ADVERTISEMENT

ರಾಮ ಮಂದಿರಕ್ಕೆ ಭೂಮಿಪೂಜೆ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 15:34 IST
Last Updated 4 ಆಗಸ್ಟ್ 2020, 15:34 IST
ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯುವ ಕಾರ್ಯಕ್ರಮದ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಶ್ವಾನದಳದ ಸಿಬ್ಬಂದಿ ಮಂಗಳವಾರ ರಾತ್ರಿ ಚಾಮರಾಜನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದ ಎದುರು ಪರಿಶೀಲನೆ ನಡೆಸಿದರು
ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯುವ ಕಾರ್ಯಕ್ರಮದ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಶ್ವಾನದಳದ ಸಿಬ್ಬಂದಿ ಮಂಗಳವಾರ ರಾತ್ರಿ ಚಾಮರಾಜನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದ ಎದುರು ಪರಿಶೀಲನೆ ನಡೆಸಿದರು   

ಚಾಮರಾಜನಗರ: ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ನಡೆಯಲಿರುವ ಭೂಮಿಪೂಜೆ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲೆಯ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಈ ಸಂಬಂಧ ಎಲ್ಲ ದೇವಾಯಗಳಿಗೂ ಸೂಚನೆ ನೀಡಿದ್ದಾರೆ. ಖಾಸಗಿ ದೇವಾಲಯಗಳಲ್ಲೂ ಪೂಜೆ ನಡೆಸಬೇಕು ಎಂದು ಅವರು ಸುತ್ತೋಲೆಯಲ್ಲಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯುವ ಸಂದರ್ಭದಲ್ಲೇ ದೇವಾಲಯಗಳಲ್ಲೂ ಪೂಜೆ ನಡೆಯಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅದರಂತೆ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಪೂಜೆ ನಡೆಸಲು ಸಿದ್ಧತೆ ನಡೆದಿದೆ.

ADVERTISEMENT

‘ಸರ್ಕಾರದ ಸೂಚನೆಯಂತೆ ಮಲೆ ಮಹದೇಶ್ವರಸ್ವಾಮಿಗೆ ಪೂಜೆ ನಡೆಯಲಿದೆ’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಮಂದಿರಗಳಲ್ಲಿ ವಿಶೇಷಪೂಜೆ: ಮಂದಿರ ನಿರ್ಮಾಣದ ಭೂಮಿ ಪೂಜೆ ಸಾಂಗವಾಗಿ ನೆರವೇರಲೆಂದು ಪ್ರಾರ್ಥಿಸಿ ಚಾಮರಾಜನಗರದ ಶಂಕರಪುರದಲ್ಲಿರುವ ಶ್ರೀರಾಮ ಮಂದಿರ ಹಾಗೂ ಅಗ್ರಹಾರ ಬೀದಿಯಲ್ಲಿರುವ ಪಟ್ಟಾಭಿರಾಮಮಂದಿರಗಳಲ್ಲಿ ವಿಶೇಷ ಪೂಜೆ ನಡೆಯಲಿವೆ. ಪಟ್ಟಾಭಿರಾಮಮಂದಿರದಲ್ಲಿ ಶ್ರೀರಾಮ ತಾರಕ ಹೋಮ ನಡೆಯಲಿದೆ.

ಭೂಮಿಪೂಜೆ ಕಾರ್ಯಕ್ರಮವನ್ನು ಹಿಂದೂಗಳು ಹಬ್ಬದಂತೆ ಸಂಭ್ರಮಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಈಗಾಗಲೇ ಕರೆ ನೀಡಿದೆ. ಮನೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಬೇಕು. ದೇವರಿಗೆ ದೀಪ ಹಚ್ಚಿ, ರಾಮತಾರಕ ಮಂತ್ರ ಜಪಿಸಬೇಕು ಎಂದು ಅದರ ಮುಖಂಡರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.