ADVERTISEMENT

SSLC ಫಲಿತಾಂಶ ಸುಧಾರಣೆಗೆ ವಿಭಿನ್ನ ಯತ್ನ: ಸೋಲಿಗ ಮಕ್ಕಳ ಮನೆಗೆ ಶಿಕ್ಷಕರ ನಡಿಗೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:44 IST
Last Updated 13 ಫೆಬ್ರುವರಿ 2026, 7:44 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಮಕ್ಕಳ ಹಾಡಿಗಳಿಗೆ ವಿಜಿಕೆಕೆ ಶಾಲೆಯ ಮುಖ್ಯ ಶಿಕ್ಷಕ ಸುಂದರೇಶ್ ಮತ್ತು ಶಿಕ್ಷಕರು ಭೇಟಿ ನೀಡಿ ಪೋಷಕರೊಡನೆ ಚರ್ಚಿಸಿದರು.
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಮಕ್ಕಳ ಹಾಡಿಗಳಿಗೆ ವಿಜಿಕೆಕೆ ಶಾಲೆಯ ಮುಖ್ಯ ಶಿಕ್ಷಕ ಸುಂದರೇಶ್ ಮತ್ತು ಶಿಕ್ಷಕರು ಭೇಟಿ ನೀಡಿ ಪೋಷಕರೊಡನೆ ಚರ್ಚಿಸಿದರು.   

ಯಳಂದೂರು: ತಾಲ್ಲೂಕಿನ ಪ್ರೌಢ ಶಾಲೆಗಳ ಶಿಕ್ಷಕರ ಚಿತ್ತ ಎಸ್ಎಸ್ಎಲ್‌ಸಿ ಮಕ್ಕಳ ಮನೆಗಳತ್ತ ನೆಟ್ಟಿದೆ. ಬೆಳಿಗ್ಗೆ ಮತ್ತು ಸಂಜೆ ಊರುಗಳಿಗೆ ತೆರಳಿ ಮಕ್ಕಳಿಗೆ ಅಭ್ಯಾಸ ಮಾಡಿಸುವಂತೆ ಪೋಷಕರಲ್ಲಿ ಜಾಗೃತಿ ಸುತ್ತಿದ್ದಾರೆ.

 ಬೋಧಕರು ಮನೆಮನೆ ಭೇಟಿನೀಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯ  ಕಲಿಕಾ ಕಾರ್ಡ್  ತೋರಿಸಿ ತಂದೆ-ತಾಯಿಯರಿಗೆ ಪರೀಕ್ಷೆಯ ಮಹತ್ವವನ್ನು ತಿಳಿಸುಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಶೇ 100 ಫಲಿತಾಂಶ ಹೆಚ್ಚಿಸಲು 18 ಪ್ರೌಢಶಾಲೆಗಳು 29 ಅಂಶಗಳ ಕಾರ್ಯಸೂಚಿ ಜಾರಿಗೆ ಬಂದಿವೆ.

7 ಸರ್ಕಾರಿ, 7 ಅನುದಾನಿತ, 2 ವಸತಿಯುತ ಹಾಗೂ 2 ಖಾಸಗಿ ಶಾಲೆಗಳ ಒಟ್ಟು 869 ವಿದ್ಯಾರ್ಥಿಗಳು ಮಾ.18ರ ಪರೀಕ್ಷಗೆ ಸಿದ್ಧತೆ ನಡೆಸುತ್ತಿದ್ದಾರೆ. ಹಿಂದುಳಿದ ಮತ್ತು ಬುಡಕಟ್ಟು ಮಕ್ಕಳು ಕಾಡಂಚಿನ ಪ್ರದೇಶ ಹಾಗೂ ಬಿಳಿಗಿರಿಬೆಟ್ಟದ ವಿಜಿಕೆಕೆ ಶಾಲೆಗಳಲ್ಲಿ ಹೆಚ್ಚು ದಾಖಲಾಗಿದ್ದಾರೆ. ಇವರ ಶೈಕ್ಷಣಿಕ ಪ್ರಗತಿ ಉತ್ತೇಜಿಸಲು ಮುಖ್ಯ ಶಿಕ್ಷಕರ ನೇತೃತ್ವದ ತಂಡವು ಅವರ ಮನೆಗೆ ಭೇಟಿ ನೀಡಿ,  ಓದಿನ ವಿಧಾಣವನ್ನು ಪರಿಶೀಲಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನು ಮತ್ತಷ್ಟು ಚುರುಕುಗೊಳಿಸಲು ಸಹಾಯಕವಾಗುತ್ತಿದೆ.

