ADVERTISEMENT

ಕೊಳ್ಳೇಗಾಲ: ಚರ್ಮರೋಗ ಪೀಡಿತ ನಾಯಿಗಳ ನರಳಾಟ

ಅವಿನ್ ಪ್ರಕಾಶ್
Published 7 ಆಗಸ್ಟ್ 2025, 2:51 IST
Last Updated 7 ಆಗಸ್ಟ್ 2025, 2:51 IST
ಕೊಳ್ಳೇಗಾಲ ಪಟ್ಟಣದಲ್ಲಿ ರೋಗಪೀಡಿತ ನಾಯಿ ರಸ್ತೆ ಬದಿ ಅಡ್ಡಾಡುತ್ತಿರುವುದು
ಕೊಳ್ಳೇಗಾಲ ಪಟ್ಟಣದಲ್ಲಿ ರೋಗಪೀಡಿತ ನಾಯಿ ರಸ್ತೆ ಬದಿ ಅಡ್ಡಾಡುತ್ತಿರುವುದು   

ಕೊಳ್ಳೇಗಾಲ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೀದಿನಾಯಿಗಳು ಚರ್ಮರೋಗ ಬಾಧೆಯಿಂದ ನರಳುತ್ತಿದ್ದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲೆಡೆ ಹಿಂಡುಹಿಂಡಾಗಿ ಓಡಾಡುತ್ತಿರುವ ನಾಯಿಗಳ ಮೈಮೇಲೆ ಕಜ್ಜಿ ಮಾದರಿಯ ಗಾಯಗಳಾ‌ಗಿದ್ದು ರೋಮಗಳೆಲ್ಲ ಉದುರಿ ಬೋಳಾಗಿ ಕಾಣುತ್ತಿವೆ. ಶ್ವಾನಗಳ ಮೈತುಂಬ ಗಾಯಗಳು ತುಂಬಿದ್ದು ತುರಿಕೆ ಸಹಿಸಲಾಗದೆ ಗೋಡೆಗಳಿಗೆ, ಕಂಬಗಳಿಗೆ, ರಸ್ತೆಯ ಅಂಚಿಗೆ ಮೈ ಉಜ್ಜಿಕೊಳ್ಳುತ್ತಿವೆ. ಪರಿಣಾಮ ದೇಹದ ಹಲವು ಭಾಗಳಲ್ಲಿ ರಕ್ತ ಕಾರುತ್ತಿದ್ದು ಮೂಕಪ್ರಾಣಿಗಳ ರೋಧನ ನೋಡಲಾಗುತ್ತಿಲ್ಲ.

ಮೈತುಂಬಾ ಗಾಯಗಳಾಗಿರುವ ನಾಯಿಗಳು ರಸ್ತೆ ಬದಿ, ಬಸ್ ನಿಲ್ದಾಣ, ಹೋಟೆಲ್ ರೆಸ್ಟೋರೆಂಟ್‌, ಉದ್ಯಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೀಡುಬಿಟ್ಟಿದ್ದು ರೋಗಪೀಡಿತ ಶ್ವಾನಗಳಿಂದ ನಾಗರಿಕರಿಗೆ ಚರ್ಮ ರೋಗ ಹರಡಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

ADVERTISEMENT

ಉದ್ಯಾನದಲ್ಲಿ ವಾಕಿಂಗ್ ಮಾಡುವಾಗ, ರಸ್ತೆಯಲ್ಲಿ ಓಡಾಡುವಾಗ ರೋಗಪೀಡಿತ ಶ್ವಾನಗಳು ಕಿರಿಕಿರಿ ಮಾಡುತ್ತಿದ್ದು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಭಯವಾಗುತ್ತಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಪ್ರತಿನಿತ್ಯ ಬೀದಿನಾಯಿಗಳಿಗೆ ಆಹಾರ ಹಾಕುತ್ತಿರುವ ಕೆಲವರು ಚರ್ಮರೋಗ ಪೀಡಿತ ನಾಯಿಗಳನ್ನು ಕಂಡರೆ ಗದರಿ ಓಡಿಸುತ್ತಿದ್ದಾರೆ. ಪರಿಣಾಮ ಹಸಿವಿನಿಂದ ಶ್ವಾನಗಳು ಆಹಾರಕ್ಕಾಗಿ ಎಲ್ಲೆಡೆ ಅಲೆಯುತ್ತಾ ಕಿರಿಕಿರಿ ಉಂಟು ಮಾಡುತ್ತಿವೆ. ರೋಗಪೀಡಿತ ನಾಯಿಗಳನ್ನು ನೋಡಿದರೆ ಬೇಸರವಾಗುತ್ತದೆ.

