ಸಂತೇಮರಹಳ್ಳಿ: ಕೇಂದ್ರ ಸ್ಥಾನದಲ್ಲಿರುವ ಉಪ ಮಾರುಕಟ್ಟೆ ಜಿಲ್ಲಾ ಮಾರುಕಟ್ಟೆಯಾಗುವ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದ್ದು ಜಿಲ್ಲೆಯಲ್ಲೇ ಮಾದರಿ ಮಾರುಕಟ್ಟೆಯನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಇಲ್ಲಿನ ಉಪ ಮಾರುಕಟ್ಟೆ ಆವರಣದಲ್ಲಿ ಅಂಗಡಿ ಮಳಿಗೆ ಉದ್ಘಾಟನೆ ಹಾಗೂ ಪ್ರಾಂಗಣದ ಮುಖ್ಯ ರಸ್ತೆಗೆ ಡಾಂಬರ್ ರಸ್ತೆ ಹಾಗೂ ಚರಂಡಿಗೆ ಸ್ಲಾಬ್ ನಿರ್ಮಾಣ ಮಾಡುವ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸಂತೇಮರಹಳ್ಳಿ ಉಪ ಮಾರುಕಟ್ಟೆ 21 ಎಕರೆ ವಿಸ್ತೀರ್ಣ ಹೊಂದಿದ್ದು 1994ರಲ್ಲಿ ಎಚ್.ನಾಗಪ್ಪ ಕೃಷಿ ಉತ್ಪನ್ನ ಸಚಿವರಾಗಿದ್ದ ಸಂಧರ್ಭದಲ್ಲಿ ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ಒದಗಿಸಿದ್ದರು. ಈ ಸಂದರ್ಭ ಗೋದಾಮುಗಳನ್ನು ನಿರ್ಮಿಸಲಾಯಿತು. ಮತ್ತೆ ಮಾರುಕಟ್ಟೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದ್ದು ಅಧಿಕಾರಿಗಳು ಮಾರುಕಟ್ಟೆಗೆ ಬೇಕಾದ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಸಂತೇಮರಹಳ್ಳಿ ಜಂಕ್ಷನ್ ಕೇಂದ್ರವಾಗಿದ್ದು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯಲ್ಲಿ ಮಾರುಕಟ್ಟೆ ಇರುವುದರಿಂದ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಯಳಂದೂರು, ಚಾಮರಾಜನಗರ, ಗುಂಡ್ಲುಪೇಟೆ ಭಾಗದಲ್ಲಿ ತೆಂಗಿನ ತೋಟಗಳು ಹೆಚ್ಚಾಗಿದ್ದು ಎಳನೀರು ಬೆಳೆಗಾರರ ಅನುಕೂಲಕ್ಕಾಗಿ ಸಂತೇಮರಹಳ್ಳಿ ಉಪ ಮಾರುಕಟ್ಟೆ ಆವರಣದಲ್ಲಿ ಎಳನೀರು ಮಾರುಕಟ್ಟೆ ಸ್ಥಾಪಿಸಲು ಸಚಿವ ಶಿವಾನಂದ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಗುವುದು.
ಜಿಲ್ಲೆಯ ಎಳನೀರು ಮಧ್ಯವರ್ತಿಗಳ ಮೂಲಕ ಹೊರ ರಾಜ್ಯಗಳಿಗೆ ರವಾನೆಯಾಗುತ್ತಿದ್ದು ಜಿಲ್ಲೆಯ ರೈತರಿಗೆ ಕಡಿಮೆ ದರ ಸಿಗುತ್ತಿದೆ. ಇಲ್ಲಿಯೇ ಎಳನೀರು ಮಾರುಕಟ್ಟೆ ಆರಂಭವಾದರೆ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಮದ್ದೂರು ಮಾರುಕಟ್ಟೆಯಲ್ಲಿ ನಿರ್ಮಾಣ ಮಾಡಿರುವಂತೆ ಇಲ್ಲಿಯೂ ಎಳನೀರು ಮಾರುಕಟ್ಟೆ ನಿರ್ಮಾಣವಾಗಬೇಕು ಎಂದರು.
ನರ್ಬಾಡ್ ಯೋಜನೆಯಡಿ ₹ 5 ಕೋಟಿ ವೆಚ್ಚದಲ್ಲಿ ಎಳನೀರು ಮಾರುಕಟ್ಟೆ ನಿರ್ಮಾಣ ಮಾಡಲು ಅನುಮೋದನೆ ದೊರಕಿದೆ. ಅನುದಾನ ಬಿಡುಗಡೆಯಾದ ನಂತರ ಕೃಷಿ ಉತ್ಪನ್ನ ಸಚಿವ ಶಿವಾನಂದ ಪಾಟೀಲ್ ಅವರಿಂದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ₹ 30 ಲಕ್ಷ ವೆಚ್ಚದಲ್ಲಿ ಮುಖ್ಯ ರಸ್ತೆಗೆ ಡಾಂಬರ್ ಹಾಗೂ ಚರಂಡಿ ಸ್ಲಾಬ್ ನಿರ್ಮಾಣ ಮಾಡಲಾಗುತ್ತದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಎಚ್.ಎನ್.ಮಹದೇವಸ್ವಾಮಿ, ಉಪಾಧ್ಯಕ್ಷ ಎಲ್.ರಾಮಚಂದ್ರು, ಸದಸ್ಯ ಪ್ರದೀಪ್‌ಕುಮಾರ್, ನಾಮ ನಿರ್ದೇಶಿತ ಸದಸ್ಯ ಎಂ.ಬಿ.ಕುಮಾರ್, ಕಲಾವತಿ, ಗುರುಸ್ವಾಮಿ, ರವಿಶಂಕರ್‌ಮೂರ್ತಿ, ವೆಂಕಟರಾವ್, ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಎ.ಜಿ.ಬಸವಣ್ಣ, ಸಹಾಯಕ ಎಂಜಿನಿಯರ್ ಎನ್.ಶಿವಕುಮಾರ್, ಕಾರ್ಯದರ್ಶಿ ಬಿ.ಜಗದೀಶ್, ಸಹ ಕಾರ್ಯದರ್ಶಿ ಮಧು ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮೂಲ್ ನಾಮ ನಿರ್ದೇಶಿತ ಸದಸ್ಯ ಕಮರವಾಡಿ ರೇವಣ್ಣ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬಡಗಲಮೋಳೆ ಚೇತನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾಲತಾ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.