
ಮಹದೇಶ್ವರ ಬೆಟ್ಟ: ಹನೂರು ತಾಲ್ಲೂಕಿನ ಸುಳ್ವಾಡಿ ದೇವಸ್ಥಾನದಲ್ಲಿ ವಿಷಪ್ರಸಾದ ಸೇವಿಸಿ 17 ಜನರ ಸಾವಿಗೆ ಕಾರಣರಾಗಿರುವ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ನ್ಯಾಯಾಲಯ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಮೃತರ ಕುಟುಂಬ ಸದಸ್ಯರು ಸೋಮವಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು.
ಮಹದೇಶ್ವರ ಬೆಟ್ಟದ ರಾಜಗೋಪುರ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ಇಮ್ಮಡಿ ಮಹದೇವಸ್ವಾಮಿಯ ಜಾಮೀನು ರದ್ದುಗೊಳಿಸಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಇಮ್ಮಡಿ ಮಹದೇವಸ್ವಾಮಿ ವಿರುದ್ಧ ದಿಕ್ಕಾರ ಕೂಗುತ್ತಾ ಮೆರವಣಿಗೆಯ ಮೂಲಕ ಸಾಲೂರು ಮಠದ ಮುಂಭಾಗ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಇದೇವೇಳೆ ಮಾತನಾಡಿದ ಸಂತ್ರಸ್ತರು, ಕಿಡಿಗೇಡಿಗಳು ದೇವಸ್ಥಾನದ ಪ್ರಸಾದಕ್ಕೆ ವಿಷ ಹಾಕಿದ ಪರಿಣಾಮ 17 ಮಂದಿ ಅಮಾಯಕರು ಬಲಿಯಾಗಬೇಕಾಯಿತು. 120ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಬೇಕಾಯಿತು. ಬದುಕುಳಿದ ಹಲವರು ಇಂದಿಗೂ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ, ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ವೈಯಕ್ತಿಕ ಹಿತಾಸಕ್ತಿಗಾಗಿ ಭಕ್ತರ ಜೀವ ಬಲಿಪಡೆದ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಇದೇವೇಳೆ ಸರ್ಕಲ್ ಇನ್‌ಸ್ಪೆಕ್ಟರ್ ಜಗದೀಶ್ ಅವರಿಗೆ ಸಂತ್ರಸ್ತರು ಮನವಿ ಪತ್ರ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.