ADVERTISEMENT

ಚಾಮರಾಜನಗರ: ‘ಸ್ವದೇಶಿ ವಸ್ತು ಬಳಸಿ ದೇಶ ಬೆಳೆಸಿ’

ಸ್ವದೇಶಿ ಜಾಗೃತಿ ಸೈಕಲ್ ಜಾಥಾಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 3:00 IST
Last Updated 15 ಡಿಸೆಂಬರ್ 2025, 3:00 IST
ಬೆಂಗಳೂರಿನಿಂದ ಚಾಮರಾಜನಗರಕ್ಕೆ ಭಾನುವಾರ ಆಗಮಿಸಿದ ಸ್ವದೇಶಿ ಜಾಗೃತಿ ಸೈಕಲ್ ಜಾಥಾಗೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಅದ್ದೂರಿ ಸ್ವಾಗತ ಕೋರಲಾಯಿತು.
ಬೆಂಗಳೂರಿನಿಂದ ಚಾಮರಾಜನಗರಕ್ಕೆ ಭಾನುವಾರ ಆಗಮಿಸಿದ ಸ್ವದೇಶಿ ಜಾಗೃತಿ ಸೈಕಲ್ ಜಾಥಾಗೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಅದ್ದೂರಿ ಸ್ವಾಗತ ಕೋರಲಾಯಿತು.   

ಚಾಮರಾಜನಗರ: ಬೆಂಗಳೂರಿನಿಂದ ಚಾಮರಾಜನಗರಕ್ಕೆ ಭಾನುವಾರ ಆಗಮಿಸಿದ ಸ್ವದೇಶಿ ಜಾಗೃತಿ ಸೈಕಲ್ ಜಾಥಾಗೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಉದ್ಯಮಿ ನಿತಿನ್ ಕುಮಾರ್ ಹಾಗೂ ಮುಖ್ಯ ಶಿಕ್ಷಕ ಮಹದೇವೇಗೌಡ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ಶ್ರೀ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಸ್ವದೇಶಿ ಜಾಗೃತಿ ಸೈಕಲ್ ಜಾಥಾ ಬೆಂಗಳೂರಿನಲ್ಲಿ ಆರಂಭಗೊಂಡು ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ ಮೂಲಕ ಚಾಮರಾಜನಗರ ತಲುಪಿದೆ.

ಈ ಸಂದರ್ಭ ಬಿಗ್ರೇಡಿಯರ್ ರವಿ ಮುನಿಸ್ವಾಮಿ ಮಾತನಾಡಿ, ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಜಾಗೃತಿ ಜಾಥಾ ನಡೆಯುತ್ತಿದ್ದು ಯುವಜನತೆ ಕೈಜೋಡಿಸಬೇಕು, ನಮ್ಮ ನೆಲದಲ್ಲಿ ತಯಾರಾದ ನಮ್ಮವರು ಸಿದ್ಧಪಡಿಸಿದ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ಸ್ವದೇಶಿ ಉತ್ಪನ್ನಗಳ ಮಾರಾಟಕ್ಕೆ ಸಹಕಾರ ನೀಡಬೇಕಿದೆ ಎಂದರು.

ADVERTISEMENT

ಯೂತ್ ಫಾರ್ ನೇಶನ್ ಚಳವಳಿ ಸ್ವದೇಶಿ ಜಾಗರಣವಾಗಿ ಮುನ್ನಡೆಯುತ್ತಿದೆ. ಜಗತ್ತಿನಲ್ಲಿ ವ್ಯಾಪಾರಕ್ಕಾಗಿ ಯುದ್ಧೋನ್ಮಾದ ಹೆಚ್ಚಾಗಿರುವಾಗ ಸರಕು ಸರಬರಾಜು ಸರಪಳಿ ಅಸ್ಥಿರವಾಗುವ ಆತಂಕ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವದೇಶಿ ಉತ್ಪನ್ನಗಳ ಬಳಕೆಗೆ ಒತ್ತು ಸಿಗಬೇಕು. ಆತ್ಮನಿರ್ಭರತೆ, ಸ್ವದೇಶಿ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಜಾಗತಿಕ ವ್ಯಾಪಾರ ಸಮರ ನಡೆಯುತ್ತಿರುವ ಹೊತ್ತಿನಲ್ಲಿ ದೇಶೀಯ ಉತ್ಪಾದನೆ ಮತ್ತು ರಫ್ತುಗಳನ್ನು ಉತ್ತೇಜಿಸುವುದು ಬುದ್ಧಿವಂತಿಕೆ ಹಾಗೂ  ರಾಷ್ಟ್ರೀಯ ಕಾರ್ಯತಂತ್ರದ ಭಾಗವೂ ಆಗಿದೆ ಎಂದರು.

ಸ್ವದೇಶಿ ಚಿಂತನೆಗಳು ಬೆಳೆದರೆ ಭಾರತೀಯ ಕಲೆಗಾರರು, ತಯಾರಕರು, ರೈತರು, ಸಣ್ಣ ಪಟ್ಟಣಗಳ ಹಾಗೂ ಗ್ರಾಮೀಣ ಭಾಗದ ಉದ್ಯಮಿಗಳು ಬೆಳೆಯುತ್ತಾರೆ, ಜೀವನೋಪಾಯ ಬಲಗೊಳ್ಳಲಿದೆ. ಸ್ಥಳೀಯ ಆರ್ಥಿಕತೆ ಸದೃಢಗೊಂಡು ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದರು.

2025-26ರ ವೇಳೆಗೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ 359.45 ಶತಕೋಟಿ ಡಾಲರ್ ತಲುಪುವ ಅಂದಾಜಿದೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕರ್ನಾಟಕದ ಪಾಲು ಮಹತ್ತರವಾಗಿದ್ದು ದೇಶದ ಜಿಡಿಯಲ್ಲಿ ರಾಜ್ಯದ ಕೊಡುಗೆ ಶೇ 8.7ರಷ್ಟು ಇದ್ದು ಅತ್ಯಧಿಕ ಮಟ್ಟವಾಗಿದೆ. ಸೇವೆ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳು ಜಿಡಿಪಿ ಹೆಚ್ಚಳಕ್ಕೆ ಹೆಚ್ಚಿನ ಕೊಡುಗೆ ನೀಡಿವೆ ಎಂದರು.

ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದರೂ ಸ್ವದೇಶಿ ವಸ್ತುಗಳ ಬಳಕೆ ಅತ್ಯಗತ್ಯವಾಗಿದೆ. ದೇಶದ ಆಮದು ಪ್ರಮಾಣ ತಗ್ಗಿ ರಫ್ತು ಪ್ರಮಾಣ ಹೆಚ್ಚಾಗಬೇಕಿದೆ. ದೇಶದ ಭದ್ರತೆ, ಆರ್ಥಿಕ ಸಮಾನತೆಗೆ ಹಾಗೂ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಇದು ಪೂರಕವಾಗಿದೆ. ಆರ್ಥಿಕ ಶಕ್ತಿ ಎಂದರೆ ಪ್ರತಿರೋಧಕ ಸಾಮರ್ಥ್ಯ ಹೆಚ್ಚಿಸುವುದಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.