ಸಂತೇಮರಹಳ್ಳಿ: ಹೋಬಳಿ ಕೇಂದ್ರದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣವಾಗುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ನಿರಂತರವಾಗಿ ವಿದ್ಯುತ್ ನೀಡಲಾಗುತ್ತದೆ ಎಂದು ಚಾಮರಾಜನಗರ ಸೆಸ್ಕ್ ವಿಭಾಗದ ಇಇ ಪ್ರದೀಪ್‌ಕುಮಾರ್ ತಿಳಿಸಿದರು.
ಇಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಉಪ ವಿಭಾಗ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
‘ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ 86 ಮೇಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ 16 ಕಡೆಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಚಾಮರಾಜನಗರ ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ಸೋಲಾರ್ ಪಾರ್ಕ್ ಮೂಲಕ ವಿದ್ಯುತ್ ಪೂರೈಕೆಯಾಗುತ್ತಿದೆ. ಅದೇ ರೀತಿಯಾಗಿ ಸಂತೇಮರಹಳ್ಳಿ ಹೋಬಳಿ ಜನ್ನೂರು ಗ್ರಾಮದಲ್ಲಿರುವ 23 ಎಕರೆ ಸರ್ಕಾರಿ ಜಮೀನಿನಲ್ಲಿ 2.9 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುವ ಹಿನ್ನೆಲೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಈಗಾಗಲೇ ಜಾಗ ಗುರುತಿಸಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಸಂತೇಮರಹಳ್ಳಿ ಹೋಬಳಿ ಕೃಷಿ ಪಂಪ್ ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ’ ಎಂದರು.
‘ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸೌರಗೃಹ ಉಚಿತ ವಿದ್ಯುತ್ ಯೋಜನೆಯಡಿ ಮಾಸಿಕ ವಿದ್ಯುತ್ ಬಿಲ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಗೃಹ ಬಳಕೆ ಗ್ರಾಹಕರು ಮನೆಗಳ ಕಟ್ಟಡದಲ್ಲಿ ಸೌರ ಘಟಕ ಆಳವಡಿಸಲು ರಿಯಾಯಿತಿ ದರದಲ್ಲಿ ಸೋಲಾರ್ ಆಳವಡಿಸಿಕೊಳ್ಳಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ಗ್ರಾಹಕರು ಮುಂದಾಗಬೇಕು. ಸಾರ್ವಜನಿಕರಿಗೆ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ನಿಟ್ಟಿನಲ್ಲಿ 3 ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆಯನ್ನು ಆಯೋಜನೆ ಮಾಡಲಾಗುತ್ತಿದೆ. ಈ ಸಭೆಯಲ್ಲಿ ಬರುವ ದೂರುಗಳ ಆನುಸಾರವಾಗಿ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚು ಒತ್ತು ನೀಡಲಾಗುತ್ತದೆ’ ಎಂದರು.
ದೂರುಗಳು: ಜಮೀನಿನಲ್ಲಿ ಲೈನ್ ಸಡಿಲ, ಮನೆ ಬಳಿ ಲೈನ್ ಬದಲಾವಣೆ, ಹೆಚ್ಚವರಿ ಬಿಲ್ ಮೊತ್ತ ಸೇರಿದಂತೆ ಹಲವಾರು ದೂರುಗಳು ಸಭೆಯಲ್ಲಿ ಕೇಳಿ ಬಂದವು.
ಪ್ರಭಾರ ಎಇಇ ಮುದ್ದುರಾಜು, ಹಿರಿಯ ಸಹಾಯಕ ಜನಾರ್ದನ್, ಜೆಇಗಳಾದ ತಿಪ್ಪೇಸ್ವಾಮಿ, ಮಧು, ಮನೋಜ್‌ಕುಮಾರ್, ಸತೀಶ್, ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.