಂಡು ಬಂದಿರುವ ಚಿಕ್ಕಲ್ಲೂರು ಜಾತ್ರಾ ಮಹೋತ್ಸವವೂ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. 2024ರಲ್ಲಿ ನಡೆದ ಚಿಕ್ಕಲ್ಲೂರು ಜಾತ್ರೆಯಲ್ಲಿ ಭಾಗವಹಿಸಲು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 1.22 ಲಕ್ಷ ಭಕ್ತರು ಪ್ರಯಾಣಿಸಿದ್ದರೆ, 2025ರ ಜಾತ್ರೆಯಲ್ಲಿ 1.44 ಲಕ್ಷ ಭಕ್ತರು ತೆರಳಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೂ ನಿರೀಕ್ಷೆಗೂ ಮೀರಿ ಭಕ್ತರು ಭೇಟಿನೀಡಿದ್ದಾರೆ. ಸಾರಿಗೆ ನಿಗಮದ ಬಸ್‌ಗಳ ಹೊರತಾಗಿ ಕಾರು, ಬೈಕ್‌, ತ್ರಿಚಕ್ರ ವಾಹನ, ಟೆಂಪೋ ಸಹಿತ ಇತರೆ ವಾಹನಗಳಲ್ಲಿ ಲಕ್ಷಾಂತರ ಭಕ್ತರು ಧಾರ್ಮಿಕ ಕ್ಷೇತ್ರಗಳಿಗೆ ತೆರಳಿದ್ದಾರೆ.

ಭಕ್ತರ ಸಂಖ್ಯೆ ಹಚ್ಚಳ

ಶಕ್ತಿ ಯೋಜನೆ ಜಾರಿಯಾದ ಬಳಿಕ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿನೀಡುವ ಭಕ್ತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ವಿಶೇಷವಾಗಿ ಮಲೆ ಮಹದೇಶ್ವರನ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಪ್ರತಿ ಅಮಾವಾಸ್ಯೆ ಸಂದರ್ಭ ಬೆಟ್ಟಕ್ಕೆ 130ಕ್ಕೂ ಹೆಚ್ಚು ಬಸ್‌ಗಳನ್ನು ಓಡಿಸುತ್ತಿದ್ದರೂ ಸಾಲುತ್ತಿಲ್ಲ. ಶಿವರಾತ್ರಿ ಜಾತ್ರೋತ್ಸವಕ್ಕೆ 600 ಬಸ್‌ಗಳನ್ನು ಹಾಕಲಾಗಿತ್ತು ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.