ADVERTISEMENT

ಸಾಲೂರು ಬೃಹನ್ಮಠದ ಉತ್ತರಾಧಿಕಾರಿ ಆಯ್ಕೆ: ಮೇಲ್ಮನವಿ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:29 IST
Last Updated 23 ಆಗಸ್ಟ್ 2025, 2:29 IST
<div class="paragraphs"><p>ನ್ಯಾಯಾಲಯ </p></div>

ನ್ಯಾಯಾಲಯ

   

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಉತ್ತರಾಧಿಕಾರಿ ಆಯ್ಕೆ ಸಂಬಂಧ ಕೊಳ್ಳೇಗಾಲದ ಹೆಚ್ಚುವರಿ ಸಿವಿಲ್ ನ್ಯಾಯಾಲಯ ನೀಡಿದ್ದ ಆದೇಶದ ವಿರುದ್ಧ ಸುಳ್ವಾಡಿ ವಿಷಪ್ರಾಷನ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೊಳ್ಳೇಗಾಲದ ಹಿರಿಯ‌ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಈಚೆಗೆ ವಜಾಗೊಳಿಸಿದೆ.

ಪ್ರಕರಣದ ವಿವರ:

ADVERTISEMENT

ಹಿಂದೆ ಸಾಲೂರು ಬೃಹನ್ಮಠದ ಹಿರಿಯ ಗುರುಸ್ವಾಮೀಜಿ ಅನಾರೋಗ್ಯಕ್ಕೆ ತುತ್ತಾದ ಸಂದರ್ಭ ಮಠಕ್ಕೆ ಉತ್ತರಾಧಿಕಾರಿಯಾಗಿ ಶಾಂತ ಮಲ್ಲಿಕಾರ್ಜನ ಸ್ವಾಮೀಜಿ ಅವರನ್ನು ನೇಮಕ ಮಾಡಲು ಮುಂದಾಗಿದ್ದರು. ಈ ಸಂದರ್ಭ ಸುಳ್ವಾಡಿ ವಿಷಪ್ರಾಶನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಅಂದಿನ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಉತ್ತರಾಧಿಕಾರಿ ಆಯ್ಕೆಗೆ ತಡೆಯಾಜ್ಞೆ ನೀಡಬೇಕು ಎಂದು 2019ರ ಆ.28ರಲ್ಲಿ ಕೊಳ್ಳೇಗಾಲದ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸುಳ್ವಾಡಿ ವಿಷಪ್ರಾಷನ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಹಂತದಲ್ಲಿ ಮಠಕ್ಕೆ ಉತ್ತರಾಧಿಕಾರಿ ನೇಮಕ ಸರಿಯಲ್ಲ. ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತಾಗಿ ಪೀಠಾಧ್ಯಕ್ಷನಾಗುವ ವಿಶ್ವಾಸವಿದ್ದು ಅಲ್ಲಿಯವರೆಗೆ ಉತ್ತರಾಧಿಕಾರಿ ನೇಮಕ ಮಾಡದಂತೆ ತಡೆಯಾಜ್ಞೆ ನೀಡಬೇಕು ಎಂದು ಮಹದೇವಸ್ವಾಮಿ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಮಠದಿಂದ ಉಚ್ಛಾಟನೆ ಮಾಡದಂತೆ, ಬದಲಿ ಉತ್ತರಾಧಿಕಾರಿ ನೇಮಕ ಮಾಡದಂತೆಯೂ ತಾತ್ಕಾಲಿಕ ನಿರ್ಬಂಧ ತಡೆಯಾಜ್ಞೆ ಪಡೆದಿದ್ದರು. 2020ರ ಆಗಸ್ಟ್‌ 3ರಂದು ಕೊಳ್ಳೇಗಾಲ ಸಿವಿಲ್ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧ ತಡೆಯಾಜ್ಞೆಯನ್ನು ರದ್ದುಗೊಳಿಸಿತ್ತು.

