
ಚಾಮರಾಜನಗರ: ಸುವರ್ಣಾವತಿ ಜಲಾಶಯದಿಂದ ಬೇಸಿಗೆ ಬೆಳೆಗಳಿಗೆ (ಅರೆ ನೀರಾವರಿ) ಕಟ್ಟು ನೀರಿನ ವ್ಯವಸ್ಥೆಯಡಿ ಶನಿವಾರದಿಂದಲೇ ನೀರು ಹರಿಸಲು ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಶನಿವಾರ ಸುವರ್ಣಾವತಿ ಜಲಾಶಯದಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ್ತು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಮಾಡಲಾಯಿತು.
ಬಲದಂಡೆ ಮತ್ತು ಎಡದಂಡೆ ನಾಲೆಗಳ 4,500 ಎಕರೆ ಪ್ರದೇಶಕ್ಕೆ ಜಲಾಶಯದಿಂದ ನೀರುಣಿಸಲಾಗುವುದು. ಸುವರ್ಣಾವತಿ- ಚಿಕ್ಕಹೊಳೆ ಅವಳಿ ಜಲಾಶಯಗಳಾಗಿದ್ದು ಈ ಬಾರಿ ಚಿಕ್ಕಹೊಳೆ ಸಂಪೂರ್ಣ ಭರ್ತಿಯಾಗದ ಕಾರಣ ಜಲಾಶಯದಿಂದ ಸಣ್ಣ ಕೆರೆಗಳಿಗಳಿಗಷ್ಟೆ ನೀರು ಹರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಜಲಾಶಯದಿಂದ ಮೂರು ದಿನ ನೀರು ಬಿಡುವುದು, ಬಳಿಕ ಮೂರು ದಿನ ನಿಲ್ಲಿಸಲಾಗುವುದು. ಬೇಸಿಗೆ ಬೆಳೆಗಳಿಗೆ 3 ತಿಂಗಳು ನೀರು ಸಿಗಲಿದೆ. ರಾಗಿ, ಜೋಳ ಸಹಿತ ಇತರೆ ಬೆಳೆಗಳನ್ನು ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆಯಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಜಲಾಶಯ ವ್ಯಾಪ್ತಿಯ ಕಾಲುವೆಗಳನ್ನು ಅಭಿವೃದ್ಧಿಗೊಳಿಸಲು ಹಾಗೂ ಸರಾಗವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲು ₹30 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ. ನದಿಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೋಡಿಮೋಳೆ ಕೆರೆಯಿಂದ ವಡ್ಗಲ್‌ಪುರ ಕೆರೆಗೆ ನೀರು ತುಂಬಿಸಲಾಗುವುದು. ಸುವರ್ಣಾವತಿ ಜಲಾಶಯದ ನೀರನ್ನು ಬೇಸಿಗೆ ಬೆಳೆಗೆ ಬಳಸಬಹುದು ಎಂದರು.
ನೀರು ಬಳಕೆದಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿ, ಜಲಾಶಯದ ವ್ಯಾಪ್ತಿಯಲ್ಲಿಯೇ ಕಾಡಾ ಅನುದಾನ ಬಳಕೆಯಾಗಬೇಕು. ಬೇಸಿಗೆ ಬೆಳೆಯ ನೀರು ಎಲ್ಲ ರೈತರ ಜಮೀನಿಗೂ ತಲುಪುವಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಕಾಡಾ ಕಾರ್ಯನಿರ್ವಾಹಕ ಎಂಜಿನಿಯರ್ ಗುರುಪ್ರಸಾದ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮಹೇಶ್, ಸಹಾಯಕ ಎಂಜಿನಿಯರ್ ವಿಕಾಸ್, ರೈತಮುಖಂಡರಾದ ಎಂ.ಎಂ.ಮಹೇಶ್ ಪ್ರಭು, ಆರ್.ಮಹದೇವ್, ರಮೇಶ್, ಗೋವಿಂದರಾಜು, ನಾಗರಾಜು, ವಿಜೇಂದ್ರ ಸ್ವಾಮಿ ಇದ್ದರು.
ಅರೆ ನೀರಾವರಿ ಬೆಳೆಗಳಿಗೆ ಸುವರ್ಣಾವತಿ ಜಲಾಶಯದಿಂದ ಶನಿವಾರ ಸಂಜೆಯಿಂದಲೇ ನೀರು ಬಿಡಲಾಗಿದೆ. ಇದೇ ವೇಳೆ ಚಿಕ್ಕಹೊಳೆಯಿಂದಲೂ ಕೆರೆಕಟ್ಟೆಗಳಿಗೆ ನೀರು ಹರಿಸಲಾಗಿದೆಪಿ.ಮರಿಸ್ವಾಮಿ ಕಾಡಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.