ADVERTISEMENT

ಚಾಮರಾಜನಗರ: ಲಸಿಕೆ ಅಭಾವ, ಗುರಿ ಸಾಧನೆ ಅನುಮಾನ

7 ಲಕ್ಷ ಗುರಿ ತಲುಪಲು ದಿನಕ್ಕೆ 15 ಸಾವಿರ ಲಸಿಕೆ ಬೇಕು, ಪೂರೈಕೆಯಾಗದ ಲಸಿಕೆ

ಸೂರ್ಯನಾರಾಯಣ ವಿ.
Published 31 ಜುಲೈ 2021, 3:09 IST
Last Updated 31 ಜುಲೈ 2021, 3:09 IST
ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಸಿಬ್ಬಂದಿಗಾಗಿ ಇತ್ತಿಚೆಗೆ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನದಲ್ಲಿ ಸಿಬ್ಬಂದಿಯೊಬ್ಬರು ಲಸಿಕೆ ಹಾಕಿಸಿಕೊಂಡರು
ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಸಿಬ್ಬಂದಿಗಾಗಿ ಇತ್ತಿಚೆಗೆ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನದಲ್ಲಿ ಸಿಬ್ಬಂದಿಯೊಬ್ಬರು ಲಸಿಕೆ ಹಾಕಿಸಿಕೊಂಡರು   

ಚಾಮರಾಜನಗರ: ರಾಜ್ಯದಿಂದ ಜಿಲ್ಲೆಗೆ ಅಗತ್ಯವಿರುವಷ್ಟು ಕೋವಿಡ್‌ ಲಸಿಕೆ ಪೂರೈಕೆಯಾಗದಿರುವುದರಿಂದ ಆಗಸ್ಟ್‌ ತಿಂಗಳೊಳಗೆ ಏಳು ಲಕ್ಷ ಜನರಿಗೆ ಲಸಿಕೆ ನೀಡುವ ಜಿಲ್ಲಾಡಳಿತದ ಗುರಿ ತಲುಪುವ ಸಾಧ್ಯತೆ ಕ್ಷೀಣವಾಗಿದೆ.

18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರಿಗೂ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಲಸಿಕೆ ಪೂರೈಕೆಯಾಗದೇ ಇರುವುದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಜಿಲ್ಲಾಡಳಿತ ಕೈಗೊಂಡಿರುವ ನಿರ್ಧಾರದಂತೆ ಆಗಸ್ಟ್‌ ತಿಂಗಳ ವೇಳೆಗೆ ಏಳು ಲಕ್ಷ ಜನರಿಗೆ ಲಸಿಕೆ ನೀಡಬೇಕಾದರೆ ದಿನಕ್ಕೆ ಕನಿಷ್ಠ ಎಂದರು 15 ಸಾವಿರ ಜನರಿಗೆ ಲಸಿಕೆ ಹಾಕಬೇಕು. ಆದರೆ, ಇಲ್ಲಿ ಪ್ರತಿದಿನ ಸರಾಸರಿ 3000ಕ್ಕಿಂತ ಹೆಚ್ಚು ಲಸಿಕೆ ವಿತರಣೆಯಾಗುತ್ತಿಲ್ಲ. ಒಂದು ದಿನ 4,000ಕ್ಕಿಂತ ಹೆಚ್ಚು ಮಂದಿಗೆ ಲಸಿಕೆ ಹಾಕಿದರೆ ಇನ್ನೊಂದು ದಿನ ಈ ಸಂಖ್ಯೆ 2000ಕ್ಕಿಂತ ಕೆಳಗೆ ಬರುತ್ತದೆ. ಲಸಿಕೆ ಇಲ್ಲದ ಕಾರಣಕ್ಕೆ ಕೇಂದ್ರಗಳಿಗೆ ಬಂದವರನ್ನು ವಾಪಸ್‌ ಕಳಿಸುವುದು ನಿರಂತರವಾಗಿ ನಡೆಯುತ್ತಿದೆ.

