ADVERTISEMENT

ಚಾಮರಾಜನಗರದಲ್ಲಿ ಭಾನುವಾರ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ

ಅನಗತ್ಯವಾಗಿ ಓಡಾಡುತ್ತಿದ್ದವರ ಬೈಕ್‌ ಜಪ್ತಿ ಮಾಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 15:27 IST
Last Updated 5 ಜುಲೈ 2020, 15:27 IST
ಲಾಕ್‌ಡೌನ್‌ ಜಾರಿಯಲ್ಲಿ ಇದ್ದುದರಿಂದ ದೊಡ್ಡ ಅಂಗಡಿ ಬೀದಿಗಳ ಎಲ್ಲ ಅಂಗಡಿಗಳು ಮುಚ್ಚಿದ್ದವು
ಲಾಕ್‌ಡೌನ್‌ ಜಾರಿಯಲ್ಲಿ ಇದ್ದುದರಿಂದ ದೊಡ್ಡ ಅಂಗಡಿ ಬೀದಿಗಳ ಎಲ್ಲ ಅಂಗಡಿಗಳು ಮುಚ್ಚಿದ್ದವು   

ಚಾಮರಾಜನಗರ: ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನಗರ, ಪಟ್ಟಣ ಹಾಗೂ ಹೋಬಳಿಗಳು ಸ್ತಬ್ಧವಾಗಿತ್ತು. ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆದವು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಸ್ಪತ್ರೆಗಳು, ಔಷಧ ಅಂಗಡಿಗಳು, ಹಾಲು ಮಾರಾಟ ಕೇಂದ್ರ, ಹಣ್ಣು, ತರಕಾರಿ, ಮಾಂಸದ ಅಂಗಡಿ, ಪೆಟ್ರೋಲ್‌ ಬಂಕ್‌ಗಳು ಸೇರಿ ಅಗತ್ಯವಸ್ತುಗಳ ಸೇವೆ ಲಭ್ಯ ಇತ್ತು. ಕೆಲವು ದಿನಸಿ ಅಂಗಡಿಗಳು, ಹೋಟೆಲ್‌ಗಳೂ ತೆರೆದಿದ್ದವು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಮಾತ್ರ ಲಭ್ಯವಿತ್ತು. ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆಟೊ, ಟ್ಯಾಕ್ಸಿಗಳು,ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳೂ ಸಂಚರಿಸಲಿಲ್ಲ.

ಜನ ಹಾಗೂ ವಾಹನಗಳ ಸಂಚಾರ ವಿರಳವಾಗಿತ್ತು. ದ್ವಿಚಕ್ರವಾಹನಗಳಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ತಡೆದ ಪೊಲೀಸರು, ಬೈಕ್‌ಗಳನ್ನು ಜಪ್ತಿ ಮಾಡಿದರು.

ADVERTISEMENT

ದರ್ಶನ ಇಲ್ಲ: ಲಾಕ್‌ಡೌನ್‌ ಕಾರಣದಿಂದ ದೇವಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರಸ್ವಾಮಿ ದೇವಾಲಯ, ಬಿಳಿಗಿರಿರಂಗನಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿಲ್ಲ.

ಜಿಲ್ಲಾಧಿಕಾರಿ ಪರಿಶೀಲನೆ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಚಾಮರಾಜನಗರ, ಕೊಳ್ಳೇಗಾಲಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ಇದೇ ಸಂದರ್ಭದಲ್ಲಿ ಕಂಟೈನ್‌ಮೆಂಟ್‌ ವಲಯಗಳಿಗೂ ಭೇಟಿ ನೀಡಿದರು.

ಚಾಮರಾಜನಗರ ತಾಲ್ಲೂಕಿನ ಬಾಣಳ್ಳಿ ಚೆಕ್‌ಪೋಸ್ಟ್, ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಅಲ್ಲಿ ಕೈಗೊಳ್ಳಲಾಗಿರುವ ವ್ಯವಸ್ಥೆ ಮತ್ತು ತಪಾಸಣಾ ಕಾರ್ಯವನ್ನು ಪರಿಶೀಲಿಸಿದರು. ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕು. ವಾಹನಗಳನ್ನು ಪರಿಶೀಲಿಸಿದ ಬಳಿಕವೇ ಸಂಚಾರಕ್ಕೆ ಅನುಮತಿಸಬೇಕು. ಪ್ರತಿಯೊಬ್ಬರ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಅತ್ಯಂತ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚನೆ ನೀಡಿದರು.

ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಜಿಲ್ಲಾಧಿಕಾರಿ ಅವರು, ‘ ಶನಿವಾರ ಸಂಜೆ 4 ಗಂಟೆಯಿಂದಲೇ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿದೆ.ಬೆಳಗ್ಗೆಯಿಂದಲೇ ಜಿಲ್ಲೆ ಸಂಪೂರ್ಣ ಲಾಕ್‌ಡೌನ್ ಆಗಿದೆ. ಅಗತ್ಯ ವಸ್ತುಗಳನ್ನು ಬಿಟ್ಟು ಬೇರೆ ಯಾವುದೇ ರೀತಿಯ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟಿಲ್ಲ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ. ಹದ್ದಣ್ಣನವರ್, ಉಪ ವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ, ತಹಶೀಲ್ದಾರ್ ಕುನಾಲ್, ಡಿವೈಎಸ್‌ಪಿ ನವೀನ್‌ಕುಮಾರ್ ಇದ್ದರು.

ಆ. 2ರವರೆಗೆ ಭಾನುವಾರ ಲಾಕ್‍ಡೌನ್

ರಾಜ್ಯ ಸರ್ಕಾರದ ಆದೇಶದಂತೆಸರ್ಕಾರದ ಆದೇಶದಂತೆ ಆಗಸ್ಟ್ 2ರವರೆಗೆ (ಜುಲೈ 12, 19, 26 ಮತ್ತು ಆಗಸ್ಟ್ 2) ಎಲ್ಲ ಭಾನುವಾರಗಳಂದು ಲಾಕ್‌ಡೌನ್‌ ನಡೆಯಲಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಈ ಸಂಬಂಧ ಆದೇಶವನ್ನೂ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.