ADVERTISEMENT

ಸಂತೇಮರಹಳ್ಳಿ: ಶಿಕ್ಷಕ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:35 IST
Last Updated 21 ಆಗಸ್ಟ್ 2025, 4:35 IST
ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರ ವರ್ಗಾವಣೆ ಆದೇಶ ರದ್ದು ಪಡಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು 
ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರ ವರ್ಗಾವಣೆ ಆದೇಶ ರದ್ದು ಪಡಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು    

ಸಂತೇಮರಹಳ್ಳಿ: ಸಮೀಪದ ಹೆಗ್ಗವಾಡಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರ ವರ್ಗಾವಣೆ  ಆದೇಶ ರದ್ದು ಪಡಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಬುಧವಾರ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಬುಧವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಶಾಲಾ ಗೇಟ್ ಮುಂಭಾಗದಲ್ಲಿ ಶಿಕ್ಷಕರ ವರ್ಗಾವಣೆ ರದ್ದು ಪಡಿಸಬೇಕೆನ್ನುವ ನಾಮಫಲಕ ಹಿಡಿದು, ಶಿಕ್ಷಣ ಇಲಾಖೆ ವಿರುದ್ಧ ದಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಶಾಲೆಯಲ್ಲಿ ಒಂದರಿಂದ ಎಂಟನೆ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಂಗ್ಲಿಷ್‌ ಭಾಷಾ ಶಿಕ್ಷಕ ಕಿಶೋರ್ ಅವರು ಒಂಬತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. ಇವರು ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದಿಂದ ಗ್ರಾಮದಲ್ಲಿ ಖಾಸಗಿ ಶಾಲೆಗೆ ಹೋಗುತ್ತಿದ್ದ ಎಷ್ಟೋ ಮಕ್ಕಳು ಗ್ರಾಮದ ಶಾಲೆಗೆ ದಾಖಲಾಗಿದ್ದಾರೆ. ಈಗ ಗ್ರಾಮದ ಶಾಲೆಯಲ್ಲಿರುವ ಮಕ್ಕಳು ಇಂಗ್ಲಿಷ್ ಭಾಷೆಯನ್ನು ಉತ್ತಮವಾಗಿ ಕಲಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣೆಯ ಆದೇಶ ರದ್ದು ಪಡಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಜಿಲ್ಲಾಧಿಕಾರಿಯವರು ಸೇರಿದಂತೆ ಶಿಕ್ಷಣ ಇಲಾಖೆಗೆ ಮನವಿ ನೀಡಲಾಗಿದೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಕಿಶೋರ್ ಅವರನ್ನು ಗ್ರಾಮದ ಶಾಲೆಯಲ್ಲಿಯೆ ಉಳಿಸಿ ಆವರ ವರ್ಗಾವಣೆ ರದ್ದು ಪಡಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಪ್ರತಿಭಟನ ಸ್ಥಳಕ್ಕೆ ಭೇಟಿಕೊಟ್ಟು ಮಾತನಾಡಿ, ರಾಜ್ಯಮಟ್ಟದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರ ವರ್ಗಾವಣೆ ನಡೆಯುತ್ತಿದೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜನೆ ಮಾಡಲಾಗುತ್ತದೆ. ಈಗಾಗಲೇ ವರ್ಗಾವಣೆಯಾಗುತ್ತಿರುವ ಶಿಕ್ಷಕರ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಗ್ರಾಮದ ಶಾಲಾ ಶಿಕ್ಷಕರ ಹೆಸರನ್ನು ಕೈಬಿಡಿಸುವ ಸಂಬಂಧವಾಗಿ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಜೊತೆ ಚರ್ಚಿಸಿ ನಂತರ ಇಲಾಖೆಗೆ ವರದಿ ನೀಡಿ ಆದೇಶ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ರೈತ ಮುಖಂಡರಾದ ಹೆಗ್ಗವಾಡಿಪುರ ಮಹೇಶ್‌ ಕುಮಾರ್, ಶಾಲಾ ಸಮಿತಿ ಅಧ್ಯಕ್ಷ ಎಚ್.ಎಂ.ಸಿದ್ದರಾಜು, ಉಪಾಧ್ಯಕ್ಷೆ ಸಹನಾ, ಮಹದೇವ ಪ್ರಸಾದ್, ಪೋಷಕರಾದ ಸುಧಾ, ಮಮತ, ಮಂಜುಳಾ, ಪವಿತ್ರ, ಪದ್ಮ, ಸಿಂಧು, ಮನಿಯಮ್ಮ, ತಾಯಮ್ಮ, ಮಹದೇವಮ್ಮ, ಶೀಲಾ, ಶ್ರೀಕಂಠಸ್ವಾಮಿ, ಪ್ರಕಾಶ್, ಶಿವಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.