ADVERTISEMENT

ಕರ್ತವ್ಯಲೋಪ: ಆರು ನೌಕರರು ಅಮಾನತು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:53 IST
Last Updated 28 ಮಾರ್ಚ್ 2020, 14:53 IST

ಚಾಮರಾಜನಗರ:ಜಿಲ್ಲೆಯ ಹೆಗ್ಗವಾಡಿ ಚೆಕ್‌ಪೋಸ್ಟ್‌ನಲ್ಲಿ ನಿಯಮ ಉಲ್ಲಂಘಿಸಿ ಅಂತರರಾಜ್ಯ, ಅಂತರಜಿಲ್ಲೆ ವಾಹನಗಳ ಸಂಚಾರಕ್ಕೆ ಅನುವು ಮಾಡಿದ ಆರೋಪದಲ್ಲಿ ಆರು ಮಂದಿ ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.

ಮೊದಲನೇ ಪಾಳಿಯಲ್ಲಿದ್ದ ಮುಕ್ಕಡಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಮಹದೇವಸ್ವಾಮಿ, ನಂಜದೇವನಪುರ ವೃತ್ತದ ಗ್ರಾಮ ಲೆಕ್ಕಿಗ ಸಂತೋಷ್‌ ಕುಮಾರ್, ತಮ್ಮಡಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಕೆ. ಶ್ರೀಧರ, ಎರಡನೇ ಪಾಳಿಯಲ್ಲಿದ್ದ ಮುಕ್ಕಡಹಳ್ಳಿ ಗ್ರಾಮ ಪಂಚಾಯಿತಿ ವಾಟರ್‌ಮ್ಯಾನ್ ನಂಜುಂಡಸ್ವಾಮಿ, ಕುಲಗಾಣ ವೃತ್ತದ ಲೆಕ್ಕಿಗ ಡಿ.ಜೆ.ಮಹೇಶ್, ಮುಕ್ಕಡಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ನಂದೀಶ್ ಅಮಾನತುಗೊಂಡವರು.

‘ಹೆಗ್ಗವಾಡಿ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಮೊದಲನೇ ಮತ್ತು ಎರಡನೇ ಪಾಳಿಯಲ್ಲಿ 230 ವಾಹನಗಳು ಸಂಚಾರ ನಡೆಸಿವೆ. ಇದರಲ್ಲಿ ಹೊರ ರಾಜ್ಯ/ಹೊರ ಜಿಲ್ಲೆಯಿಂದ 11 ಮಂದಿ ಹಾಗೂ ಹೊರ ಜಿಲ್ಲೆಗೆ 991 (595 ಮಂದಿ ತಮಿಳುನಾಡಿನ ಮೀನುಗಾರರು ಸೇರಿ) ಮಂದಿ ಹೋಗಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಜೀವನಾವಶ್ಯಕ ವಸ್ತುಗಳನ್ನು ಮಾತ್ರ ಚೆಕ್‌ಪೋಸ್ಟ್‌ ಮೂಲಕ ಸಾಗಿಸಲು ಅವಕಾಶ ಇದ್ದು, ಎರಡು ಪಾಳಿಗಳಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾರ್ವಜನಿರು ಹೆಚ್ಚಿನ ಸಂಖ್ಯೆಯಲ್ಲಿ ಚೆಕ್‌ಪೋಸ್ಟ್‌ ಮೂಲಕ ಸಂಚರಿಸಲು ಅವಕಾಶ ನೀಡಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಬಗ್ಗೆ ವಿಚಾರಣೆ ಕಾಯ್ದಿರಿಸಿ ಆರು ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.