
ಚಾಮರಾಜನಗರ: ತಾಲ್ಲೂಕಿನ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಹಾಗೂ ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿ, ಫ್ಲೆಕ್ಸ್ ಹಾಗೂ ಭಾವಚಿತ್ರ ವಿರೂಪಗೊಳಿಸಿರುವ ಪ್ರಕರಣದಲ್ಲಿ ಪೊಲೀಸ್ ತನಿಖೆ ತೃಪ್ತಿ ತಂದಿಲ್ಲ, ಕುಮ್ಮಕ್ಕು ನೀಡಿದವರನ್ನು ಇದುವರೆಗೂ ಬಂಧಿಸಿಲ್ಲ ಎಂದು ಎಂದು ದಲಿತ ಮುಖಂಡರಾದ ಸಿಎಂ ಕೃಷ್ಣಮೂರ್ತಿ ಹಾಗೂ ಸಿ.ಕೆ.ಮಂಜುನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಪೊಲೀಸ್ ಇಲಾಖೆ ವ್ಯಾಪ್ತಿಯ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿದರು.
ಎಸ್‌ಪಿ ಬಿ.ಟಿ.ಕವಿತಾ ಉತ್ತರಿಸಿ, ‘ಘಟನೆ ನಡೆದು ಕೇವಲ 11 ದಿನಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಪ್ರಕರಣ ತನಿಖಾ ಹಂತದಲ್ಲಿದೆ. ಇದುವರೆಗೆ ವಿಚಾರಣೆಗೆ ಒಳಗಾದವರು ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯಾಧಾರಗಳು ದೊರೆತಿಲ್ಲ. ಯಾರ ಒತ್ತಡಕ್ಕೂ ಮಣಿಯದೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿರುವಾಗ ಇಲಾಖೆಯ ಮೇಲೆ ವೈಫಲ್ಯ ಆರೋಪ ಹೊರಿಸಿರುವುದು ಸರಿಯಲ್ಲ’ ಎಂದು ಪೊಲೀಸರ ಕ್ರಮವನ್ನು ಸಮರ್ಥಿಸಿದರು.
ತನಿಖೆ ಸರಿಯಾದ ಧಿಕ್ಕಿನಲ್ಲಿ ಸಾಗುತ್ತಿಲ್ಲ, ಪ್ರಕರಣದಲ್ಲಿ ಒಬ್ಬನ ಬಂಧನವಾಗಿರುವುದು ಬಿಟ್ಟರೆ ಹೆಚ್ಚಿನ ಪ್ರಗತಿಯಾಗಿಲ್ಲ ಎಂದು ಮುಖಂಡ ಕೃಷ್ಣಮೂರ್ತಿ ಆರೋಪಿಸಿದಾಗ ಸಿಟ್ಟಿಗೆದ್ದ ಎಸ್‌ಪಿ ಕವಿತಾ ‘ಸಿಸಿಟಿವಿ ಕ್ಯಾಮೆರಾಗಳ ಕೊರತೆ, ತನಿಖೆಗೆ ಎದುರಾಗುತ್ತಿರುವ ಸಾಲು ಸಾಲು ಸವಾಲುಗಳ ನಡುವೆಯೂ ಓಬ್ಬನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಪೊಲೀಸ್ ಇಲಾಖೆಯ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ. ಪ್ರಕರಣ ತನಿಖಾ ಹಂತದಲ್ಲಿದೆ, ಯಾರನ್ನು ಬಂಧಿಸಬೇಕು, ವಿಚಾರಣೆಗೊಳಿಸಬೇಕು ಎಂಬುದನ್ನು ಪೊಲೀಸ್ ಇಲಾಖೆ ನಿರ್ಧರಿಸಲಿದೆ, ಯಾರ ಒತ್ತಡಗಳಿಗೂ ಮಣಿಯುವುದಿಲ್ಲ’ ಎಂದು ಎಸ್‌ಪಿ ಹೇಳಿದರು.
‘10 ವರ್ಷಗಳಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸರಿಯಾದ ನ್ಯಾಯ ದೊರೆತಿಲ್ಲ. ಸಂತೇಮರಹಳ್ಳಿಯಲ್ಲಿ ನಡದ ಜೋಡಿ ಕೊಲೆ ಪ್ರಕರಣ, ಹೊಂಗನೂರಿ ಪ್ರಕರಣ ಸೇರಿದಂತೆ ಪ್ರಕರಣಗಳಲ್ಲಿ ನ್ಯಾಯ ದೊರೆತಿಲ್ಲ; ಇದಕ್ಕೆ ಪೊಲೀಸ್ ಇಲಾಖೆಯ ತನಿಖಾ ವೈಫಲ್ಯವೇ ಕಾರಣ’ ಎಂದು ಸಿ.ಎಂ. ಕೃಷ್ಣಮೂರ್ತಿ ದೂರಿದರು.
