ಚಾಮರಾಜನಗರ: ರಾಜ್ಯ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸೋಮವಾರ ಜಿಲ್ಲೆಯಲ್ಲಿ ಚಾಲನೆ ಸಿಕ್ಕರೂ ತಾಂತ್ರಿಕ ಸಮಸ್ಯೆಗಳು ಅಡ್ಡಿಯಾಗಿ ನಿರೀಕ್ಷೆಯಂತೆ ನಡೆಯಲಿಲ್ಲ.
ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಗಣತಿದಾರರು ಸಮೀಕ್ಷೆಗೆ ಬೇಕಾದ ಪರಿಕರಗಳನ್ನು ಪಡೆದುಕೊಳ್ಳಲು ನಗರದ ದೇವರಾಜ ಅರಸು ಭವನಕ್ಕೆ ಬಂದು ಮಧ್ಯಾಹ್ನದವರೆಗೂ ಕಾಯಬೇಕಾಯಿತು. ಸಮಯಕ್ಕೆ ಸರಿಯಾಗಿ ಗಣತಿದಾರರಿಗೆ ಸಮೀಕ್ಷಾ ಪರಿಕರಗಳು ದೊರೆಯಲಿಲ್ಲ. ಸರ್ವರ್ ಸಮಸ್ಯೆಯಿಂದಾಗಿ ಆ್ಯಪ್ ಡೌನ್‌ಲೋಡ್ ಆಗಲಿಲ್ಲ.
‘ಪೃಥ್ವಿ ಸಮೀಕ್ಷಾ ಪಥ’ ಆ್ಯಪ್‌ನಲ್ಲಿ ಲಾಗಿನ್ ಮಾಡಿಕೊಳ್ಳಲು ತಾಂತ್ರಿಕ ಸಮಸ್ಯೆಗಳು ಎದುರಾಯಿತು. ಗಣತಿದಾರರು ಮೊಬೈಲ್ ನಂಬರ್ ನಮೂದು ಮಾಡಿದರೂ ಒಟಿಪಿ ಬರಲಿಲ್ಲ. ಇದರಿಂದಾಗಿ ಯಾವ ಪ್ರದೇಶಕ್ಕೆ ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ. ಎಷ್ಟು ಕುಟುಂಬಗಳ ಸಮೀಕ್ಷೆ ಮಾಡಬೇಕಾಗಿದೆ ಎಂಬ ಮಾಹಿತಿ ದೊರೆಯದೆ ಗೊಂದಲಕ್ಕೆ ಸಿಲುಕಬೇಕಾಯಿತು.
‘ಮಧ್ಯಾಹ್ನ 3ರ ಹೊತ್ತಿಗೆ ಕೆಲವರು ಲಾಗಿನ್ ಮಾಡಿಕೊಂಡರೂ ಆ್ಯಪ್‌ನಲ್ಲಿ ಅಸ್ಪಷ್ಟವಾದ ಮಾಹಿತಿಯಿಂದ ಕಿರಿಕಿರಿ ಅನುಭವಿಸಿದರು. ಒಮ್ಮೆ ಆ್ಯಪ್ ತೆರೆದಾಗ 320 ಕುಟುಂಬಗಳ ಸಮೀಕ್ಷೆ ಮಾಡುವ ಮಾಹಿತಿ ತೋರಿಸಿತು. ಮತ್ತೊಮ್ಮೆ ತೆರೆದಾಗ ಮಾಹಿತಿಯೇ ಕಾಣಲಿಲ್ಲ’ ಎಂದು ಶಿಕ್ಷಕಿಯೊಬ್ಬರು ಸಮಸ್ಯೆ ಹೇಳಿಕೊಂಡರು.
‘ಆ್ಯಪ್‌ನಲ್ಲಿ ಸಮೀಕ್ಷಾದಾರರ ವಿಳಾಸ ಇರುವುದಿಲ್ಲ. ಜಿಪಿಎಸ್ ಆಧಾರದಲ್ಲಿ ಸಮೀಕ್ಷೆ ಮಾಡುವ ಮನೆಗಳನ್ನು ಹುಡುಕಿಕೊಂಡು ಹೋಗಬೇಕಾಗಿದೆ. ಗೂಗಲ್ ಮ್ಯಾಪ್ ಮೂಲಕ ಮನೆಗಳನ್ನು ಹುಡುಕುವುದು ಕಷ್ಟವಾಗುತ್ತದೆ’ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಸಮಸ್ಯೆ ತೆರೆದಿಟ್ಟರು.
‘150 ಕುಟುಂಬಗಳ ಸಮೀಕ್ಷೆ ಮಾಡುವ ಗುರಿ ನೀಡಲಾಗಿದೆ. 60 ಪ್ರಶ್ನೆಗಳಿಗೆ ಉತ್ತರ ಪಡೆದು ಆ್ಯಪ್‌ನಲ್ಲಿ ಮಾಹಿತಿ ಹಾಕಬೇಕು. ಕುಟುಂಬದ ಎಲ್ಲ ಸದಸ್ಯರ ಆಧಾರ್ ಸಂಖ್ಯೆಗಳನ್ನು ಒಟಿಪಿ ಸಹಿತ ಆ್ಯಪ್‌ನಲ್ಲಿ ನಮೂದಿಸಬೇಕಾಗಿದೆ. ಒಂದು ಕುಟುಂಬದ ಸಮೀಕ್ಷೆಗೆ ಒಂದು ತಾಸಿಗೂ ಹೆಚ್ಚು ಸಮಯ ಹಿಡಿಯುತ್ತಿದ್ದು ನಿಗಧಿತ ಅವಧಿಯೊಳಗೆ ಪೂರ್ಣಗೊಳ್ಳುವುದು ಕಷ್ಟ’ ಎಂದು ಗಣತಿದಾರರು ಬೇಸರ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಬ್ಯಾಗ್ ಕೊಡುತ್ತಿಲ್ಲ: ‘ಸಮೀಕ್ಷಾ ಪರಿಕರಗಳ ಜೊತೆಗೆ ಕೆಲವರಿಗೆ ಪ್ಲಾಸ್ಟಿಕ್ ಬ್ಯಾಗ್ ನೀಡಲಾಗಿದ್ದು ಕೆಲವರಿಗೆ ನೀಡಿಲ್ಲ. ಮಳೆ ಬಂದರೆ ಮಹತ್ವದ ದಾಖಲಾತಿಗಳು ತೋಯ್ದುಹೋಗುವ ಅಪಾಯವಿದ್ದು ಪ್ರತಿಯೊಬ್ಬರಿಗೂ ಬ್ಯಾಗ್ ಹಂಚಿಕೆ ಮಾಡಬೇಕು’ ಎಂದು ಗಣತಿದಾರರೊಬ್ಬರು ಒತ್ತಾಯಿಸಿದರು.
‘ಮೊದಲ ದಿನ ಸಮಸ್ಯೆ’
‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಮೊದಲ ದಿನ ತಾಂತ್ರಿಕ ಸಮಸ್ಯೆಗಳು ಅಡ್ಡಿಯಾದ ಪರಿಣಾಮ ಸಮರ್ಪಕವಾಗಿ ನಡೆಯಲಿಲ್ಲ. ಆ್ಯಪ್ ಡೌನ್‌ಲೋಡ್ ಮಾಡಲು ಮೊಬೈಲ್ ಫೋನ್‌ಗೆ ಒಟಿಪಿ ನಮೂದಿಸಲು ಸಮಸ್ಯೆ ಎದುರಾಗಿದ್ದು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ವಿಶ್ವನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.