ಜೊತೆಗೆ ಸಾಕುನಾಯಿಗಳಿಗೆ, ಬೆಕ್ಕುಗಳಿಗೆ, ಜಾನುವಾರು ಹಾಗೂ ಸಾರ್ವಜನಿಕರಿಗೂ ರೋಗ ಹರಡಬಹುದು ಎಂಬ ಆತಂಕವೂ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ರೋಗಪೀಡಿತ ಶ್ವಾನಗಳಿಗೆ ಚುಚ್ಚುಮದ್ದು ಅಥವಾ ಔಷಧ ಹಾಕುವ ಕೆಲಸ ಮಾಡಬೇಕು ಎಂದು ಹೇಳುತ್ತಾರೆ ಪ್ರಾಣಿಪ್ರಿಯರಾದ ಚಂದ್ರಮ್ಮ.

ರೋಗನಿರೋಧಕ ಶಕ್ತಿ ಕುಂಠಿತ:

ಹೆಣ್ಣು ಹಾಗೂ ಗಂಡು ನಾಯಿ ಸೇರಿದಂತೆ ಮರಿಗಳಲ್ಲೂ ಕಜ್ಜಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಮರಿ ಹಾಕಿದ ಸಂದರ್ಭ ನಾಯಿಗಳಲ್ಲಿ ರೋಗನಿರೋಧಕ ಶಕ್ತಿ ಕ್ಷೀಣವಾಗುತ್ತದೆ. ಈ ಸಂದರ್ಭದಲ್ಲಿ ನಾಯಿಗಳು ವಾಸಮಾಡುವ ಜಾಗ ಸ್ವಚ್ಛತೆ ಇಲ್ಲದೆ ರೋಗಾಣುಗಳು ಸುಲಭವಾಗಿ ನಾಯಿಗಳ ದೇಹ ಸೇರಿ ಕಜ್ಜಿ ಸೇರಿದಂತೆ ಚರ್ಮರೋಗ ಕಾಣಿಸಿಕೊಳ್ಳುತ್ತವೆ.

ಚರ್ಮ ಸೋಂಕು ಕಾಣಿಸಿಕೊಂಡ ಭಾಗ ದಪ್ಪವಾಗುತ್ತಾ ಚಿಕಿತ್ಸೆ ದೊರೆಯದಿದ್ದರೆ ದೇಹದ ತುಂಬೆಲ್ಲ ಆವರಿಸುತ್ತದೆ. ಈ ಹಂತದಲ್ಲಿ ವಿಪರೀತ ತುರಿಕೆಯಿಂದ ನಾಯಿಗಳು ಗೋಡೆ, ಕಲ್ಲು, ಮರ, ಗಿಡ ವಾಹನ ಸಹಿತ ಘನವಾದ ವಸ್ತುಗಳಿಗೆ ಮೈ ಉಜ್ಜಿಕೊಂಡು ರಕ್ತಸ್ರಾವಾಗಿ ಗಾಯಗಳಾಗುತ್ತವೆ. ರೋಮಗಳು ಉದುರಿ ರೋಗ ಗಂಭೀರವಾಗುತ್ತ ಶಕ್ತಿ ಕಳೆದುಕೊಂಡ ನಾಯಿಗಳು ಸಾವನ್ನಪ್ಪುತ್ತವೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತುರಾಜ್ ತಿಳಿಸಿದರು. 

