
ಕೊಳ್ಳೇಗಾಲ: ‘ಹಾವುಗಳು ರೈತರ ಮಿತ್ರ. ಅವುಗಳ ಸಂರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ’ ಎಂದು ಸ್ನೇಕ್ ಮಹೇಶ್ ಹೇಳಿದರು.
ತಾಲ್ಲೂಕಿನ ತಿಮ್ಮರಾಜೀಪುರದ ಮೊರಾರ್ಜಿ ದೇಸಾಯಿ ವಸತಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ಕೊಳ್ಳೇಗಾಲ ವನ್ಯಜೀವಿ ವಲಯ ಆಶ್ರಯದಲ್ಲಿ ಆಯೋಜಿಸಿದ್ದ ಹಾವುಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ ಬಹುಮುಖ್ಯ. ಇಲಿಗಳು ಹಾವುಗಳ ಆಹಾರವಾಗಿದ್ದು, ರೈತರ ಬೆಳೆಯನ್ನು ಇಲಿಗಳು ತಿಂದು ನಾಶಪಡಿಸುವುದನ್ನು ತಪ್ಪಿಸುತ್ತದೆ. ಎಲ್ಲಾ ಹಾವುಗಳು ವಿಷಪೂರಿತ ಹಾವುಗಳು ಆಗಿರುವುದಿಲ್ಲ. ನಾಗರಹಾವು, ಮಂಡಲದ ಹಾವು ಮತ್ತು ಕಟ್ಟಹಾವು ವಿಷದಿಂದ ಕೂಡಿದ್ದು, ಅವುಗಳ ಬಗ್ಗೆ ಜ್ಞಾನ ಹೊಂದಬೇಕು. ಹಾವು ಕಡಿತಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಹಾಗೂ ಹಾವು ಕಡಿತಕ್ಕೆ ಒಳಗಾದ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಬೇಗ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ’ ಸಲಹೆ ನೀಡಿದರು.
‘ಹಾವುಗಳಿಗೆ ಹೊರಭಾಗದ ಕಿವಿ ಇಲ್ಲದೆ, ಒಳಭಾಗದ ಕಿವಿಗಳಿದ್ದು, ಕಂಪನದಿಂದ ಮಾತ್ರ ಗ್ರಹಿಕೆಯು ಅನುಭವಕ್ಕೆ ಬರುತ್ತದೆ ಹೊರತು ಎಷ್ಟೇ ಶಬ್ದ ಮಾಡಿದರು ಅದಕ್ಕೆ ಕೇಳಿಸುವುದಿಲ್ಲ. ಪುಂಗಿಯ ಶಬ್ದಕ್ಕೆ ಹುತ್ತದಿಂದ ಹೊರಕ್ಕೆ ಬರುವುದು ಮತ್ತು ನೃತ್ಯ ಮಾಡುವುದು, 5 ಹೆಡೆ ಮತ್ತು 7 ಹೆಡೆ ಹಾವು, ಹಾವಿನ ದ್ವೇಷ ಹನ್ನೆರೆಡು ವರ್ಷ ಇವೆಲ್ಲ ಸುಳ್ಳು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹಾವುಗಳ ಜೀವನ ಶೈಲಿ, ಹಾವುಗಳ ಬಗ್ಗೆ ಇರುವ ಮೂಢನಂಬಿಕೆ ಇತರೆ ಹಲವಾರು ಪ್ರಶ್ನೆಗಳನ್ನು ಕೇಳಿ ವಿವರವಾದ ಮಾಹಿತಿ ಪಡೆದುಕೊಂಡರು.
ಉಪವಲಯ ಅರಣ್ಯ ಅಧಿಕಾರಿ ಅನಂತರಾಮು, ಪ್ರಾಂಶುಪಾಲ ಶೋಯಬ್ ಪಾಷಾ, ನಿಲಯ ಪಾಲಕ ಶಿವಾನಂದಯ್ಯ, ದೀಪಾ, ಶಾಲಾ ಸಿಬ್ಬಂದಿ ಎಲ್ಲಪ್ಪ ಗಡಗೇನವರ, ನಮಿತಾ ತಿಮ್ಮಪ್ಪ ಮಡಿವಾಳ, ಸುನಿಲ್ ಬಸಪ್ಪ ಬೆಳವಿ, ರಾಜು, ಗಸ್ತು ಅರಣ್ಯಪಾಲಕ, ಶಿವಮ್ಮ, ಆಕಾಶ್ ಸೋಪನಾ ಜೋಶಿ, ಅರಣ್ಯ ವೀಕ್ಷಕರು, ಮುಕುಂದ, ಗೋವಿಂದ, ಸಿದ್ದು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.