ADVERTISEMENT

‘ಶಾಲೆಯ ಸುತ್ತಮುತ್ತ ಹತ್ತಾರು ಹಾಡಿಗಳಿವೆ. ಕೆಲವರು ಹಾಸ್ಟೆಲ್‌ಗಳಲ್ಲಿ ನೆಲೆಸಿದ್ದರೆ,  ಕೆಲವರು ಮನೆಯಿಂದ ಬರುತ್ತಾರೆ. ಕಾಡಿನ ಮಕ್ಕಳಲ್ಲಿ ಗೈರು ಹಾಜರಿಯೂ ಹೆಚ್ಚಿದೆ. ಮಕ್ಕಳ ಪೋಷಕರು ಹಗಲು ಹೊತ್ತು  ಕೆಲಸಗಳಿಗೆ ತೆರವುದರಿಂದ ನಮಗೆ ಸಿಗುವುದು ಅಪರೂಪ. ಹಾಗಾಗಿ, ಸೋಲಿಗ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಕಾರ್ಯಕ್ರಮ ಆಯೋಜಿಸಿ ಉತ್ತೀರ್ಣತೆಗೆ ಒತ್ತು ನೀಡಲಾಗಿದೆ. ಶಿಕ್ಷಕರು ಸಂಜೆ 6ರಿಂದ ರಾತ್ರಿ 8ರವರಗೆ ಪೋಡು ಸುತ್ತಿ  ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಬೆಳಿಗ್ಗೆ ದೂರದ ಹಾಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ವಿಚಾರಿಸಿಕೊಳ್ಳುತ್ತಿದ್ದಾರೆ’ ಎಂದು ವಿಜಿಕೆಕೆ ಪ್ರೌಢಶಾಲೆಯ ಸುಂದರೇಶ್ ತಿಳಿಸಿದರು.

ಪ್ರಾಂಶುಪಾಲರು ಮತ್ತು ಶಿಕ್ಷಕರು ದಿಢೀರ್ ಎಂದು ಮನೆಗೆ ಬಂದು ಮಗುವಿನ ಕಲಿಕಾ ಸಾಮರ್ಥ್ಯವನ್ನು ಮನದಟ್ಟು ಮಾಡಿದ್ದಾರೆ. ಮಕ್ಕಳು ಹೇಗೆ ಓದುತ್ತಿದ್ದಾರೆ. ಬೆಳಗಿನ ಅವಧಿಯಲ್ಲಿ ಏನು ಮಾಡುತ್ತಾರೆ. ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಕ್ರಮ ಮೊದಲಾದ ಮಾಹಿತಿಯನ್ನು ನೀಡಿ ಸ್ಫೂರ್ತಿ ತುಂಬಿದ್ದು, ಪೋಷಕರಲ್ಲಿ ಸಂತಸ ತಂದಿದೆ ಎಂದು ಹೊಸಪೋಡಿನ ನಂಜೇಗೌಡ ಹೇಳಿದರು.

