ADVERTISEMENT

6000 ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕ ಶೀಘ್ರ ಆರಂಭ

ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪನೆ, ವಾರಕ್ಕೆ ಪೂರೈಸುವಷ್ಟು ಸಾಮರ್ಥ್ಯ

ಸೂರ್ಯನಾರಾಯಣ ವಿ
Published 20 ಏಪ್ರಿಲ್ 2021, 17:40 IST
Last Updated 20 ಏಪ್ರಿಲ್ 2021, 17:40 IST
ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪನೆ ಮಾಡಲಾಗಿರುವ ಆಮ್ಲಜನಕ ಘಟಕ
ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪನೆ ಮಾಡಲಾಗಿರುವ ಆಮ್ಲಜನಕ ಘಟಕ   

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಆರು ಸಾವಿರಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ (ಲಿಕ್ವಿಡ್‌ ಆಕ್ಸಿಜನ್‌ ಪ್ಲಾಂಟ್‌) ಸ್ಥಾಪಿಸಲಾಗಿದ್ದು, ಶೀಘ್ರದಲ್ಲಿ ಆರಂಭವಾಗಲಿದೆ.

ಘಟಕ ಸ್ಥಾಪನೆಯ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಘಟಕಕ್ಕೆ ಆಮ್ಲಜನಕ ತುಂಬಿ ಪರೀಕ್ಷೆ ನಡೆಸುವ ಕೆಲಸವಷ್ಟೇ ಬಾಕಿ ಇದ್ದು, ಒಂದೆರಡು ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘₹65 ಲಕ್ಷ ವೆಚ್ಚದಲ್ಲಿ ಘಟಕವನ್ನು ನಿರ್ಮಿಸಲಾಗಿದೆ. ಆಮ್ಲಜನಕವನ್ನು ಒಮ್ಮೆ ತುಂಬಿದರೆ, ಈಗಿನ ಪರಿಸ್ಥಿತಿಯಲ್ಲಿ ಒಂದು ವಾರಕ್ಕೆ ಸಾಕಾಗುತ್ತದೆ’ ಎಂದು ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕೋವಿಡ್‌ ಚಿಕಿತ್ಸೆಗೆ ಅನುಕೂಲ:ಸದ್ಯ ಜಿಲ್ಲಾಸ್ಪತ್ರೆಗೆ ಪ್ರತಿ ದಿನ ಮೈಸೂರಿನಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ತರಿಸಲಾಗುತ್ತಿದೆ. ಕೋವಿಡ್‌ ಹಾವಳಿ ಆರಂಭವಾದ ನಂತರ ಆಸ್ಪತ್ರೆಯಲ್ಲಿ ಆಮ್ಲಜನಕದ ಅಗತ್ಯ ಹೆಚ್ಚಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಕಳೆದ ವರ್ಷವೇ ಆಮ್ಲಜನಕ ಘಟಕ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾತಿ ದೊರಕಿತ್ತು.

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಘಟಕ ಆರಂಭವಾಗುತ್ತಿರುವುದರಿಂದ ಕೋವಿಡ್‌ ಚಿಕಿತ್ಸೆಗೆ ಅನುಕೂಲವಾಗಲಿದೆ.

ಸದ್ಯ ಪ್ರತಿ ಗಂಟೆಗೆ ಒಂದು ಸಿಲಿಂಡರ್‌ ಆಮ್ಲಜನಕದ ಅಗತ್ಯವಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಿನಕ್ಕೆ 240 ಸಿಲಿಂಡರ್‌ಗಳು ಬೇಕಾಗುತ್ತಿವೆ.

