ADVERTISEMENT

2.69 ಮೆ.ವಾ ಸೌರ ವಿದ್ಯುತ್: 300 ರೈತರಿಗೆ ಲಾಭ; ಸಿದ್ದರಾಮಯ್ಯ

ವರ್ಚುವಲ್ ಮೂಲಕ ಹೊನ್ನಹಳ್ಳಿಯ ಸೌರ ವಿದ್ಯುತ್ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:36 IST
Last Updated 11 ಜೂನ್ 2025, 14:36 IST
ಚಾಮರಾಜನಗರ ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವ 2.69 ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಫಲಾನುಭವಿ ಮಹೇಶ್ ವರ್ಚುವಲ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಂವಾದ ನಡೆಸಿದರು
ಚಾಮರಾಜನಗರ ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವ 2.69 ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಫಲಾನುಭವಿ ಮಹೇಶ್ ವರ್ಚುವಲ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಂವಾದ ನಡೆಸಿದರು   

ಚಾಮರಾಜನಗರ: ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ಹೊತ್ತಿನಲ್ಲಿಯೇ ಸುಸ್ಥಿರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಪಿಎಂ-ಕುಸುಮ್ ಸಿ ಯೋಜನೆಯಡಿ ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವ 2.69 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚುವಲ್ ಮೂಲಕ ಲೋಕಾರ್ಪಣೆಗೊಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಆಯೋಜಿಸಿದ್ದ ಪಿಎಂ-ಕುಸುಮ್ ಕಾಂಪೊನೆಟ್ ‘ಸಿ’ ಯೋಜನೆಗೆ ಚಾಲನೆ ನೀಡಿದ ಸಂದರ್ಭ ತಾಲ್ಲೂಕಿನ ಹೊನ್ನಹಳ್ಳಿಯ ವಿದ್ಯುತ್ ಘಕಟವನ್ನು ಉದ್ಘಾಟಿಸಿ ತಾಲ್ಲೂಕಿನ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಹೊನ್ನಹಳ್ಳಿಯ ಫಲಾನುಭವಿ ರೈತ ಮಹೇಶ್, ಸೌರ ಘಟಕ ಆರಂಭವಾದ ಬಳಿಕ ಪಂಪ್‌ಸೆಟ್‌ಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿದ್ದು, 350 ಅಡಿ ಆಳದಿಂದ ಸುಲಭವಾಗಿ ನೀರೆತ್ತಲು ಸಾಧ್ಯವಾಗಿದ್ದು ಕೃಷಿಗೆ ಅನುಕೂಲವಾಗಿದೆ ಎಂದರು.

ಹಿಂದೆ, ಜಮೀನಿಗೆ ನೀರು ಬಿಡಲು ರಾತ್ರಿಯ ಹೊತ್ತು ಬರಬೇಕಿತ್ತು. ಕಾಡು ಪ್ರಾಣಿಗಳ ಹಾವಳಿ, ವಿಷಜಂತುಗಳ ಕಡಿತ ಆತಂಕ ಹೆಚ್ಚಾಗಿತ್ತು. ಪಿಎಂ ಕುಸುಮ್ ಯೋಜನೆಯಡಿ ಹಗಲಿನಲ್ಲಿ ಸೋಲಾರ್ ವಿದ್ಯುತ್ ದೊರೆಯುತ್ತಿದ್ದು ಆಂತಕ ನಿವಾರಣೆಯಾಗಿದೆ. ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

ಫಲಾನುಭವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸೌರ ವಿದ್ಯುತ್ ಯೋಜನೆ ಜಾರಿಯಿಂದ ರೈತರು ರಾತ್ರಿ ಹೊತ್ತು ಜಮೀನುಗಳಿಗೆ ನೀರು ಹಾಯಿಸಲು ಹೋಗಬೇಕಾದ ಅಗತ್ಯ ಇರುವುದಿಲ್ಲ. ಹಗಲಿನಲ್ಲಿಯೇ 7 ಗಂಟೆ 3 ಫೇಸ್‍ನಲ್ಲಿ ಗುಣಮಟ್ಟದ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಸೆಸ್ಕ್‌ನಿಂದ 3 ಮೆಗಾವಾಟ್‌ ಸೋಲಾರ್ ವಿದ್ಯುತ್ ಉತ್ಪಾದನಾ ಸ್ಥಾವರ ನಿರ್ಮಾಣ ಮಾಡಲಾಗಿದ್ದು, 300 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುವುದು. ಒಟ್ಟಾರೆ ಜಿಲ್ಲೆಯಲ್ಲಿ 950 ಮೆಗಾವಾಟ್‌ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದ್ದು ಈ ವರ್ಷ 500 ಮೆಗಾವಾಟ್‌ ಉತ್ಪಾದನೆಗೆ ಅಗತ್ಯವಿರುವ ಜಮೀನು ಪಡೆಯಲಾಗಿದೆ ಎಂದು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.

ಗ್ರಾಮಸ್ಥರಿಗೆ ವರ್ಚುವಲ್ ಮೂಲಕ ಕಾರ್ಯಕ್ರಮ ವೀಕ್ಷಿಸಲು ಎಲ್.ಇ.ಡಿ ಪರದೆಗಳನ್ನು ಅಳವಡಿಸಲಾಗಿತ್ತು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರಾದ ಮುನಿಗೋಪಾಲರಾಜು, ನಿಗಮದ ಮುಖ್ಯ ಎಂಜಿನಿಯರ್ ದಿವಾಕರ್, ಪ್ರಧಾನ ವ್ಯವಸ್ಥಾಪಕ ರಾಮಸ್ವಾಮಿ, ಅಧೀಕ್ಷಕ ಎಂಜಿನಿಯರ್ ಸೋಮಶೇಖರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಾ, ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಪ್ರದೀಪ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೃಪದ್ ಇದ್ದರು.

950 ಮೆಗಾವಾಟ್ ವಿದ್ಯುತ್ ಉತ್ಪಾದನೆ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ವರ್ಷದಲ್ಲಿ 950 ಮೆಗಾವಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೌರ ಘಟಕಗಳನ್ನು ಅಳವಡಿಸುತ್ತಿದೆ. ಪಿಎಂ ಕುಸುಮ್ ಸಿ ಯೋಜನೆಯಡಿ 32 ವಿದ್ಯುತ್ ಪ್ರಸರಣಾ ಕೇಂದ್ರಗಳ ಸಮೀಪವೇ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ಇದೇ ವರ್ಷದ ಅಂತ್ಯದೊಳಗೆ ಮುಕ್ತಾಯವಾಗುವ ಗುರಿ ಇದ್ದು ಜಿಲ್ಲೆಯಲ್ಲಿರುವ 187 ಐಪಿ ಫೀಡರ್‌ಗಳ ಮೂಲಕ 73000 ಕೃಷಿಕರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ತ್ರೀಫೇಸ್ ವಿದ್ಯುತ್ ನೀಡಲಾಗುವುದು. ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆಯಾಗುವುದರಿಂದ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಯೋಜನೆಗೆ ಕೇಂದ್ರ ಸರ್ಕಾರ ಶೇ 30ರಷ್ಟು ಸಹಾಯಧನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.