ADVERTISEMENT

11,824 ಮಕ್ಕಳಲ್ಲಿ ವಾಕ್‌, ಶ್ರವಣ ಸಂಭಾವ್ಯ ಸಮಸ್ಯೆ: ಜಿಲ್ಲಾಧಿಕಾರಿ ಶಿಲ್ಪಾನಾಗ್

ಮಕ್ಕಳಲ್ಲಿ ವಾಕ್ ಶ್ರವಣ ಸಮಸ್ಯೆ ಗುರುತಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮ ಪ್ರಯಾಸ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:11 IST
Last Updated 17 ಡಿಸೆಂಬರ್ 2025, 6:11 IST
ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಅಂಗನವಾಡಿ ಮಕ್ಕಳ ವಾಕ್ ಮತ್ತು ಶ್ರವಣ ಪರೀಕ್ಷಾ ಹಾಗೂ ಪ್ರಯಾಸ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಚಾಲನೆ ನೀಡಿ ಮಾತನಾಡಿದರು
ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಅಂಗನವಾಡಿ ಮಕ್ಕಳ ವಾಕ್ ಮತ್ತು ಶ್ರವಣ ಪರೀಕ್ಷಾ ಹಾಗೂ ಪ್ರಯಾಸ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಚಾಲನೆ ನೀಡಿ ಮಾತನಾಡಿದರು   

ಸಂತೇಮರಹಳ್ಳಿ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶ್ರವಣ ಹಾಗೂ ವಾಕ್‌ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ಕಾರ್ಯಕ್ರಮ ‘ಪ್ರಯಾಸ್‌’ ರಾಜ್ಯದಲ್ಲಿ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಪ್ರಯಾಸ್ ಕಾರ್ಯಕ್ರಮದ ಪ್ರಯೋಜನವನ್ನು ಪೋಷಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದರು.

ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸಹಯೋಗದಲ್ಲಿ ಅಂಗನವಾಡಿ ಮಕ್ಕಳ ವಾಕ್ ಮತ್ತು ಶ್ರವಣ ಪರೀಕ್ಷಾ ಹಾಗೂ ಪ್ರಯಾಸ್ ಕಾರ್ಯಕ್ರಮಕ್ಕೆ ನೆರವು ನೀಡುತ್ತಿರುವ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಮಾತು ಬಾರದ, ಕಿವಿ ಕೇಳದ ಸಮಸ್ಯೆಗಳು ಕಂಡುಬಂದರೆ ಪೋಷ‌ಕರು ನಿರ್ಲಕ್ಷ್ಯ ವಹಿಸಬಾರದು. ಸಮಸ್ಯೆ ಗುರುತಿಸುವಲ್ಲಿ ತಡವಾದರೆ ಶೈಕ್ಷಣಿಕ ಕ್ಷಮತೆ ಕ್ಷೀಣವಾಗಿ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ನ್ಯೂನತೆಗಳನ್ನು ಆರಂಭದಲ್ಲಿ ಗುರುತಿಸಿ ಚಿಕಿತ್ಸೆ ಕೊಡಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ADVERTISEMENT

ಅಂಗನವಾಡಿ ಮಕ್ಕಳಲ್ಲಿ ವಾಕ್ ಹಾಗೂ ಶ್ರವಣ ಸಮಸ್ಯೆ ಕಾಣಿಸಿಕೊಂಡರೆ ತಪಾಸಣೆ ನಡೆಸಿ ಅಗತ್ಯ ಶ್ರವಣ ಸಾಧನಗಳನ್ನು ಒದಗಿಸುವ ಕಾರ್ಯವನ್ನು ಪ್ರಯಾಸ್ ಕಾರ್ಯಕ್ರಮದಡಿ ಮಾಡಲಾಗುತ್ತಿದೆ. ಸಂಪೂರ್ಣ ಉಚಿತವಾಗಿರುವ ಕಾರ್ಯಕ್ರಮಕ್ಕೆ ಸಿಆರ್‌ಆರ್‌ ನಿಧಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಆರಂಭವಾಗಿರುವ ಪ್ರಯಾಸ್ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದ್ದು ಎಲ್ಲೆಡೆಯಿಂದ ಮೆಚ್ಚುಗೆ ಪಡೆದಿದೆ. ಮಕ್ಕಳಿಗಷ್ಟೆ ಅಲ್ಲದೆ ಹಿರಿಯ ನಾಗರಿಕರಿಗೂ ಪ್ರಯಾಸ್ ಕಾರ್ಯಕ್ರಮ ವಿಸ್ತರಿಸಲು ಯೋಚಿಸಲಾಗುತ್ತಿದೆ. ವಾಕ್ ಹಾಗೂ ಶ್ರವಣ ಸಮಸ್ಯೆ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ಜಿಲ್ಲಾಡಳಿತದ ಗುರಿಯಾಗಿದೆ ಎಂದು ಶಿಲ್ಪಾನಾಗ್ ಹೇಳಿದರು.

