ADVERTISEMENT

ಕೊಳ್ಳೇಗಾಲ: ಹೆಚ್ಚಿದ ಬೀದಿ, ಹುಚ್ಚು ನಾಯಿಗಳ ಹಾವಳಿ

ಓಡಾಡಲು ಭಯಪಡುತ್ತಿರುವ ಜನ, 35ಕ್ಕೂ ಹೆಚ್ಚು ಜನರಿಗೆ ಕಚ್ಚಿದ ನಾಯಿಗಳು

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 16:23 IST
Last Updated 25 ಜೂನ್ 2021, 16:23 IST
ಕೊಳ್ಳೇಗಾಲದ ರಸ್ತೆಯೊಂದರಲ್ಲಿ ಕಂಡು ಬಂದ ಬೀದಿ ನಾಯಿಗಳ ಗುಂಪು
ಕೊಳ್ಳೇಗಾಲದ ರಸ್ತೆಯೊಂದರಲ್ಲಿ ಕಂಡು ಬಂದ ಬೀದಿ ನಾಯಿಗಳ ಗುಂಪು   

ಕೊಳ್ಳೇಗಾಲ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ.

ಮೂರ್ನಾಲ್ಕು ದಿನಗಳಿಂದ ಬೀದಿ ನಾಯಿಗಳ ಜೊತೆಗೆ ಹುಚ್ಚು ನಾಯಿಗಳು ಕೂಡ ಬೀದಿಗಳಲ್ಲಿ ಓಡಾಡುತ್ತಿದ್ದು, ಜನರು ಆತಂಕಗೊಂಡಿದ್ದಾರೆ.

ಮೂರ್ನಾಲ್ಕು ದಿನಗಳಲ್ಲಿ ಹುಚ್ಚು ನಾಯಿಗಳು 35ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿವೆ. ಇದರಿಂದಾಗಿ ಅನೇಕರು ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ.

ADVERTISEMENT

ನಗರದ ಭೀಮನಗರ, ಆನಂದ ಜ್ಯೋತಿ ಕಾಲೊನಿ, ಉಪ್ಪಾರ ಬಡಾವಣೆ, ಸಾಮಂದ ಗೇರಿ ಬಡಾವಣೆ, ನಾಯರ ಬಡಾವಣೆ, ದೇವಾಂಗ ಪೇಟೆ ಬಡಾವಣೆ, ಮುಂಜುನಾಥ ನಗರ, ನೂರ್ ಮೊಹಲ್ಲಾ, ಈದ್ಗಾ ಮೊಹಲ್ಲಾ, ವಿದ್ಯಾನಗರ, ಆದರ್ಶ ನಗರ ಸೇರಿದಂತೆ ಅನೇಕ ಬೀದಿಗಳಲ್ಲಿ ನಾಯಿಗಳ ಕಾಟ ಜೋರಾಗಿದೆ.

ಭಯದಿಂದ ಸಂಚಾರ: ಹುಚ್ಚು‌ ಹಾಗೂ ಬೀದಿ ನಾಯಿಗಳಿಂದಾಗಿ ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ. ರಸ್ತೆಗಳಲ್ಲಿ ನಡೆದಾಡುವವರು, ದ್ವಿಚಕ್ರ ವಾಹನ ಸವಾರರು ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರಗಡೆಯವರು ಬಡಾವಣೆಗಳಿಗೆ ಬರಲು ಹಿಂಜರಿಯುತ್ತಿದ್ದಾರೆ.

‘ಎರಡು ದಿನಗಳ ಹಿಂದೆ ರಸ್ತೆಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಯುವಕ ಜೀವನ್ ಎಂಬುವವನ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದರಿಂದ ಯುವಕ ಬೈಕ್‌ನಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿದೆ. ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾನೆ’ ಎಂದು ಹಿರಿಯ ನಾಗರಿಕ ಮಲ್ಲಿಕಾರ್ಜುನಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸದ ಅಂಗಡಿಯ ಮುಂದೆ ಗುಂಪು: ನಗರದ ಶಿವ ಬಾರ್ ಸಮೀಪದ ಮಾಂಸದ ಅಂಗಡಿಗಳ ಮುಂದೆ ಬೀದಿ ನಾಯಿಗಳ ಹಿಂಡು ಹೆಚ್ಚಾಗಿ ಕಂಡು ಬರುತ್ತವೆ. ಅಂಗಡಿಯವರು ಮಾಂಸದ ತ್ಯಾಜ್ಯವನ್ನು ಸಮೀಪದ ದೊಡ್ಡ ಚರಂಡಿಗೆ ಹಾಕುತ್ತಾರೆ.ಅಂಗಡಿಗಳಲ್ಲಿ ಉಳಿದ ಮಾಂಸದ ತ್ಯಾಜ್ಯದ ಆಸೆಗಾಗಿ ನಾಯಿಗಳು ಅಲ್ಲಿಯೇ ಸುತ್ತಾಡುತ್ತಿರುತ್ತವೆ.

ನಿದ್ರೆ ಹಾಳು: ಬಡಾವಣೆಗಳಲ್ಲಿ ರಾತ್ರಿ ಹೊತ್ತು ನಾಯಿಗಳ ಜಗಳ, ಕೂಗಾಟದಿಂದ ಸ್ಥಳೀಯ ನಿವಾಸಿಗಳ ನಿದ್ರೆಯೂ ಹಾಳಾಗುತ್ತಿದೆ.

‘ನಾಯಿಗಳು ರಾತ್ರಿಯಾದರೆ ಬಡಾವಣೆಗಳಲ್ಲಿ ಜೋರಾಗಿ ಬೊಗಳಲು ಆರಂಭಿಸುತ್ತವೆ. ನಿದ್ರೆ ಮಾಡಲು ಸಹ ಆಗುವುದಿಲ್ಲ. ಕೆಲ ಮನೆಯ ಮುಂದೆ ಚಪ್ಪಲಿಗಳನ್ನು ಎತ್ತಿಕೊಂಡು ಹೋಗಿ ಕಿತ್ತು ಹಾಕುತ್ತವೆ. ಮನೆಗಳಲ್ಲಿ ಬಟ್ಟೆಗಳು, ಪ್ಲಾಸ್ಟಿಕ್ ಸಾಮಗ್ರಿಗಳನ್ನು ಕಿತ್ತು ಹಾಕುತ್ತವೆ’ ಎಂದು ಆದರ್ಶನಗರ ಬಡಾವಣೆಯ ನಿವಾಸಿ ಸುಮಿತ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

* ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ನಿಜ. ಅವುಗಳನ್ನು ಸ್ಥಳಾಂತರಿಸಲು ಆಗುವುದಿಲ್ಲ. ಸಂತಾನಹರಣ ಚಿಕಿತ್ಸೆ ಮಾಡಬಹುದು. ಹುಚ್ಚು ನಾಯಿಗಳು ಇದ್ದರೆ, ಹಿಡಿಸಲಾಗುವುದು

- ವಿಜಯ್, ನಗರಸಭೆ ಆಯುಕ್ತ

* ಹುಚ್ಚು ನಾಯಿ ಮತ್ತು ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಜನರಿಗೆ ಸರಾಗವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು.

-ಲೋಕೇಶ್, ಹಳೇ ಕುರುಬರ ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.