ADVERTISEMENT

ಸೂರ್ಯಕಾಂತಿ ಸೌಂದರ್ಯಕ್ಕೆ ಜನರು ಫಿದಾ

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಅರಳಿ ನಿಂತಿವೆ ಆಕರ್ಷಕ ಹೂವು

ಮಲ್ಲೇಶ ಎಂ.
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ಸೂರ್ಯಕಾಂತಿ ತೋಟದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರವಾಸಿಗರು
ಸೂರ್ಯಕಾಂತಿ ತೋಟದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರವಾಸಿಗರು   

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಹಾದುಹೋಗಿರುವ ಊಟಿ –ಮೈಸೂರು ಮುಖ್ಯರಸ್ತೆಯ (ರಾಷ್ಟ್ರೀಯ ಹೆದ್ದಾರಿ 67) ಇಕ್ಕೆಲಗಳಲ್ಲಿರುವ ಜಮೀನಿನಲ್ಲಿ ಅರಳಿ ನಿಂತಿರುವ ಸೂರ್ಯಕಾಂತಿ ಹೂವುಗಳ ಸೌಂದರ್ಯಕ್ಕೆ ವಾಹನ ಸವಾರರು ಮಾರು ಹೋಗುತ್ತಿದ್ದಾರೆ. ಜಮೀನಿಗೆ ಲಗ್ಗೆ ಇಟ್ಟು ಫೋಟೊ, ಸೆಲ್ಫಿ ತೆಗೆದುಕೊಂಡು ಸಂಭ್ರಮ ಪಡುತ್ತಿದ್ದಾರೆ.

ಸೂರ್ಯಕಾಂತಿ ಅರಳು‌ವ ಸಮಯದಲ್ಲಿ ಈ ಭಾಗದಲ್ಲಿ ಈ ಚಿತ್ರಣ ಪ್ರತಿ ವರ್ಷ ಕಂಡು ಬರುತ್ತದೆ. ಈ ರಸ್ತೆಯಲ್ಲಿ ಸಂಚರಿಸುವವರು ಅದರಲ್ಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೂವಿನ ಸೌಂದರ್ಯವನ್ನು ಸವಿದು ಖುಷಿ ಅನುಭವಿಸುತ್ತಿದ್ದಾರೆ.

ಇತ್ತ ಜಮೀನಿನ ಮಾಲೀಕರು ಫೋಟೊ ತೆಗೆಸಿಕೊಳ್ಳಲು ಬಯಸುವ ಪ್ರವಾಸಿಗರಿಂದ ಹಣವನ್ನೂ ಪಡೆಯುತ್ತಿದ್ದಾರೆ. ವಾರಾಂತ್ಯದಲ್ಲಿ ಹಾಗೂ ರಜಾದಿನಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರ ಸಂಖ್ಯೆಯೂ ಹೆಚ್ಚಿರುತ್ತದೆ. ಸವಾರರೇ ಸೂರ್ಯಕಾಂತಿ ತೋಟದಲ್ಲಿ ಫೋಟೊ ತೆಗೆಸಿಕೊಂಡು ಜಮೀನಿನ ಮಾಲೀಕರಿಗೆ ಹಣವನ್ನು ನೀಡುತ್ತಿದ್ದಾರೆ.

ADVERTISEMENT

‘ನಿತ್ಯ ರಸ್ತೆಯಲ್ಲಿ ಸಂಚಾರ ಮಾಡುವವರು ಫೋಟೊ ತೆಗೆದುಕೊಳ್ಳಲು ಬರುತ್ತಾರೆ. ಬೇಡ ಎನ್ನುವುದಕ್ಕೆ ಆಗುವುದಿಲ್ಲ. ಫಸಲನ್ನು ಹಾಳು ಮಾಡದಂತೆ ಸೂಚಿಸುತ್ತೇವೆ. ಪೋಟೊ ತೆಗೆದುಕೊಂಡ ನಂತರ ಪ್ರವಾಸಿಗರೇ ಇಂತಿಷ್ಟು ಎಂದು ಕೊಡುತ್ತಿದ್ದರು. ಇದೀಗ‌ ನಾವೇ ಒಬ್ಬರಿಂದ ₹ 10ರಂತೆ ಪಡೆಯುತ್ತೇವೆ. ಬೆಳೆ ಬೆಳೆದು ಕೈ ಸೇರುವ ಹೊತ್ತಿಗೆ ಇದರಿಂದಲೂ ಸ್ವಲ್ಪ ಹಣ ಸಂಗ್ರಹವಾಗುತ್ತದೆ’ ಎಂದು ಜಮೀನಿನ ಮಾಲೀಕರಾದ ಮಹಾದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾರಾಂತ್ಯದಲ್ಲಿ ಊಟಿಗೆ ಪ್ರವಾಸ ಹೋಗುವವರು ಮತ್ತು ಕೇರಳದ ಪ್ರವಾಸಿಗರು ಹೆಚ್ಚು ಬರುತ್ತಾರೆ. ಉಳಿದ ದಿನಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇರುತ್ತದೆ. ಕೆಲವೊಬ್ಬರು ಮಾತ್ರ ಬರುತ್ತಾರೆ. ಹೂವು ಕಾಳು ಕಟ್ಟುವವರೆಗೆ ಇದರಿಂದ ಸಣ್ಣ ಮಟ್ಟಿನ ಆದಾಯ ಬರುತ್ತದೆ’ ಎಂದು ಜಮೀನಿನ ಮಾಲೀಕರು ಹೇಳುತ್ತಾರೆ.

‘ಸೂರ್ಯಕಾಂತಿ ಹೂ ನೋಡುವುದಕ್ಕೆ ಆಕರ್ಷಕವಾಗಿದೆ. ಇಂತಹ ದೃಶ್ಯಗಳು ನಗರಪ್ರದೇಶದಲ್ಲಿ ಸಿಗುವುದಿಲ್ಲ. ಜಮೀನಿನ ಮಾಲೀಕರು ಪೋಟೊ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ಹಾಗಾಗಿ ಹಣ ಕೊಡುವುದಕ್ಕೆ ಬೇಸರವಿಲ್ಲ’ ಎಂದು ಬೆಂಗಳೂರಿನಿಂದ ಬಂದಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಕಾವ್ಯಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.