ADVERTISEMENT

ಚಾಮರಾಜನಗರ | ಉರಗ ಬಾಧೆ ಹೆಚ್ಚಳ; ಸಂಚರಿಸುವಾಗ ಇರಲಿ ಎಚ್ಚರ

ಮಳೆಗಾಲದಲ್ಲಿ ಸಂಚಾರ ಹೆಚ್ಚಳ: ಮನೆ, ಕೊಟ್ಟಿಗೆ, ಹೊಲಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಾವುಗಳು

ಎನ್.ಮಂಜುನಾಥಸ್ವಾಮಿ
Published 15 ಜೂನ್ 2025, 7:18 IST
Last Updated 15 ಜೂನ್ 2025, 7:18 IST
ಯಳಂದೂರು ತಾಲ್ಲೂಕಿನ ದುಗ್ಗಹಟ್ಟಿ ರಾಜೇಶ್ ಅವರ ತೋಟದ ಮನೆಯಲ್ಲಿ ರಕ್ಷಣೆ ಮಾಡಲಾದ ನಾಗರಹಾವು
ಯಳಂದೂರು ತಾಲ್ಲೂಕಿನ ದುಗ್ಗಹಟ್ಟಿ ರಾಜೇಶ್ ಅವರ ತೋಟದ ಮನೆಯಲ್ಲಿ ರಕ್ಷಣೆ ಮಾಡಲಾದ ನಾಗರಹಾವು   

ಯಳಂದೂರು: ತಾಲ್ಲೂಕಿನಾದ್ಯಂತ ಉರಗ ಬಾಧೆ ಹೆಚ್ಚಾಗಿದೆ. ಶಾಲಾ-ಕಾಲೇಜು, ಹೊಲ–ಗದ್ದೆ, ತೋಟದ ಮನೆ, ನಿರ್ವಹಣೆಯಿಲ್ಲದ ಕಟ್ಟಡಗಳ ಸುತ್ತಲೂ ಹಾವುಗಳು ಕಾಣಿಸಿಕೊಳ್ಳುತ್ತಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಮನೆ, ಕೃಷಿ ಪಂಪ್ ಸೆಟ್, ಜಮೀನುಗಳಲ್ಲಿ ಉರಗಗಳು ಕಂಡುಬರುತ್ತಿವೆ.

ತಾಲ್ಲೂಕಿನ ಕಾಡಿನಂಚಿನ ಗ್ರಾಮಗಳು ಹಾಗೂ ಬಯಲು ಪ್ರದೇಶಗಳಲ್ಲಿ ಹಾವುಗಳ ಹಾವಳಿ ಹೆಚ್ಚಾಗಿದ್ದು ವಿಷಪೂರಿತ ಮಂಡಲದ ಹಾವು, ನಾಗರಹಾವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಜೂನ್ ಹಾವುಗಳ ವಂಶಾಭಿವೃದ್ಧಿಗೆ ಸೂಕ್ತ ಸಮಯವಾಗಿದ್ದು, ಮಳೆಯ ನೀರಿನೊಡನೆ ಹಾವಿನ ಮರಿಗಳು ಹೆಚ್ಚಾಗಿ ಕಾಣಸಿಗುತ್ತಿವೆ. ಮಳೆಯ ಸಮಯ ಸುರಕ್ಷಿತ ಪ್ರದೇಶದಲ್ಲಿ ಅಡಗಿಕೊಳ್ಳುವ ಭರದಲ್ಲಿ ಜನವಸತಿ ಪ್ರದೇಶ, ಕೊಟ್ಟಿಗೆ ಅಥವಾ ಶೌಚಾಲಯಗಳ  ಸಂದುಗಳಲ್ಲಿ ಸೇರಿಕೊಳ್ಳುತ್ತಿವೆ ಎನ್ನುತ್ತಾರೆ ಉರಗ ತಜ್ಞರು.

