
ಚಾಮರಾಜನಗರ: ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಮೆರವಣಿಗೆಯಂತಹ ಉತ್ತಮ ಕವನ ಸಂಕಲನಗಳನ್ನು ರಚಿಸುವ ಮೂಲಕ ನಾಡಿನ ಜನರ ನೋವು ನಲಿವುಗಳನ್ನು ಕಾವ್ಯಗಳ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸಿದ ಕವಿ ಸಿದ್ದಲಿಂಗಯ್ಯ ಎಂದು ಸಾಹಿತಿ, ರಂಗಕರ್ಮಿ ಕೆ.ವೆಂಕಟರಾಜು ಅಭಿಪ್ರಾಯಪಟ್ಟರು.
ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಭೋಗಾಪುರ ವಸತಿಯುತ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಈಚೆಗೆ ಕವಿ ಸಿದ್ದಲಿಂಗಯ್ಯ ಅವರ 72ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿ ಸಿದ್ದಲಿಂಗಯ್ಯ ಜನ ಮಾನಸದ ಕವಿಯಾಗಿದ್ದರು ಎಂದು ಸ್ಮರಿಸಿದರು.
ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣ ಮೂಕಹಳ್ಳಿ ಮಾತನಾಡಿ, ದಲಿತ ಕವಿ ಸಿದ್ದಲಿಂಗಯ್ಯ ಸಾಹಿತ್ಯ ಕೃಷಿಯ ಮೂಲಕ ಶೋಷಿತ ಸಮುದಾಯಗಳ ವಿಮೋಚನೆಗೆ ದುಡಿದರು. ಅವರ ಕಾವ್ಯಗಳಲ್ಲಿ ಬಂಡಾಯ ಮಾತ್ರವಲ್ಲ; ಪ್ರೇಮ, ಮೈತ್ರಿ, ಕಾರುಣ್ಯ ಹಾಗೂ ತಾಯ್ತತನ ಅಭಿವ್ಯಕ್ತವಾಗಿವೆ.
ಸಿದ್ದಲಿಂಗಯ್ಯ ಶೋಷಣೆಗೊಳಗಾದ ಪ್ರತಿ ಸಮುದಾಯಗಳ ಪ್ರಾತಿನಿಧಿಕ ಕವಿಯಾಗಿದ್ದಾರೆ. ಅವರ ಸಾಹಿತ್ಯದಲ್ಲಿನ ತಿರುಳನ್ನು ಅರ್ಥೈಸಿಕೊಳ್ಳಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಕಾರ್ಲ್ ಮಾರ್ಕ್ಸ್ ಅವರ ಪ್ರಭಾವವನ್ನು ಬರಹಗಳಲ್ಲಿ ಕಾಣಬಹುದು. ಸಿದ್ದಲಿಂಗಯ್ಯ ಅವರು ಕವಿಯಾಗಿ, ಹೋರಾಟಗಾರರಾಗಿ, ರಾಜಕಾರಣಿಯಾಗಿಯೂ ಗಮನ ಸೆಳೆಯುವ ವ್ಯಕ್ತಿತ್ವ ಎಂದರು.
ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಕವಿ ಡಾ.ಸಿದ್ದಲಿಂಗಯ್ಯ ಕನ್ನಡ ಹಾಗೂ ದಲಿತ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಕವಿತೆಗಳ ಮೂಲಕವೇ ಹೋರಾಟಕ್ಕೆ ಶಕ್ತಿ ಪ್ರೇರಣೆ ತುಂಬಬಲ್ಲವರಾಗಿದ್ದರು. ಚಲನಚಿತ್ರ, ರಂಗಗೀತೆಗಳ ರಚನೆ ಮೂಲಕವೂ ಗಮನ ಸೆಳೆದಿದ್ದರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಪಿ.ದೇವರಾಜು, ಸಿದ್ದಲಿಂಗಯ್ಯ ಹೋರಾಟದ ಹಾಡುಗಳ ಮೂಲಕ ಶೋಷಿತ ಸಮುದಾಯಗಳ ಪರವಾದ ಚಳವಳಿ ಕಟ್ಟಿದರು, ದಲಿತ ಸಮುದಾಯಗಳ ಬದಲಾವಣೆಗೆ ನಿರಂತರವಾಗಿ ಪ್ರಯತ್ನಿಸಿದರು ಎಂದರು. ಸಂತೇಮರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಿಯಶಂಕರ್, ಉಪನ್ಯಾಸಕಿ ಭಾಗ್ಯಾ, ಮನೋಜ್ ಕುಮಾರ್, ವಿಶ್ವ, ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.