ADVERTISEMENT

ಧ್ರುವನಾರಾಯಣ ಹುಟ್ಟುಹಬ್ಬ: 62 ಮಂದಿ ರಕ್ತದಾನ

300ಕ್ಕೂ ಹೆಚ್ಚು ಜನರಿಗೆ ಆಯುಷ್ಮಾನ್‌ ಕಾರ್ಡ್‌, 2000 ಮಂದಿಗೆ ಮಾಸ್ಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 1:56 IST
Last Updated 1 ಆಗಸ್ಟ್ 2021, 1:56 IST
ನಳಂದ ಬೌದ್ಧವಿಶ್ವವಿದ್ಯಾಲಯದ ಬಂತೆ ಬೋಧಿದತ್ತ ಥೇರಾ ಅವರು ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು
ನಳಂದ ಬೌದ್ಧವಿಶ್ವವಿದ್ಯಾಲಯದ ಬಂತೆ ಬೋಧಿದತ್ತ ಥೇರಾ ಅವರು ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು   

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರ 60ನೇ ವರ್ಷದ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ನಗರದಲ್ಲಿ ಶನಿವಾರ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ನಡೆದವು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 62 ಮಂದಿ ರಕ್ತದಾನ ಮಾಡಿದರು. ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಆಯುಷ್ಮಾನ್‌ ಕಾರ್ಡ್‌ ವಿತರಣೆ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕರು ಆಯುಷ್ಮಾನ್‌ ಕಾರ್ಡ್‌ ಪಡೆದರು.

ಮುಂಜಾನೆಯಿಂದಲೇ ಸೇವಾ ಕಾರ್ಯ: ಧ್ರುವನಾರಾಯಣ ಅವರ ಅಭಿಮಾನಿ ಬಳಗದ ಪದಾಧಿಕಾರಿಗಳು ಶನಿವಾರ ಮುಂಜಾನೆಯಿಂದಲೇ ಸೇವಾ ಚಟುವಟಿಕೆಗಳಲ್ಲಿ ತೊಡಗಿದರು.

ADVERTISEMENT

ಅಭಿಮಾನಿ ಬಳಗದ ಪದಾಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ 2,000 ಮಂದಿಗೆ ಎನ್‌ 95 ಮಾಸ್ಕ್‌ ವಿತರಿಸಿದರು.ಭೋಗಾಪುರದ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಓದುತ್ತಿರುವವರಿಗೆ ಭೋಜನ ವ್ಯವಸ್ಥೆಯನ್ನೂ ಮಾಡಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಬೆಳಿಗ್ಗೆ ಗಂಟೆಗೆ 5.30ಕ್ಕೆ ಪತ್ರಿಕೆ ಹಂಚುವ ಹುಡುಗರಿಗೆ ಮಾಸ್ಕ್ ವಿತರಿಸುವ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಎಪಿಎಂಸಿಗೆ ತೆರಳಿ ರೈತರು, ಕಾರ್ಮಿಕರು, ಗ್ರಾಹಕರಿಗೆ ಮಾಸ್ಕ್ ವಿತರಿಸಿದರು. ಬಳಿಕ ಯೂನಿಯನ್ ಬ್ಯಾಂಕ್ ಎದುರು, ಜೋಡಿರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರಿಗೆ, ಹಾಗೂ ತಾಲ್ಲೂಕು ಕಚೇರಿಯ ಪಡಸಾಲೆಯಲ್ಲಿ ಆಧಾರ್ ಕಾರ್ಡ್ ಮಾಡಿಸಲು ಬಂದಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು.

ಆರ್.ಧ್ರುವನಾರಾಯಣ ಅಭಿಮಾನಿ ಬಳಗದ ಅಧ್ಯಕ್ಷ ಕಾಗಲವಾಡಿ ಚಂದ್ರು, ಪ್ರಧಾನ ಕಾರ್ಯದರ್ಶಿ ಎಲ್‌ಐಸಿ ನಾಗನಾಗನಾಯಕ, ಉಪಾಧ್ಯಕ್ಷ ಡಿ.ಪಿ.ಪ್ರಕಾಶ್,ಕೌಲಂದೆ ನಾಗೇಶ್, ರೋಟರಿ ಅಧ್ಯಕ್ಷ ಶ್ರೀನಿವಾಸನ್‌, ಪ್ರಧಾನ ಕಾರ್ಯದರ್ಶಿ ನಾಗರಾಜು, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್, ಮುಖಂಡರಾದ ಮಹದೇವಶೆಟ್ಟಿ, ಎಸ್. ಸೋಮನಾಯಕ, ಕೆ.ಪಿ.ಸದಾಶಿವಮೂರ್ತಿ, ಎ.ಎಸ್‌.ಪ್ರದೀಪ್‌ ಆಲೂರು ಇತರರು ಇದ್ದರು.

‘ಸರ್ವರ ಹಿತಬಯಸುವ ರಾಜಕಾರಣಿ’

ಸ್ವತಃ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಪ್ರಸ್ತಾವಿತ ನಳಂದ ಬೌದ್ಧ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಬಂತೇ ಭೋದಿದತ್ತ ಥೇರಾ ಅವರು ಮಾತನಾಡಿ, ‘ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಸದಾ ಕಾಲ ಎಲ್ಲರಿಗೂ ಹಿತಬಯಸುವ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

‘ಸದೃದಯಿ ರಾಜಕಾರಣಿಯಾಗಿ ಜನರ ಮನ್ನಣೆಗೆ ಪಾತ್ರರಾಗಿರುವ ಧ್ರುವನಾರಾಯಣ ಅವರ ಹುಟ್ಟಹಬ್ಬವನ್ನು ಅವರ ಅನುಪಸ್ಥಿತಿಯಲ್ಲಿ ಅಭಿಮಾನಿ ಬಳಗ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಅರ್ಥಪೂರ್ಣ ಕಾರ್ಯ. ಭಗವಾನ್ ಬುದ್ಧರು ಧ್ರುವ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಲಿ. ರಾಜಕಾರಣದಲ್ಲಿ ಅವರಿಗೆ ಉನ್ನತ ಸ್ಥಾನಮಾನ ಸಿಗಲಿ’ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.