‘ಮನೆಯೊಳಗೆ, ಛಾವಣಿ, ವಿದ್ಯುತ್ ಬೋರ್ಡ್, ಜಮೀನುಗಳಲ್ಲಿ ಕಾಣುವ ಹಾವುಗಳನ್ನು ಹಿಡಿಯಲು ಪ್ರತಿ ದಿನ 10ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಮೇ-ಜೂನ್ ಅವಧಿಯಲ್ಲಿ ನಾಗರಹಾವು ಹಾಗೂ ಮಂಡಲದ ಹಾವುಗಳು ಹೆಚ್ಚು ಹಿಡಿದಿದ್ದೇನೆ. ಹೆಬ್ಬಾವುಗಳು ಹೆಚ್ಚಾಗಿ ಕೋಳಿಗೂಡು, ಕಬ್ಬಿನಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕೆಲವು ಕಡೆಗಳಲ್ಲಿ ವಿಷರಹಿತ ಉರಗಗಳು ಸಿಕ್ಕಿವೆ ಎನ್ನುತ್ತಾರೆ ಉರಗ ತಜ್ಞ ಸಂತೇಮರಹಳ್ಳಿ ಸ್ನೇಕ್ ಮಹೇಶ್.

ADVERTISEMENT

ಮಳೆಗಾಲದಲ್ಲಿ ಮೊಟ್ಟೆಯಿಂದ ಮರಿಗಳು ಹೊರಬರುವ ತನಕ ಹಾವುಗಳು ಕಾವು ಕೊಡುತ್ತವೆ. ಹಾವಿನ ಮರಿಗಳೂ ತೀಕ್ಷ್ಣವಾದ ವಿಷಕಾರಿ ಅಂಶ ಹೊಂದಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಸಾಮಾನ್ಯವಾಗಿ ಹಾವುಗಳು ಜನವಸತಿ ಇರುವ ಕಡೆಗಳಲ್ಲಿ ಸಣ್ಣಪುಟ್ಟ ಬಿಲಗಳಲ್ಲಿ ವಾಸಿಸುತ್ತವೆ’ ಎಂದು ಮಾಹಿತಿ ನೀಡಿದರು.

ರಕ್ತಮಂಡಲ, ಮಂಡಲ ಹಾಗೂ ನಾಗರಹಾವು ಪ್ರಭೇದಗಳು ತೀವ್ರ ವಿಷಕಾರಿಯಾಗಿದ್ದು ಹೆಚ್ಚಿನ ಪ್ರಭೇದದ ಉರಗಗಳು ವಿಷರಹಿತವಾಗಿವೆ. ಹಾವುಗಳು ಪರಿಸರವನ್ನು ಸಮತೋಲನವಾಗಿಡಲು ಸಹಕಾರಿಯಾಗಿವೆ. ರೈತರ ಬೆಳೆ ನಾಶಮಾಡುವ ಇಲಿ, ಹೆಗ್ಗಣಗಳ ನಿಯಂತ್ರಣವನ್ನು ಹಾವುಗಳು ಮಾಡುತ್ತವೆ. ಹೆಬ್ಬಾವು ಗಾತ್ರದಲ್ಲಿ ದೊಡ್ಡದಾಗಿದ್ದು ವಿಷಕಾರಿಯಲ್ಲ, ತೊಂದರೆಯನ್ನೂ ನೀಡುವುದಿಲ್ಲ. ಹಾವುಗಳನ್ನು ಕಂಡಾಗ ಕೊಲ್ಲದೆ ಸಂರಕ್ಷಿಸಬೇಕು ಎನ್ನುತ್ತಾರೆ ಸ್ನೇಕ್ ಮಹೇಶ್‌.

ಹಾವುಗಳಿಗೆ ಭಯ ಪಡಬೇಕಿಲ್ಲ, ಅವುಗಳಿಗೆ ತೊಂದರೆ ಕೊಡದ ಹೊರತು ಕಚ್ಚಲು ಮುಂದಾಗುವುದಿಲ್ಲ. ಅರಣ್ಯ ಮತ್ತು ಪರಿಸರ ಜೀವಜಾಲದ ಬಹುಮುಖ್ಯ ಭಾಗವಾಗಿರುವ ಹಾವುಗಳು ಹೆಚ್ಚಾಗಿ ನಿರುಪದ್ರವಿಗಳಾಗಿವೆ. ಬಿಆರ್‌ಟಿ ಅರಣ್ಯದ ಸುತ್ತಮುತ್ತ 25ಕ್ಕೂ ಹೆಚ್ಚಿನ ಬಗೆಯ ಹಾವುಗಳಿದ್ದು, ನೆಲವಾಸಿ ಮತ್ತು ವೃಕ್ಷ ವಾಸಿಗಳಾಗಿವೆ.

