ADVERTISEMENT

ಚಾಮರಾಜನಗರ: ಒಂದೇ ದಿನ ದಾಖಲೆಯ 644 ಮಂದಿ ಸೋಂಕುಮುಕ್ತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 2:48 IST
Last Updated 12 ಜೂನ್ 2021, 2:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಶುಕ್ರವಾರ ಒಂದೇ ದಿನ 644 ಮಂದಿ ಗುಣಮುಖರಾಗಿದ್ದಾರೆ. ಗುರುವಾರ 537 ಮಂದಿ ಸೋಂಕು ಮುಕ್ತರಾಗಿದ್ದರು.

ವಾರದಿಂದೀಚೆಗೆ ದೃಢಪಡುತ್ತಿರುವ ಪ್ರಕರಣಗಳೂ ಕಡಿಮೆಯಾಗುತ್ತಿವೆ. ಶುಕ್ರವಾರ ದಾಖಲೆಯ 2,434 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 2,225 ಮಂದಿಯ ವರದಿ ನೆಗೆಟಿವ್‌ ಬಂದು, 209 ಮಂದಿಗೆ ಸೋಂಕು ಇರುವುದು ಖಚಿತವಾಗಿ. ಹಳೆಯ 19 ಪ್ರಕರಣಗಳು ಸೇರಿ 228 ಪ್ರಕರಣಗಳು ದೃಢಪಟ್ಟಿವೆ. ಒಂದು ಸಾವು ಸಂಭವಿಸಿದೆ.

ಗುಣಮುಖರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,517ಕ್ಕೆ ಇಳಿದಿದೆ. ಈ ಪೈಕಿ ಐಸಿಯುನಲ್ಲಿ 55 ಮಂದಿ ಇದ್ದಾರೆ. 78 ಮಂದಿ ಹೋಂ ಐಸೊಲೇಷನ್‌ಲ್ಲಿದ್ದಾರೆ. ಉಳಿದವರು ಕೋವಿಡ್‌ ಕೇರ್‌ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಶುಕ್ರವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯ ಒಟ್ಟು ಪ್ರಕರಣ 29,234ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 27 ಸಾವಿರ ದಾಟಿದೆ. ಈವರೆಗೆ 27,238 ಮಂದಿ ಕೋವಿಡ್‌ ಗೆದ್ದಿದ್ದಾರೆ.

ಹೆಚ್ಚಿದ ಪರೀಕ್ಷೆ: ಶುಕ್ರವಾರ ಒಟ್ಟು 2,434 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿವೆ. ಈ ಪೈಕಿ ಆರ್‌ಟಿಪಿಸಿಆರ್‌ ವಿಧಾನದಲ್ಲಿ1,336 ಹಾಗೂ 1098 ಪರೀಕ್ಷೆಗಳನ್ನು ರ‍್ಯಾಪಿಡ್‌ ಆ್ಯಂಟಿಜೆನ್‌ ವಿಧಾನದಲ್ಲಿ ನಡೆಸಲಾಗಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಗಳಲ್ಲಿ 164 ಮಂದಿಗೆ ಹಾಗೂ ರ‍್ಯಾಪಿಡ್‌ ಆ್ಯಂಟಿ ಜೆನ್‌ ಪರೀಕ್ಷೆ ಮಾಡಿಸಿಕೊಂಡವರಲ್ಲಿ 45 ಮಂದಿ ಸೋಂಕು ಇರುವುದು ಖಚಿತವಾಗಿದೆ.

ದೃಢಪ‍ಟ್ಟ 228 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 111, ಗುಂಡ್ಲುಪೇಟೆ ತಾಲ್ಲೂಕಿನ 47, ಕೊಳ್ಳೇಗಾಲ ತಾಲ್ಲೂಕಿನ 19, ಹನೂರು ತಾಲ್ಲೂಕಿನ 36, ಯಳಂದೂರು ತಾಲ್ಲೂಕಿನ 13 ಹಾಗೂ ಹೊರ ಜಿಲ್ಲೆಗಳ ಎರಡು ಪ್ರಕರಣಗಳು ಸೇರಿವೆ.

ಶುಕ್ರವಾರ ಗುಣಮುಖರಾದ 644 ಮಂದಿಯಲ್ಲಿ 14 ಜನ ಆಸ್ಪತ್ರೆಗಳಲ್ಲಿದ್ದರೆ, ಕೋವಿಡ್‌ ಕೇರ್ ಕೇಂದ್ರಗಳಲ್ಲಿ 622 ಮಂದಿ ಇದ್ದರು. ಹೋಂ ಐಸೊಲೇಷನ್‌ನಲ್ಲಿ ಎಂಟು ಮಂದಿ ಇದ್ದರು.

ಸೋಂಕು ಮುಕ್ತರಾದವರಲ್ಲಿ ಚಾಮರಾಜನಗರ ತಾಲ್ಲೂಕಿನ 179, ಗುಂಡ್ಲುಪೇಟೆ ತಾಲ್ಲೂಕಿನ 177, ಕೊಳ್ಳೇಗಾಲ ತಾಲ್ಲೂಕಿನ 113, ಹನೂರು ತಾಲ್ಲೂಕಿನ 130, ಯಳಂದೂರು ತಾಲ್ಲೂಕಿನ 40 ಹಾಗೂ ಹೊರ ಜಿಲ್ಲೆಗಳ ಐವರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.