ADVERTISEMENT

ರಾಮ ಮಂದಿರಕ್ಕೆ ಭೂಮಿಪೂಜೆ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ರಾಮ ಭಕ್ತರಿಂದ ಕರ ಸೇವಕರಿಗೆ ಸನ್ಮಾನ, ಸಂಘಟನೆಗಳಿಂದ ಪೂಜೆ, ಪ್ರಾರ್ಥನೆ, ಹವನ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 13:41 IST
Last Updated 5 ಆಗಸ್ಟ್ 2020, 13:41 IST
ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕರಸೇವಕರಾಗಿ ಅಯೋಧ್ಯೆಗೆ ತೆರಳಿದ್ದವರಿಗೆ ರಾಮ ಭಕ್ತರು ಸನ್ಮಾನಿಸಿದರು
ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕರಸೇವಕರಾಗಿ ಅಯೋಧ್ಯೆಗೆ ತೆರಳಿದ್ದವರಿಗೆ ರಾಮ ಭಕ್ತರು ಸನ್ಮಾನಿಸಿದರು   

ಚಾಮರಾಜನಗರ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಬುಧವಾರ ನಡೆದ ಭೂಮಿಪೂಜೆ ಅಂಗವಾಗಿ ಮಹದೇಶ್ವರ ಬೆಟ್ಟ ಸೇರಿದಂತೆ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು.

ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಸಾಂಗವಾಗಿ ನೆರವೇರಲಿ ಮತ್ತು ಮಂದಿರ‌ ನಿರ್ಮಾಣ ಮಂಗಳಕರವಾಗಿ ಪೂರ್ಣಗೊಳ್ಳಲಿ ಎಂದು ಪ್ರಾರ್ಥಿಸಿ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಗಮಿಕರಾದ ಕರವೀರಸ್ವಾಮಿ ಅವರು ಮಹಾ ಸಂಕಲ್ಪ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಿದರು.

ಯಳಂದೂರು ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ, ಶಿವನಸಮುದ್ರದ ಮಧ್ಯರಂಗ ಸಮೂಹ ದೇವಾಲಯಗಳು, ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲ ದೇವಾಲಯಗಳಲ್ಲಿ ಪೂಜೆ ನಡೆಯಿತು.

ADVERTISEMENT

ನಗರದ ಶಂಕರಪುರದಲ್ಲಿರುವ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಅಗ್ರಹಾರ ಬೀದಿಯ ಪಟ್ಟಾಭಿರಾಮಮಂದಿರದಲ್ಲಿ ಶ್ರೀರಾಮ ತಾರಕ ಹವನ ನಡೆಯಿತು.

ಭೂಮಿಪೂಜೆ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನಗಳಲ್ಲಿ ಭಗವಾಧ್ವಜಗಳು ರಾರಾಜಿಸುತ್ತಿದ್ದವು. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶುಭಕೋರುವ ಫ್ಲೆಕ್ಟ್‌, ಬ್ಯಾನರ್‌ಗಳು ಅಲ್ಲಲ್ಲಿ ಕಂಡು ಬಂದವು.

ಕರಸೇವಕರಿಗೆ ಸನ್ಮಾನ: ನಗರದ ರಾಮಭಕ್ತರು ಒಟ್ಟಾಗಿ ಸೇರಿ 1992ರ ರಾಮ ಮಂದಿರ ಚಳವಳಿಯಲ್ಲಿ ಭಾಗವಹಿಸಿದ್ದ ಕರಸೇವಕರಿಗೆ ಸನ್ಮಾನ ಮಾಡಿದರು.

ಜಿಲ್ಲೆಯಲ್ಲಿ 34 ಮಂದಿ ಕರಸೇವಕರು ಚಳವಳಿಯಲ್ಲಿ ಭಾಗವಹಿಸಿದ್ದರು. ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ಸುದರ್ಶನಗೌಡ, ಮಂಜುನಾಥಗೌಡ, ವಿಜಯಕುಮಾರ್‌ಗೌಡ, ಎನ್‌.ಎಸ್‌.ಯೋಗೇಶ್‌, ಜಯರಾಮ್‌, ಶ್ರೀಕಂಠ, ಮಂಜುನಾಥ್‌, ನಂಜುಂಡಶೆಟ್ಟಿ, ಚಿದಂಬರಂ, ಪಿ.ಚಿನ್ನಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ರಾಮದಮುದ್ರದಿಂದ ಅಯೋಧ್ಯೆಗೆ ತೆರಳಿದ್ದ ದುರ್ಗಿಬೀದಿ ನಿವಾಸಿಯಾದ ಬಿಜೆಪಿ ಮುಖಂಡ ಮರಿಸ್ವಾಮಿ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ನಗರದ ಚಿಕ್ಕ ಅಂಗಡಿ ಬೀದಿಯಲ್ಲಿರುವ ಶ್ರೀರಾಮಮಂದಿರದಲ್ಲಿ ಕರಸೇವಕರಾಗಿ ತೆರಳಿದ್ದ ಚಿದಂಬರಂ, ಮಂಜುನಾಥ್ ಗೌಡ, ಸುದರ್ಶನ ಗೌಡ, ಶ್ರೀಕಂಠು ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.