ಬಳಿಕ ಹಿರಿಯ ಯತಿ ಗುರುಸ್ವಾಮಿಗಳ ಆಶಯದಂತೆ ಹಾಗೂ ಮಠಾಧೀಶರ ಸಭೆಯ ನಿರ್ಣಯದಂತೆ ಮಠದ ಸಂಪ್ರದಾಯದಂತೆ 2020ರ ಆ.8ರಂದು ಸುತ್ತೂರು ಶ್ರೀ, ಸಿದ್ಧಗಂಗಾ ಶ್ರೀ ಸಹಿತ ಹಲವು ಮಠಾಧೀಶರ ನೇತೃತ್ವದಲ್ಲಿ ಸಾಲೂರು ಮಠಕ್ಕೆ ಶಾಂತಮಲ್ಲಿಕಾರ್ಜುನ ಸ್ವಾಮಿ ಅವರನ್ನು ಪೀಠಾಧಿಪತಿಗಳನ್ನಾಗಿ ನೇಮಕ ಮಾಡಲಾಗಿತ್ತು.

ಇಮ್ಮಡಿ ಮಹದೇವಸ್ವಾಮಿ ಕೊಳ್ಳೇಗಾಲ ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ 2020ರ ಸೆ.3ರಂದು ಕೊಳ್ಳೇಗಾಲದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುನೀತಾ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.

‘ಸಾಲೂರು ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು ಮಠದ ಸಂಪ್ರದಾಯದಂತೆ ಉತ್ತರಾಧಿಕಾರಿ ಪ್ರಕ್ರಿಯೆ ನಡೆದಿದೆ. ಹಿರಿಯ ಮಠಾಧಿಪತಿಗಳು ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ಕೆಳಹಂತದ ನ್ಯಾಯಾಲಯ ನೀಡಿರುವ ಆದೇಶ ಸರಿಯಾಗಿದೆ’ ಎಂದು ನ್ಯಾಯಾಧೀಶರು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ’ ಎಂದು ಹೈಕೋರ್ಟ್ ವಕೀಲರಾದ ಸಿ.ಎಂ.ಜಗದೀಶ್ ತಿಳಿಸಿದ್ದಾರೆ.

‘2018ರ ಡಿಸೆಂಬರ್‌ನಲ್ಲಿ ಸುಳ್ವಾಡಿ ಕಿಚ್ಚುಗತ್ತಿ ಮಾರಮ್ಮನ ದೇವಸ್ಥಾನದಲ್ಲಿ ನಡೆದ ವಿಷಪ್ರಾಶನ ದುರಂತದಲ್ಲಿ 17 ಮಂದಿ ಮೃತಪಟ್ಟು 125ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಪ್ರಕರಣದಲ್ಲಿ ಇಮ್ಮಡಿ ಮಹದೇವಸ್ವಾಮಿ ಪ್ರಮುಖ ಆರೋಪಿಯಾಗಿದ್ದು ಜೈಲಿನಲ್ಲಿದ್ದಾರೆ. ಈ ಹಂತದಲ್ಲಿ ಉತ್ತರಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸುವ ನೈತಿಕಗೆ ಇರುವುದಿಲ್ಲ. ಸುಪ್ರೀಂಕೋರ್ಟ್ ಕೂಡ ಮಹದೇವಸ್ವಾಮಿ ಜಾಮೀನು ಅರ್ಜಿ ವಜಾಗೊಳಿಸಿದೆ. ಹಿರಿಯ ಶ್ರೀಗಳ ಇಚ್ಛಾನುಸಾರ ಉತ್ತರಾಧಿಕಾರಿ ನೇಮಕ ನಡೆದಿದ್ದು ತಡೆಯಾಜ್ಞೆ ನೀಡಬಾರದು ಎಂಬ ವಾದ ಮಂಡಿಸಲಾಗಿತ್ತು. ನ್ಯಾಯಾಲಯ ವಾದವನ್ನು ಪುರಸ್ಕರಿಸಿ ನ್ಯಾಯ ಸಮ್ಮತ ತೀರ್ಪು ನೀಡಿದೆ’ ಎಂದು ವಕೀಲ ಜಗದೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.