ADVERTISEMENT

ಗುರುವಾರದಂದು (ಜುಲೈ 29) ಮೊದಲ ಹಾಗೂ ಎರಡನೇ ಡೋಸ್‌ ಸೇರಿ 1,878 ಮಂದಿಗೆ ಲಸಿಕೆ ನೀಡಲಾಗಿದೆ. ಬುಧವಾರ (ಜುಲೈ 28) 2,886 ಮಂದಿಗೆ ಲಸಿಕೆ ನೀಡಲಾಗಿದೆ.

ಕಡಿಮೆ ಹಂಚಿಕೆ: ಜಿಲ್ಲೆಯಲ್ಲಿ ಪ್ರತಿ ದಿನ 10 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಗುರಿ ನೀಡಿದೆ. ಆದರೆ, ಅಷ್ಟು ಪ್ರಮಾಣದಲ್ಲಿ ಲಸಿಕೆ ಹಂಚಿಕೆ ಆಗುತ್ತಿಲ್ಲ. ಜುಲೈ 25ರಂದು 5,300 ಕೋವಿಶೀಲ್ಡ್‌, 2,400 ಕೊವ್ಯಾಕ್ಸಿನ್‌ ಸೇರಿ 7,700ಗಳಷ್ಟು ಲಸಿಕೆ ಜಿಲ್ಲೆಗೆ ಹಂಚಿಕೆ ಮಾಡಲಾಗಿತ್ತು. ಮರುದಿನ 26ರಂದು ಇಷ್ಟೇ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಈ ಸಂಖ್ಯೆ ಕಡಿಮೆಯಾಗಿದ್ದು, ಶುಕ್ರವಾರ 9,000 ಕೋವಿಶೀಲ್ಡ್‌ ಲಸಿಕೆ ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಷ್ಟು ಪ್ರಮಾಣದಲ್ಲಿ ಲಸಿಕೆ ಜಿಲ್ಲೆಗೆ ನೀಡಿದ್ದು, ಇದೇ ಮೊದಲು ಎಂದು ಹೇಳುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

74 ಕೇಂದ್ರಗಳಲ್ಲಿ ಲಸಿಕೆ: ಜಿಲ್ಲೆಯಲ್ಲಿರುವ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೂರು ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಸೇರಿದಂತೆ 74 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

‘ಕಡಿಮೆ ಪ್ರಮಾಣದಲ್ಲಿ ಬಂದ ಲಸಿಕೆಗಳನ್ನು 74 ಕೇಂದ್ರಗಳಿಗೆ ಹಂಚುವಾಗ ಹೆಚ್ಚು ಲಸಿಕೆಗಳು ಸಿಗುವುದಿಲ್ಲ. ಕೇಂದ್ರಗಳಲ್ಲಿ ಲಸಿಕೆಗಾಗಿ ಹೆಚ್ಚು ಜನರು ಬಂದಿರುತ್ತಾರೆ. ಹೀಗಾಗಿ ಎಲ್ಲರಿಗೂ ಲಸಿಕೆ ಹಾಕಲು ಆಗುವುದಿಲ್ಲ. ಅನಿವಾರ್ಯವಾಗಿ ಅವರನ್ನು ವಾಪಸ್‌ ಕಳುಹಿಸಬೇಕಾಗುತ್ತದೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ರಾಜ್ಯದಾದ್ಯಂತ ಲಸಿಕೆ ಅಭಿಯಾನಕ್ಕೆ ಅತ್ಯುತ್ಸಾಹ ತೋರಿಸಿದ್ದ ರಾಜ್ಯ ಸರ್ಕಾರ, ನಂತರ ಈ ಬಗ್ಗೆ ಅಷ್ಟೊಂದು ಗಮನ ಹರಿಸಿದಂತೆ ಕಾಣಿಸುತ್ತಿಲ್ಲ. ಜಿಲ್ಲೆಯಲ್ಲಿ ಆ ದಿನ ದಾಖಲೆಯ 23,788 ಮಂದಿಗೆ ಲಸಿಕೆ ಹಾಕಲಾಗಿತ್ತು.

