ಸಂತೇಮರಹಳ್ಳಿ: ಸಮೀಪದ ಯಡಿಯೂರು ಹಾಗೂ ಮಂಗಲ ಗ್ರಾಮಗಳ ನಡುವೆ ಇರುವ ಶಂಕರೇಶ್ವರ ಬೆಟ್ಟದಲ್ಲಿ ಭಾನುವಾರ ಶಂಕರೇಶ್ವರಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಗೌರಿಹಬ್ಬ ನಡೆದ 5ನೇ ದಿನಕ್ಕೆ ಪ್ರತಿವರ್ಷ ಜಾತ್ರಾ ಮಹೋತ್ಸವ ನಡೆಯುತ್ತದೆ. ಭಾನುವಾರ ನಡೆದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇವಸ್ಥಾನದ ಪ್ರಧಾನ ಆರ್ಚಕ ಶಂಕರೇಶ್ವರಸ್ವಾಮಿ ವಿಗ್ರಹವನ್ನು ಸ್ವಚ್ಫಗೊಳಿಸಿ ಕುಂಕುಮಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚಾನೆ ನೆರವೇರಿಸಿದರು. ನಂತರ ನಾನಾ ಬಗೆಯ ಹೂ ಹೊಂಬಾಳೆಗಳಿಂದ ದೇವರನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಯಿತು.
ಯಡಿಯೂರು, ಮಂಗಲ, ಕರಡಿಮೋಳೆ, ಹುಲ್ಲೇಪುರ, ಮಂಗಲಹೊಸೂರು, ಕಣ್ಣೇಗಾಲ, ಸಿಂಗನಪುರ, ಕೆಂಪನಪುರ, ಮಹಂತಾಳಪುರ, ಮಾದಾಪುರ, ಸಂತೇಮರಹಳ್ಳಿ, ಚಾಮರಾಜನಗರ ಸೇರಿದಂತೆ ನೆರೆಯ ಜಿಲ್ಲೆಗಳಿಂದ ಭಕ್ತರು ಬೆಟ್ಟಕ್ಕೆ ಆಗಮಿಸಿ ದೂಪದ ಸೇವೆ ಸಲ್ಲಿಸಿದರು. ನಂತರ ಮೆಟ್ಟಿಲುಗಳ ಮೂಲಕ ಬೆಟ್ಟಹತ್ತಿ ದೇವಸ್ಥಾನ ಆವರಣದ ಸುತ್ತ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು.
ಪ್ರತಿವರ್ಷ ರಾಷ್ಟ್ರೀಯ ಹೆದ್ದಾರಿ ಮಾರ್ಗದಿಂದ ಬೆಟ್ಟದ ದೇವಸ್ಥಾನದ ವರೆಗೆ ರಸ್ತೆ ಸೌಲಭ್ಯವಿಲ್ಲದ ಪರಿಣಾಮದಿಂದ ಭಕ್ತರು ದೂಳಿನಿಂದ ತೊಂದರೆ ಅನುಭವಿಸುವ ಸ್ಥಿತಿ ಇತ್ತು. ಸ್ಥಳೀಯ ಶಾಸಕರ ವಿಶೇಷ ಅನುದಾನದಲ್ಲಿ ಮುಖ್ಯ ರಸ್ತೆಯಿಂದ ದೇವಸ್ಥಾನದ ವರೆಗೆ ₹45 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಮಾಡಿದ್ದರಿಂದ ಭಕ್ತರಿಗೆ ಅನುಕೂಲವಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಹರಕೆ ಹೊತ್ತ ಭಕ್ತರಿಂದ ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನ ಆವರಣದಲ್ಲಿ ಮಕ್ಕಳ ಆಟಿಕೆ ಸಾಮಾನು, ತಿಂಡಿ ತಿನಿಸು ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
ಬೆಟ್ಟದ ತಪ್ಪಲಿನಲ್ಲಿರುವ ಗಣೇಶ, ವೀರಭದ್ರೇಶ್ವರ ಹಾಗೂ ಬಸವೇಶ್ವರ ದೇವಸ್ಥಾನಗಳಲ್ಲಿ ಪೂಜೆ ನಡೆಯಿತು. ದೇವಸ್ಥಾನ ಆವರಣ ಹಾಗೂ ಸುತ್ತಮುತ್ತ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತು. ಜಾತ್ರೆಯಲ್ಲಿ ಯಾವುದೇ ಆಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮದಿಂದ ಸಂತೇಮರಹಳ್ಳಿ ಪೊಲೀಸ್ ಠಾಣೆ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಸೌಲಭ್ಯ ಕಲ್ಪಿಸಲಾಯಿತು. ಸೆ.1 ರಂದು ಸೋಮವಾರ ಚಿಕ್ಕ ಜಾತ್ರೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.