ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಒಂದೂವರೆ ಎಕರೆ ಜಮೀನಿನಲ್ಲಿ ಸೋಲಿಗರ ಬಂಗ್ಲೆಪೋಡಿನ ರಾಮೇಗೌಡರು ಅದೇ ಬೆಟ್ಟದ ಕಾಡಿನಲ್ಲಿ ವಿನಾಶದ ಅಂಚಿನಲ್ಲಿರುವ ಅಪರೂಪದ ಸಸ್ಯ ಪ್ರಭೇದಗಳ ನರ್ಸರಿ ನಿರ್ಮಿಸಿದ್ದಾರೆ. ಆದರೆ ಇಲ್ಲಿ ಈ ಸಸ್ಯಗಳನ್ನು ಪೋಷಿಸಲು ನೀರಿನ ಮೂಲ ಇಲ್ಲ. ಈ ಸಸ್ಯಗಳ ರಕ್ಷಣೆಗೆ ಕೊಳವೆಬಾವಿ ಕೊರೆಸಲು ಅನುಮತಿ ನೀಡುವಂತೆ 15 ವರ್ಷಗಳಿಂದ ರಾಮೇಗೌಡರು ಗೋಗರೆಯುತ್ತಿದ್ದಾರೆ
ಸಸ್ಯಗಳು ಬೇಸಿಗೆಯಲ್ಲಿ ನೀರಿಲ್ಲದೆ ಸೊರಗುತ್ತಿರುವುದರಿಂದ, ನೆರವಾಗುವಂತೆ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.
‘ನರ್ಸರಿಯಲ್ಲಿ ನೀರಿನ ಮೂಲವಿಲ್ಲದೆ ಸಾವಿರಾರು ಗಿಡಗಳಿಗೆ ನೀರುಣಿಸುವುದು ಸಮಸ್ಯೆಯಾಗುತ್ತಿದೆ. ಬೇಸಿಗೆ ಧಗೆಯೂ ಹೆಚ್ಚಾಗುತ್ತಿರುವುದರಿಂದ ಹೊರಗಿನಿಂದ ನೀರು ಹೊಂದಿಸುವುದು ಸವಾಲಾಗಿದೆ. ಸರ್ಕಾರವು ಅರಣ್ಯ ನಿಯಮಗಳನ್ನು ಬದಿಗಿಟ್ಟು, ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಮತಿ ನೀಡಿದರೆ ದಾನಿಗಳ ನೆರವಿನಿಂದ ಕೊಳವೆ ಬಾವಿ ಕೊರೆಸಿ ಕಾಪಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.
‘ಇದು ಹುಲಿ ಸಂರಕ್ಷಿತ ಪ್ರದೇಶ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಸ್ವಂತ ಖರ್ಚಿನಲ್ಲಿ ಹೊರಗಿನಿಂದ ನೀರು ತರಿಸಿ ಗಿಡಗಳಿಗೆ ಉಣಿಸುತ್ತಿದ್ದೇನೆ. ಈ ವರ್ಷ ಬಿಸಿಲಿನ ಝಳ ಹೆಚ್ಚಾಗಿರುವುದು ಆತಂಕ ಮೂಡಿಸಿದೆ’ ಎನ್ನುತ್ತಾರೆ.
ನರ್ಸರಿ ವಿಶೇಷ: ಅವರ ‘ಜಡೇರುದ್ರಸ್ವಾಮಿ ನರ್ಸರಿ’ ಅರಣ್ಯ ಕೋಶದಂತಿದೆ. ಕಾಡಿನೊಳಗಿರುವ ಅಪರೂಪದ ವೃಕ್ಷಗಳ ಬೀಜಗಳಿಂದಲೇ ಸಸಿ ಮಾಡಿ, ಜೀವವೈವಿಧ್ಯ ರಕ್ಷಣೆಯ ಆಸಕ್ತಿಯುಳ್ಳ ಸಂಘ–ಸಂಸ್ಥೆಗಳಿಗೂ ನೀಡುತ್ತಿದ್ದಾರೆ.
ಬಿಕ್ಕಿಲು, ಏಕಮುಖ ರುದ್ರಾಕ್ಷಿ, ಕಾನು ದೂಪ, ಜಾಲಾರಿ, ಮಾಗಳಿ ಬಳ್ಳಿ ಬೇರು, ಕಾಡು ನೆಲ್ಲಿಕಾಯಿ, ಅಳಲೆಕಾಯಿ, ಕಾಡು ಮಾವು ಸಹಿತ ನೂರಾರು ತಳಿಯ ಸಸ್ಯಗಳು ಅಲ್ಲಿವೆ. ಕಾಡಿನಲ್ಲಿ ಮಾತ್ರ ಕಾಣಸಿಗುವ ವಿಶಿಷ್ಟ ಹಣ್ಣು, ಗಿಡ ಮೂಲಿಕೆಗಳಿವೆ. ಪ್ರತಿಯೊಂದು ಗಿಡದ ವೈಶಿಷ್ಟ್ಯ, ಔಷಧೀಯ ಗುಣ, ಯಾವ ಕಾಲದಲ್ಲಿ ನೆಟ್ಟರೆ ಸಸಿಯಾಗುತ್ತದೆ, ಹೂ ಬಿಡುತ್ತದೆ, ಹಣ್ಣು ಕೊಡುತ್ತದೆ ಎಂಬ ತಿಳಿವನ್ನೂ ಅವರು ಹಂಚುತ್ತಿದ್ದಾರೆ.
ಅನುಮತಿ ಕೋರಿ ಅರಣ್ಯ ಇಲಾಖೆಗೆ 15 ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದ್ದು ಸ್ಪಂದನೆ ದೊರೆತಿಲ್ಲ. ವಿಶೇಷ ಪ್ರಕರಣವಾಗಿ ಪರಿಗಣಿಸಿ ಅನುಮತಿ ನೀಡಬೇಕು.–ರಾಮೇಗೌಡ, ಸೋಲಿಗರು
ಅರಣ್ಯ ಕಾನೂನು ಪ್ರಕಾರ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಅನುಮತಿ ನೀಡಬಹುದು. ರಾಮೇಗೌಡರ ಮನವಿಯನ್ನು ತಜ್ಞರ ಸಮಿತಿಯ ಮುಂದಿರಿಸಲಾಗುವುದು.–ಶ್ರೀಪತಿ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.