ಪ್ರಯಾಸ್ ಕಾರ್ಯಕ್ರಮಕ್ಕೆ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ ನೆರವು ನೀಡುತ್ತಿದ್ದು ಚಿಕಿತ್ಸೆಗೆ ಹಣಕಾಸಿನ ನೆರವನ್ನು ರೋಟರಿ ಕ್ಲಬ್ ಆಫ್ ಮೈಸೂರು (ವೆಸ್ಟ್) ನೀಡುತ್ತಿದೆ. ಆಟೋಮೇಟಿವ್ ಆಕ್ಸಲ್ಸ್ ಸಂಸ್ಥೆ ಸೇರಿ ವಿವಿಧ ಸಂಸ್ಥೆಗಳ ಸಿಎಸ್‍ಆರ್ ನಿಧಿಯೂ ಕಾರ್ಯಕ್ರಮಕ್ಕೆ ನೆರವಾಗಿದೆ. ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿರುವ ಎಲ್ಲ ಸಂಸ್ಥೆಗಳಿಗೆ ಜಿಲ್ಲಾಡಳಿತ ಧನ್ಯವಾದ ಸಲ್ಲಿಸುತ್ತದೆ ಎಂದರು

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರಭಾರ ನಿರ್ದೇಶಕಿ ಡಾ.ಮಂಜುಳಾ ಮಾತನಾಡಿ, ಜಿಲ್ಲಾಡಳಿತದ ವಿಶೇಷ ಆಸಕ್ತಿ ಮತ್ತು ಕಾಳಜಿಯ ಫಲವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರಯಾಸ್‌ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಅತ್ಯಂತ ಯೋಜನಾಬದ್ದವಾಗಿ ಜಿಲ್ಲೆಯಲ್ಲಿ ಮಕ್ಕಳ  ವಾಕ್‌ ಮತ್ತು ಶಶ್ರವಣ ಸಮಸ್ಯೆಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು.

ಪ್ರಯಾಸ್ ಯೋಜನೆಗೆ ನೆರವು ನೀಡುತ್ತಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವೈದ್ಯರು, ಸಿಎಸ್‌ಆರ್ ಅಡಿ ಆರ್ಥಿಕ ಸಹಾಯ ಒದಗಿಸುತ್ತಿರುವ ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ಸಂಸ್ಥೆಯ ದೇವರಾಜ್, ರುದ್ರೇಶ್, ಷಡಕ್ಷರ ಸ್ವಾಮಿ, ಕಿರಣ್ ರಾಬರ್ಟ್, ಸ್ಯಾಂ ಚೆರಿಯನ್, ಆಟೋಮೇಟಿವ್‌ ಆಕ್ಸಲ್‌ ಸಂಸ್ಥೆಯ ದಯಾನಂದ್ ಬಿ.ಜಿ ಅವರನ್ನು ಸನ್ಮಾನಿಸಲಾಯಿತ. 

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರೊ. ಡಾ.ಎಂ.ಸಂದೀಪ್, ಡಾ. ಪ್ರೀತಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್‌.ಆರ್.ಸುರೇಶ್‌, ಕಾರ್ಯಕ್ರಮ ಸಂಯೋಜಕ ಶಿವಸ್ವಾಮಿ, ಸಿಎಸ್‍ಆರ್ ಸಮಾಲೋಚಕರಾದ ರಕ್ಷಿತಾ ಕಾರ್ಯಕ್ರಮದಲ್ಲಿ ಇದ್ದರು.

34935 ಮಕ್ಕಳ ತಪಾಸಣೆ

ಚಾಮರಾಜನಗರ ಜಿಲ್ಲೆಯಲ್ಲಿ 6 ವರ್ಷದೊಳಗಿನ ಎಲ್ಲ ಮಕ್ಕಳ ವಾಕ್ ಮತ್ತು ಶ್ರವಣ ತಪಾಸಣೆ  ನಡೆಯುತ್ತಿದೆ. ಅಂಗನವಾಡಿ ವ್ಯಾಪ್ತಿಯಲ್ಲಿ 6 ತಿಂಗಳಿಂದ 6 ವರ್ಷದೊಳಗಿನ 34935 ಮಕ್ಕಳನ್ನು ಗುರುತಿಸಿ ಪ್ರಾಥಮಿಕ ತಪಾಸಣೆ ನೆಡಸಲಾಗಿದ್ದು ಇವರಲ್ಲಿ 11824 ಮಕ್ಕಳಲ್ಲಿ ವಾಕ್‌ ಹಾಗೂ ಶ್ರವಣ ಸಮಸ್ಯೆ ಇರಬಹುದು ಎಂದು ಗುರುತಿಸಲಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ ಎರಡನೇ ಹಂತದ ತಪಾಸಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.