ಭಾನುಪ್ರಕಾಶ್ ಮಾತನಾಡಿ, ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಗ್ರಾಮದ ಬಳಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಐಡಿಎಫ್‌ಸಿ ಬ್ಯಾಂಕ್‌ನ ಸಾಲ ರಿಕವರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ದಲಿತ ಯುವಕ ನಟರಾಜು ಮೃತಪಟ್ಟಿದ್ದು, ಉದ್ಯೋಗದಾತ ಸಂಸ್ಥೆ ಇದುವರೆಗೂ ಪರಿಹಾರ ನೀಡಿಲ್ಲ. ಕಾಯಂ ನೌಕರ ಅಲ್ಲ ಎಂಬ ಕಾರಣಕ್ಕೆ ಪರಿಹಾರ ನಿರಾಕರಿಸುವುದು ಕಾನೂನು ಬಾಹಿರ. ಪೊಲೀಸರು ಪರಿಹಾರ ಕೊಡಿಸಬೇಕು’ ಎಂದು ಒತ್ತಾಯಿಸಿದರು. ಸಂಸ್ಥೆಯ ಪ್ರತಿನಿಧಿಗಳನ್ನು ಕರೆಸಿ ವಿಚಾರಣೆ ನಡೆಸುವುದಾಗಿ ಡಿವೈಎಸ್‌ಪಿ ಸ್ನೇಹಾ ರಾಜ್ ಭರವಸೆ ನೀಡಿದರು.
ದೊಡ್ಡಿಂದುವಾಡಿ ಕೆ.ಸಿದ್ದರಾಜು ಮಾತನಾಡಿ, ಸುಳ್ವಾಡಿ ದೇವಸ್ಥಾನದಲ್ಲಿ ವಿಷಪ್ರಾಷನ ಪ್ರಕರಣದಲ್ಲಿ 17 ಮಂದಿ ಮೃತರಾದ ಟ ಘಟನೆ ನಡೆದು 7 ವರ್ಷ ತುಂಬುತ್ತಾ ಬಂದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ನಿವೇಶನ, ವಸತಿ, ಕೃಷಿ ಜಮೀನು ಮಂಜೂರು ಮಾಡಿಲ್ಲ, ಸರ್ಕಾರಿ ಉದ್ಯೋಗ ನೀಡಿಲ್ಲ. ದುರಂತದಲ್ಲಿ ಬದುಕುಳಿದವರೂ ಇಂದಿಗೂ ಅನಾರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಂತ್ರಸ್ತರ ನೆರವಿಗೆ ಧಾವಿಸುತ್ತಿಲ್ಲ’ ಎಂದು ಆರೋಪಿಸಿದರು.
ನಲ್ಲೂರು ಕೂಡ್ಲೂರು ಗ್ರಾಮಗಳಲ್ಲಿರುವ ದಲಿತರಿಗೆ ಸ್ಮಶಾನ ಇಲ್ಲದೆ ತಮಿಳುನಾಡಿನ ಗಡಿಯಲ್ಲಿ ಶವಗಳನ್ನು ಹೂಳಲಾಗುತ್ತಿದೆ. ಭೈರನತ್ತ ಗ್ರಾಮದಲ್ಲಿ ಸ್ಮಶಾನ ಜಾಗವನ್ನು ಬಲಿಷ್ಠ ಸಮುದಾಯದ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದರೂ ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೊಡ್ಡಿಂದುವಾಡಿ ಸಿದ್ದರಾಜು ಆರೋಪ ಮಾಡಿದರು. ಡಿವೈಎಸ್‌ಪಿ ಧರ್ಮೇಂದ್ರ ಭಾಗವಹಿಸಿದ್ದರು.
2025ರಲ್ಲಿ 41 ಎಸ್‌ಸಿ ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲು 31 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ 10 ಪ್ರಕರಣಗಳಲ್ಲಿ ತನಿಖೆ ಬಾಕಿ; ಎಸ್‌ಪಿ ಮಾಹಿತಿ
‘ಜಾಮೀನು ರದ್ದುಗೊಳಿಸಿ’
ಸುಳ್ವಾಡಿ ದುರಂತದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಯು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಮುಖಂಡ ದೊಡ್ಡಿಂದುವಾಡಿ ಸಿದ್ದರಾಜು ಒತ್ತಾಯಿಸಿದರು.
‘ಕಾನೂನು ಕ್ರಮದ ಎಚ್ಚರಿಕೆ’
ನಗರದ ಮಹಿಳಾ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಆರೋಪಿ ಬಂಧನವಾಗಿಲ್ಲ. ಸಂತ್ರಸ್ತೆಗೆ ಜನಿಸಿರುವ ಶಿಶುವನ್ನು ಶಿಶು ಪಾಲನಾ ಕೇಂದ್ರಕ್ಕೆ ನೀಡಲಾಗಿದೆ. ನೊಂದ ಬಾಲಕಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ ಎಂದು ದಲಿತ ಮುಖಂಡ ರಾಮಸಮುದ್ರ ಪರಶಿವಯ್ಯ ವಿಷಯ ಪ್ರಸ್ತಾಪಿಸಿದರು. ಪ್ರತಿಕ್ರಿಯಿಸಿದ ಎಸ್‌ಪಿ ಕವಿತಾ ಆರೋಪಿ ಜಾಮೀನು ಪಡೆಯುವ ಮುನ್ನ ಬಂಧಿಸಬೇಕು ಇಲ್ಲವಾದರೆ ಪ್ರಕರಣದಲ್ಲಿ ನಿಮ್ಮ ವಿರುದ್ಧವೇ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ಗೆ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.