ಮೈಸೂರಿಂದ ಜಿಲ್ಲೆಗೆ: ರಾಜ್ಯ ಸರ್ಕಾರ ಹಂಚಿಕೆ ಮಾಡಿದ ಲಸಿಕೆ ಜಿಲ್ಲೆಗೆ ತಲುಪಲು ಒಂದೂವರೆ ದಿನ ಬೇಕು. ಹಂಚಿಕೆ ಮಾಡಿದ ಮಾರನೇ ದಿನ ಲಸಿಕೆ ಬೆಂಗಳೂರಿನಿಂದ ಮೈಸೂರಿಗೆ ಲಸಿಕೆ ಬರುತ್ತದೆ. ಅಲ್ಲಿಂದ ಜಿಲ್ಲೆಗೆ ತರಲಾಗುತ್ತದೆ.

ಜಿಲ್ಲೆಯ ಲಸಿಕೆ ಲೆಕ್ಕಾಚಾರ

ಜಿಲ್ಲೆಯಲ್ಲಿ ಇದುವರೆಗೆ 3,82,682 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಈ ಪೈಕಿ 2,99,112 ಜನರು ಮೋದಲ ಡೋಸ್‌ ಪಡೆದಿದ್ದರೆ, 83,570 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

ಮೊದಲ ಡೋಸ್‌ಗೆ ಹೋಲಿಸಿದರೆ, ಎರಡನೇ ಡೋಸ್‌ ಪಡೆದವರ ಸಂಖ್ಯೆ ತುಂಬಾ ಕಡಿಮೆ ಇದ್ದು, ಆರೋಗ್ಯ ಇಲಾಖೆಯು ಸದ್ಯ ಎರಡನೇ ಡೋಸ್‌ ಲಸಿಕೆ ನೀಡಲು ಆದ್ಯತೆ ನೀಡುತ್ತಿದೆ. ಅದರಲ್ಲೂ ಕೋವ್ಯಾಕ್ಸಿನ್‌ ಲಸಿಕೆ ಎರಡನೇ ಡೋಸ್‌ನವರಿಗೆ ಮಾತ್ರ ಸಿಗುತ್ತಿದೆಯಷ್ಟೆ.

ಇದುವರೆಗೆ 12,472 ಮಂದಿ ಆರೋಗ್ಯ ಸೇವೆ ಒದಗಿಸುವವರು, 9,120 ಮಂದಿ ಕೋವಿಡ್‌ ಮುಂಚೂಣಿ ಕಾರ್ಯಕರ್ತರು, 18ರಿಂದ 44 ವರ್ಷದವರೆಗಿನ 1,08,465, 45ರಿಂದ 59 ವರ್ಷದವರು 1,33,215 ಹಾಗೂ 60 ವರ್ಷ ಮೇಲ್ಪಟ್ಟವರು 1,19,410 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಲಸಿಕೆ ನೀಡಲು ನಾವು ಸಿದ್ಧರಿದ್ದೇವೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಜಿಲ್ಲೆ ಮಾತ್ರವಲ್ಲ ಎಲ್ಲ ಕಡೆಯೂ ಇದೇ ಸ್ಥಿತಿ ಇದೆ
- ಡಾ. ಜೆ.ಎಂ.ವಿಶ್ವೇಶ್ವರಯ್ಯ, ಲಸಿಕಾ ಅಧಿಕಾರಿ

ಸದ್ಯ ನಮಗೆ ಹಂಚಿಕೆ ಆಗುವ ಲಸಿಕೆ ಆಧಾರದಲ್ಲಿ ಎಲ್ಲ ಕೇಂದ್ರಗಳಿಗೂ ಪೂರೈಸಲಾಗುತ್ತಿದೆ. 2ನೇ ಡೋಸ್‌ ನೀಡಲು ಆದ್ಯತೆ ನೀಡುತ್ತಿದ್ದೇವೆ
- ಡಾ.ಎಂ.ಸಿ.ರವಿ, ಡಿಎಚ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.