
ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಫೆ.14ರಿಂದ 18ರವರೆಗೆ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಪಾದಯಾತ್ರಿಗಳ ಭದ್ರತೆಗಾಗಿ ಅರಣ್ಯ ಇಲಾಖೆಯು 8 ತಂಡಗಳನ್ನು ರಚಿಸಿದೆ.
ಈಚೆಗೆ ಮಂಡ್ಯ ಜಿಲ್ಲೆಯ ಚೀರನಹಳ್ಳಿಯಿಂದ ಕ್ಷೇತ್ರಕ್ಕೆ ತೆರಳುತ್ತಿದ್ದ ಪಾದಯಾತ್ರಿ ಭಕ್ತರೊಬ್ಬರು ಚಿರತೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸಭೆ ನಡೆಸಿ ಭದ್ರತೆ ಕೈಗೊಳ್ಳುವಂತೆ ಸೂಚಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಪಾದಯಾತ್ರಿಗಳಿಂದ ಅರಣ್ಯಕ್ಕೆ ಹಾನಿಯಾಗದಂತೆಯೂ ಕ್ರಮ ಕೈಗೊಳ್ಳಲಾಗುತ್ತಿದೆ.
ಬೆಟ್ಟದ ತಳಭಾಗದಲ್ಲಿರುವ ತಾಳುಬೆಟ್ಟದಲ್ಲಿ 1 ತಂಡ ಹಾಗೂ ದೇವಸ್ಥಾನಕ್ಕೆ ಸಾಗುವ ಬೆಟ್ಟದ ಮಾರ್ಗದಲ್ಲಿ ಪ್ರತಿ ಕಿ.ಮೀಗೆ ಒಂದರಂತೆ, ಉಪ ವಲಯ ಅರಣ್ಯಾಧಿಕಾರಿ, ಗಸ್ತು ವನಪಾಲಕರ ನೇತೃತ್ವದಲ್ಲಿ 7 ತಂಡಗಳನ್ನು ನಿಯೋಜಿಸಲಾಗಿದೆ. ತಂಡದಲ್ಲಿ ಕಳ್ಳಬೇಟೆ ತಡೆ ಶಿಬಿರ, ಪೊಲೀಸ್ ಇಲಾಖೆ ಅಥವಾ ಗೃಹ ರಕ್ಷಕ ದಳ ಹಾಗೂ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ತಲಾ ಒಬ್ಬ ಸಿಬ್ಬಂದಿ ಸೇರಿ ಐವರು ಇರಲಿದ್ದಾರೆ. ವಲಯ ಅರಣ್ಯಾಧಿಕಾರಿಗಳು ಎಲ್ಲ ತಂಡಗಳ ಮೇಲುಸ್ತುವಾರಿ ವಹಿಸಲಿದ್ದಾರೆ.
ಪ್ರತಿ ತಂಡಕ್ಕೆ ಬಂದೂಕು, ವಾಕಿ ಟಾಕಿ, ಟಾರ್ಚ್, ಪಟಾಕಿ, ಮಚ್ಚು, ಲಾಟಿಗಳನ್ನು ಒದಗಿಸಲಾಗುವುದು. ಡಿಆರ್‌ಎಫ್‌ಒ, ಗಸ್ತು ವನ ಪಾಲಕರ ನೇತೃತ್ವದಲ್ಲಿ ಹೆಚ್ಚುವರಿ ಸಿಬ್ಬಂದಿ 2 ಕ್ಯಾಂಪರ್ ವಾಹನದಲ್ಲಿ ಪಾದಯಾತ್ರಿಗಳು ಸಾಗುವ ಮಾರ್ಗದಲ್ಲಿ ಗಸ್ತು ತಿರುಗಲಿದ್ದಾರೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.
‘ಮೈಸೂರಿನ ಚಿರತೆ ಕಾರ್ಯಪಡೆ, ಡ್ರೋನ್ ತಂಡಗಳನ್ನು ನಿಯೋಜಿಸುವಂತೆ ಕೋರಲಾಗಿದ್ದು, ಅನುಮತಿ ದೊರೆತ ಕೂಡಲೇ ಸೂಕ್ತ ಸ್ಥಳಗಳಲ್ಲಿ ನಿಯೋಜಿಸಿ ವನ್ಯಜೀವಿಗಳ ಚಲನವಲನಗಳ ಮೇಲೆ ನಿಗಾ ಇರಿಸಲಾಗುವುದು’ ಎಂದಿದ್ದಾರೆ.
‘ಜಾತ್ರಾ ಮಹೋತ್ಸವದ ವೇಳೆ ಯಾವುದೇ ಅವಘಡ ಸಂಭವಿಸಿದಂತೆ ಪೊಲೀಸ್, ಪ್ರಾಧಿಕಾರ, ಕಂದಾಯ ಇಲಾಖೆ ಅಧಿಕಾರಿಗಳ ಸಮನ್ವಯತೆಯೊಂದಿಗೆ ಎಚ್ಚರ ವಹಿಸಲಾಗುವುದು. ಭಕ್ತರಿಂದ ಅರಣ್ಯಕ್ಕೆ ಬೆಂಕಿ ಹರಡದಂತೆ ತಡೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
ಭಕ್ತರಿಗೆ ವನ್ಯಜೀವಿಗಳ ಮಾಹಿತಿ ನೀಡಲು ಜಾಗೃತಿ ಫಲಕಗಳನ್ನು ಅಳವಡಿಸಲಾಗುವುದು ತಾಳುಬೆಟ್ಟದಲ್ಲಿ ಧ್ವನಿವರ್ಧಕದ ಮೂಲಕವೂ ಸೂಚನೆಗಳನ್ನು ನೀಡಲಾಗುವುದುಭಾಸ್ಕರ್ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್
‘ಪ್ಲಾಸ್ಟಿಕ್ ರಹಿತ ಶಿವರಾತ್ರಿ ಆಚರಿಸಿ’
‘ಮಲೆ ಮಹದೇಶ್ವರ ಬೆಟ್ಟವನ್ನು ಜಿಲ್ಲಾಡಳಿತವು ಪ್ಲಾಸ್ಟಿಕ್ ಮುಕ್ತ ವಲಯವಾಗಿ ಘೋಷಿಸಿದ್ದು ಭಕ್ತರು ಪ್ರವಾಸಿಗರು ಹಾಗೂ ಸ್ಥಳೀಯರು ಪರಿಸರ ಸಂರಕ್ಷಣೆ ಸ್ವಚ್ಛತೆ ಕಾಪಾಡಲು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು’ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಮನವಿ ಮಾಡಿದ್ದಾರೆ.
ಬೆಟ್ಟವು ಅರಣ್ಯ ಪ್ರದೇಶದಲ್ಲಿರುವ ಪವಿತ್ರ ಕ್ಷೇತ್ರ. ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಭಕ್ತರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಬಟ್ಟೆ ಕಾಗದ ಹಾಗೂ ಸೆಣಬಿನ ಕೈಚೀಲ ತರಬೇಕು. ಸ್ಟೀಲ್ ತಾಮ್ರದ ಪಾತ್ರೆಗಳನ್ನು ಬಳಸಬೇಕು. ಪ್ಲಾಸ್ಟಿಕ್ ತಂದರೆ ಜಪ್ತಿ ಮಾಡಲಾಗುವುದು. ಕಸದ ತೊಟ್ಟಿಗಳಲ್ಲಿ ಮಾತ್ರ ಕಸ ಹಾಕಬೇಕು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.