‘ಈಗ ಪ್ರತಿ ದಿನ ಮೈಸೂರಿನಿಂದ ಆಮ್ಲಜನಕ ತರಲಾಗುತ್ತಿದೆ. ಒಂದು ಬಾರಿಗೆ 100 ಸಿಲಿಂಡರ್‌ ತರಲಾಗುತ್ತಿದೆ. 250 ಸಿಲಿಂಡರ್‌ಗೆ ಮೂರು ಬಾರಿ ಹೋಗಿ ಬರಬೇಕು. ಒಂದು ಬಾರಿ ಆಮ್ಲಜನಕ ತುಂಬಿ ತರಲು ಕನಿಷ್ಠ ಐದರಿಂದ ಆರು ಗಂಟೆ ಬೇಕು. ಈ ಘಟಕ ಸ್ಥಾಪನೆಯಿಂದ ಮೈಸೂರಿಗೆ ಪ್ರತಿ ದಿನ ಓಡಾಡುವುದು ತಪ್ಪುತ್ತದೆ’ ಎಂದು ಜಿಲ್ಲಾಸ್ಪತ್ರೆಯ ವೈದ್ಯ, ಕೋವಿಡ್‌ ನೋಡೆಲ್‌ ಅಧಿಕಾರಿ ಡಾ.ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಒಮ್ಮೆ ಘಟಕಕ್ಕೆ ಆಮ್ಲಜನಕ ತುಂಬಿದರೆ ಒಂದು ವಾರದ ಮಟ್ಟಿಗೆ ಸಾಕು. ಆದರೆ, ಈ ಆಮ್ಲಜನಕ ಉತ್ಪಾದನಾ ಘಟಕ ಬಳ್ಳಾರಿಯಲ್ಲಿದ್ದು, ಅಲ್ಲಿಂದ ಟ್ಯಾಂಕರ್‌ನಲ್ಲಿ ತರಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

660 ಜಂಬೊ ಸಿಲಿಂಡರ್‌ಗಳ ಸಾಮರ್ಥ್ಯ: ಒಂದು ಜಂಬೊ ಸಿಲಿಂಡರ್‌ನಲ್ಲಿ ಏಳು ಘನ ಮೀಟರ್‌ಗಳಷ್ಟು ಸಾಂದ್ರೀಕೃತ ದ್ರವ ರೂಪದ ಆಮ್ಲಜನ ಇರುತ್ತದೆ. ಆರು ಸಾವಿರ ಲೀಟರ್‌ ಸಾಮರ್ಥ್ಯದ ಘಟಕದಲ್ಲಿ 4,620 ಘನ ಮೀಟರ್‌ಗಳಷ್ಟು ಆಮ್ಲಜನಕ ಹಿಡಿಯುತ್ತದೆ. ಅಂದರೆ, ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಘಟಕದಲ್ಲಿ 660 ಜಂಬೊ ಸಿಲಿಂಡರ್‌ಗಳಲ್ಲಿ ಹಿಡಿಯುವಷ್ಟು ಆಮ್ಲಜನಕವನ್ನು ತುಂಬಿಸಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

88 ಪ್ರಕರಣ ದೃಢ, ಒಂದು ಸಾವು

ಜಿಲ್ಲೆಯಲ್ಲಿ ಮಂಗಳವಾರ 660 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 88 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಒಬ್ಬರು ಮೃತಪಟ್ಟಿದ್ದಾರೆ. 40 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕ‌ರಣಗಳ ಸಂಖ್ಯೆ, 624ಕ್ಕೆ ಏರಿದೆ. ಈ ಪೈಕಿ 426 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.

ನಗರದ ರಾಮಸಮುದ್ರದ 40 ವರ್ಷದ ಮಹಿಳೆಯೊಬ್ಬರು ಕೋವಿಡ್‌ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಅವರು 16ರಂದು ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದರೊಂದಿಗೆ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 119ಕ್ಕೆ ಏರಿದೆ. 20 ಮಂದಿ ಅನ್ಯಕಾರಣಗಳಿಂದ ಕೊನೆಯುಸಿರೆಳೆದಿದ್ದಾರೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 8,066ಕ್ಕೆ ತಲುಪಿದೆ. 7,303 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.