‘ಫಲಿತಾಂಶ ಸುಧಾರಣೆ ಪ್ರಯತ್ನವಾಗಿ ಪ್ರತಿ ವಿದ್ಯಾರ್ಥಿಯ ಮನೆಗೂ ಭೇಟಿ ನೀಡಿ ಅವರ ಓದಿನ ವೈಖರಿ ಗಮನಿಸಿ ಪೋಷಕರಿಗೂ ಸಲಹೆ ನೀಡಿದ್ದೇವೆ. ನಮಗೂ ಇದು ಹೊಸ ಅನುಭವ ನೀಡಿದ್ದು, ಶೇ 100 ಫಲಿತಾಂಶ ನೀಡುವ ಗುರಿ ಹೊಂದಿದ್ದೇವೆ. ಫೆ.23 ರಿಂದ 3ನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದ್ದು, ಇದರ ಫಲಿತಾಂಶದ ಆಧಾರದ ಮೇಲೆ ಮತ್ತೆ ಹೊಸ ಯೋಜನೆ ರೂಪಿಸಿಕೊಂಡು  ಮನೆಗಳಿಗೆ ತರಳುವ ಬಗ್ಗೆ ಪರಿಶೀಲಿಸಲಾಗುತ್ತದೆ’ ಎಂದು  ಸಂತೇಮರಹಳ್ಳಿ ಶಾಲೆಯ ಉಪ ಪ್ರಾಂಶುಪಾಲ ಪುಷ್ಪರಾಜ್ ತಿಳಿಸಿದರು.

ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಮಕ್ಕಳ ಹಾಡಿಗಳಿಗೆ ವಿಜಿಕೆಕೆ ಶಾಲೆಯ ಮುಖ್ಯ ಶಿಕ್ಷಕ ಸುಂದರೇಶ್ ಮತ್ತು ಶಿಕ್ಷಕರು ಭೇಟಿ ನೀಡಿ ಪೋಷಕರೊಡನೆ ಚರ್ಚಿಸಿದರು.
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಮಕ್ಕಳ ಹಾಡಿಗಳಿಗೆ ವಿಜಿಕೆಕೆ ಶಾಲೆಯ ಮುಖ್ಯ ಶಿಕ್ಷಕ ಸುಂದರೇಶ್ ಮತ್ತು ಶಿಕ್ಷಕರು ಭೇಟಿ ನೀಡಿ ಪೋಷಕರೊಡನೆ ಚರ್ಚಿಸಿದರು.

‘ಮೊಬೈಲ್ ತ್ಯಜಿಸಿದ ಮಕ್ಕಳು’

‘ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳು ಮತ್ತು ಮನೆ ಮಂದಿಯೊಡನೆ ಆಪ್ತ ಸಮಾಲೋಚನೆ ನಡೆಸುವುದರಿಂದ ಮಗು ಮೊಬೈಲ್ ವೀಕ್ಷಿಸುವುದನ್ನು ನಿಲ್ಲಿಸಿದೆ. ಟಿವಿ ಸಂಪರ್ಕ ಕಡಿತಗೊಳಿಸಿರುವುದರಿಂದ ಪುಸ್ತಕ ಓದು ಹಾಗೂ ಬರವಣಿಗೆಯತ್ತ ಮಕ್ಕಳು ತೊಡಗಿದ್ದಾರೆ. ಇದರಿಂದ ಮಕ್ಕಳಿಗೆ ಶಿಕ್ಷಕರ ಮನೆ ಭೇಟಿಯಿಂದ ‘ಥ್ರಿಲ್’ ಅನುಭವ ಆಗಿದ್ದು. ಫಲಿತಾಂಶ ಸುಧಾರಣೆ ಹೆಚ್ಚಿ ನಿರಂತರ ಗೈರು ಹಾಜರಿ ತಪ್ಪಿದೆ’ ಎಂದು  ಹೊನ್ನೂರು ಭೀಮ್ ರಾವ್ ರಾಮ್ ಜೀ ಪ್ರೌಢಶಾಲೆಯ ಕಾರ್ಯದರ್ಶಿ ಕೆ.ಎನ್.ಪ್ರಸಾದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.