ADVERTISEMENT

ಎನ್‌.ಮಹೇಶ್‌ ಮುಂದಿನ ನಡೆ ಏನು?

ಬಿಎಸ್‌ಪಿ ಬಾಗಿಲು ಶಾಶ್ವತವಾಗಿ ಬಂದ್‌: ಪಕ್ಷದ ವರಿಷ್ಠರ ವಿರುದ್ಧ ಬೆಂಬಲಿಗರ ಅಸಮಾಧಾನ

ಸೂರ್ಯನಾರಾಯಣ ವಿ
Published 4 ಸೆಪ್ಟೆಂಬರ್ 2019, 14:58 IST
Last Updated 4 ಸೆಪ್ಟೆಂಬರ್ 2019, 14:58 IST
ಎನ್.ಮಹೇಶ್
ಎನ್.ಮಹೇಶ್   

ಚಾಮರಾಜನಗರ: ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.

ಅವರ ಕೆಲವು ಬೆಂಬಲಿಗರು ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂದು ಹೇಳಿದರೆ, ಇನ್ನೂ ಕೆಲವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಈ ಎರಡನ್ನೂ ಎನ್‌.ಮಹೇಶ್‌ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸ್ವತಂತ್ರವಾಗಿರುವುದಾಗಿ ಹೇಳಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವ ಸಂದರ್ಭದಲ್ಲಿ ಸದನಕ್ಕೆ ಗೈರುಹಾಜರಾಗಿ ತಟಸ್ಥ ನಿಲುವು ತಾಳಿದ್ದ ಎನ್‌.ಮಹೇಶ್‌ ಅವರನ್ನು, ಪಕ್ಷದ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಮಾಯಾವತಿ ಅವರು ಉಚ್ಚಾಟನೆ ಮಾಡಿದ್ದರು.

ADVERTISEMENT

ಇದು ತಾತ್ಕಾಲಿಕ ಉಚ್ಚಾಟನೆಯಾಗಿದ್ದು, ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ಅಭಿಪ್ರಾಯವನ್ನು ಸ್ವತಃ ಎನ್‌.ಮಹೇಶ್‌ ಮಾಡಿದ್ದರು. ಅವರ ಬೆಂಬಲಿಗರು ಕೂಡ ಹೀಗೆ ಹೇಳುತ್ತಲೇ ಬಂದಿದ್ದರು. ಆದರೆ, ಕಳೆದ ತಿಂಗಳು 29ರಂದು ಲಖನೌದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಮಾಯಾವತಿ ಅವರು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ಸಮಿತಿಗಳನ್ನು ವಿಸರ್ಜಿಸಿ ಹೊಸ ಸಮಿತಿಗಳನ್ನು ನೇಮಿಸಿದ್ದಾರೆ. ಆ ಮೂಲಕ, ಎನ್‌.ಮಹೇಶ್‌ ಅವರಿಗೆ ಪಕ್ಷದ ಬಾಗಿಲು ಶಾಶ್ವತ ಬಂದ್‌ ಆದಂತಾಗಿದೆ. ಇದರಿಂದ ಕೆರಳಿರುವ ಎನ್‌.ಮಹೇಶ್‌ ಬೆಂಬಲಿಗರು ರಾಜ್ಯದಾದ್ಯಂತ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದಾರೆ.

‘ಪಕ್ಷದಿಂದ ಉಚ್ಚಾಟನೆ ಮಾಡಿದ ನಂತರ ಕಾದು ನೋಡುವ ತಂತ್ರ ಅನುಸರಿಸಿದ್ದ ಎನ್‌.ಮಹೇಶ್‌ ಅವರು ಮಾಯಾವತಿ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡಿಲ್ಲ. ಒಂದು ವೇಳೆ ಅವರು ಭೇಟಿ ಮಾಡಿ ವಾಸ್ತವಾಂಶವನ್ನು ವಿವರಿಸಿದ್ದರೆ ಮಾಯಾವತಿ ಅವರು ಮನಸ್ಸು ಬದಲಾಯಿಸುವ ಸಾಧ್ಯತೆ ಇತ್ತು’ ಎಂದು ಹೇಳುತ್ತಾರೆ ಪಕ್ಷದಲ್ಲೇ ಮುಂದುವರಿಯಲು ಬಯಸಿರುವ ಕಾರ್ಯಕರ್ತರು.

ಬೆಂಬಲಿಗರ ನಿರೀಕ್ಷೆ:ಬಹುಜನ ಚಳವಳಿಯಲ್ಲಿ ದಶಕಗಳಿಂದಲೂ ಗುರುತಿಸಿಕೊಂಡು, ತಳ ಸಮುದಾಯದ ಪರವಾಗಿ ಹೋರಾಟ ಮಾಡು‌ತ್ತಲೇ ಬಂದಿದ್ದ ಮಹೇಶ್‌ ಅವರು ಕೈಗೊಳ್ಳುವ ನಿರ್ಧಾರದ ಬಗ್ಗೆ ಬೆಂಬಲಿಗರಲ್ಲಿ ತೀವ್ರ ನಿರೀಕ್ಷೆ ಇದೆ.

ಹೊಸ ಪಕ್ಷ ಸ್ಥಾಪಿಸುವ ಸಾಧ್ಯತೆ ಇಲ್ಲ ಎಂದು ಹೇಳುತ್ತಾರೆ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಬೆಂಬಲಿಗರು. ‘ಪಕ್ಷ ಸ್ಥಾಪಿಸಲು ಸಾಕಷ್ಟು ಹಣ ಬೇಕು. ಈಗಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಪಕ್ಷ ಕಟ್ಟುವುದು ಸುಲಭದ ಮಾತಲ್ಲ’ ಎಂಬುದು ಅವರ ವಾದ.

‘ಇನ್ನು ಕೆಲವು ಸಮಯ ಕಾದು ನಂತರ ಯಾವುದಾದರೂ ಪಕ್ಷ ಸೇರಬಹುದು. ಆರಂಭದಿಂದಲೇ ಕಾಂಗ್ರೆಸ್‌ ಅನ್ನು ವಿರೋಧಿಸುತ್ತಲೇ ಬಂದಿದ್ದ ಮಹೇಶ್‌ ಅವರು ಅದನ್ನು ಸೇರುವ ಸಾಧ್ಯತೆ ಇಲ್ಲ. ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿರುವ ಅವರು ಕಮಲಪಾಳಯವನ್ನು ಸೇರಿದರೂ ಅಚ್ಚರಿ ಪಡಬೇಕಿಲ್ಲ. ಯಡಿಯೂರಪ್ಪ ಅವರೊಂದಿಗೆ ಉತ್ತಮ ಸಂಬಂಧವನ್ನೂ ಹೊಂದಿದ್ದಾರೆ’ ಎಂದು ಆಪ್ತರು ಹೇಳುತ್ತಾರೆ.

ಬಿಜೆಪಿ ಮುಖಂಡರ ಜೊತೆ ಮಹೇಶ್‌ ಅವರು ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಇದನ್ನು ಯಾರೂ ದೃಢಪಡಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.