ಇತರೆ ಪ್ರಾಣಿಗಳಿಗೂ ಕಂಟಕ:

ಚರ್ಮ ರೋಗ ಕಾಣಿಸಿಕೊಂಡಿರುವ ಶ್ವಾನಗಳಿಂದ ಇತರೆ ಪ್ರಾಣಿಗಳಿಗೂ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಸು, ಎಮ್ಮೆ, ಕುರಿ, ಮೇಕೆ  ಬೆಕ್ಕು ಸೇರಿದಂತೆ ಎಲ್ಲ ಸಾಕು ಪ್ರಾಣಿಗಳಿಗೂ ಕಜ್ಜಿ ಹರಡಬಹುದು. ರೋಗಪೀಡಿತ ನಾಯಿಗಳಿಂದ ಮನುಷ್ಯರಿಗೆ ಹೆಚ್ಚು ತೊಂದರೆಯಾಗುವುದಿಲ್ಲ.

ರೋಗಪೀಡಿತ ನಾಯಿ

ಆದರೆ, ರೋಗಪೀಡಿತ ನಾಯಿಗಳ ಕೀವು, ರಕ್ತ, ಜೊಲ್ಲಿನಿಂದ ಅಲರ್ಜಿ ಉಂಟಾಗುತ್ತದೆ. ಸಾರ್ವಜನಿಕರು ಜಾಗ್ರತೆ ವಹಿಸಬೇಕು, ನಾಯಿಗಳಿಂದ ಆದಷ್ಟು ದೂರವಿರಬೇಕು, ಕಜ್ಜಿ ಕಾಣಿಸಿಕೊಂಡ ಶ್ವಾನಗಳಿಗೆ ನಿರಂತರವಾಗಿ 10 ದಿನ ಚಿಕಿತ್ಸೆ ನೀಡಿದರೆ ಗುಣವಾಗುತ್ತದೆ. ಚಿಕಿತ್ಸೆಗೆ ಬೇಕಾದ ಔಷಧಗಳು ಪಶು ಇಲಾಖೆಯ ಆಸ್ಪತ್ರೆಯಲ್ಲಿ ದೊರೆಯುತ್ತವೆ ಎಂದು ಪಶು ವೈದ್ಯರು ಹೇಳುತ್ತಾರೆ.

ನಾಯಿಗಳಿಗೆ ಚರ್ಮ ರೋಗ ಹಬ್ಬಿರುವುದು ಗಮನಕ್ಕೆ ಬಂದಿದ್ದು ಪಶುಸಂಗೋಪನಾ ಇಲಾಖೆಯ ವೈದ್ಯರ ಜೊತೆ ಚರ್ಚಿಸಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು
ರೇಖಾ ನಗರಸಭೆ ಅಧ್ಯಕ್ಷೆ
ನಗರಸಭೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೀದಿನಾಯಿಗಳನ್ನು ಪಶು ಆಸ್ಪತ್ರೆಗೆ ಕರೆತಂದರೆ ಸಂತಾನ ಹರಣಶಸ್ತ್ರ ಚಿಕಿತ್ಸೆಯ ಜೊತೆಗೆ ರೋಗಪೀಡಿತ ನಾಯಿಗಳಿಗೆ ಚಿಕಿತ್ಸೆ ನೀಡಲಾಗುವುದು
–ಮುತ್ತುರಾಜ್ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ

ಚಿಕಿತ್ಸೆ ಕೊಡಿಸಿ

ಬೀದಿ ನಾಯಿಗಳಿಗೆ ಚರ್ಮ ರೋಗ ಕಾಣಿಸಿಕೊಂಡಿರುವುದು ನಾಗರಿಕರಿಗೆ ಜಾನುವಾರುಗಳಿಗೆ ಸಾಕು ಪ್ರಾಣಿಗಳಿಗೆ ಹರಡುವ ಆತಂಕ ಶುರುವಾಗಿದೆ. ಜನ ಜಾನುವಾರುಗಳ ಹಿತದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೋಗಪೀಡಿತ ನಾಯಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡಿಸಬೇಕು ನಾಯಿಗಳ ಸಂಖ್ಯೆ ಮಿತಿಮೀರದಂತೆ ಸಂತಾನ ಹರಣ ಚಿಕಿತ್ಸೆ ನೀಡಬೇಕು ಎಂದು ಸಿದ್ದಯ್ಯನಪುರ ಸಂತೋಷ್ ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.