ಹಪ್ಪಟೆ, ಅಟ್ಟ, ಬಿದಿರು, ಪಿಟ್ ವೈಪರ್, ಬ್ಲಾಕ್ ಕೋರಲ್ ಹಾಗೂ ನಾಗರಹಾವು ಮಾತ್ರ ವಿಷಕಾರಿಯಾಗಿದ್ದು ಉಳಿದ ಬಹುತೇಕ ಹಾವುಗಳು ವಿಷರಹಿತವಾಗಿದ್ದು ಸುತ್ತಮುತ್ತ ಕಂಡುಬರುತ್ತವೆ ಎನ್ನುತ್ತಾರೆ ಉರಗ ತಜ್ಞರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯ

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಆ್ಯಂಟಿ ಸ್ನೇಕ್ ವೆನಮ್ (ಎಎಸ್‌ವಿ) ಚುಚ್ಚುಮದ್ದು ಲಭ್ಯವಿದೆ. 50 ವಯಲ್ ಸಂಗ್ರಹಿಸಿ ಇಡಲಾಗಿದೆ. ಕೆಲವು ತಿಂಗಳ ಹಿಂದಷ್ಟೆ ವಿಷದ ಹಾವು ಕಡಿತಕ್ಕೆ ಒಳಗಾಗಿ ಚಿಕಿತ್ಸೆಗೆ ಬಂದ ವ್ಯಕ್ತಿಯನ್ನು ಬದುಕಿಸಲಾಗಿದೆ. ಔಷಧಿ ಖಾಲಿಯಾದರೆ ಎಬಿಆರ್‌ಕೆ ನಿಧಿಯಡಿ ಖರೀದಿಸಲು ಅವಕಾಶ ಇದೆ. ಹಾವು ಕಡಿತಕ್ಕೆ ಒಳಗಾದವರು ನಿರ್ಲಕ್ಷ್ಯ ತೋರದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಹೇಳಿದರು.

‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ಕೊಡಿಸಿ

ಹಾವು ಕಡಿತಕ್ಕೆ ಒಳಗಾದವರನ್ನು 45 ನಿಮಿಷದ ಒಳಗೆ (ಗೋಲ್ಡನ್ ಅವರ್) ಆಸ್ಪತ್ರೆಗೆ ಕರೆತಂದರೆ ಜೀವ ಉಳಿಸಬಹುದು. ಹಾವು ಕಡಿತಕ್ಕೆ ಒಳಗಾದವರಿಗೆ ಧೈರ್ಯ ತುಂಬಬೇಕು ಕಡಿತದ ಸ್ಥಳಕ್ಕೆ ಕ್ರೇಪ್ ಬ್ಯಾಂಡೇಜ್ ಕಟ್ಟಿ ಆಸ್ಪತ್ರೆಗೆ ಕರೆತರಬೇಕು ಹಾವು ಕಡಿತ ಜಾಗವನ್ನು ಬ್ಲೇಡ್ ನಿಂದ ಕೊಯ್ದು ಹಾಕುವುದು ಬಿಗಿಯಾಗಿ ದಾರ ಕಟ್ಟುವುದು ಕಚ್ಚಿದ ಸ್ಥಳಕ್ಕೆ ಬಾಯಿ ಹಾಕಿ ರಕ್ತ ಹೊರತೆಗೆಯುವುದು ನಾಟಿ ವೈದ್ಯರಿಂದ ಔಷಧಿ ಪಡೆಯುವುದನ್ನು ಮಾಡಬಾರದು ಎನ್ನುತ್ತಾರೆ ಸ್ನೇಕ್ ಮಹೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.