ADVERTISEMENT

ಕೋವಿಡ್-19: ತಮ್ಮೂರಗಳತ್ತ ಕುರಿಗಾಯಿಗಳ ಹೆಜ್ಜೆ

ಎರಡನೇ ಅಲೆಗೆ ಕಂಗೆಟ್ಟ ಜಾನುವಾರು ಸಾಕಣೆದಾರರು

​ಪ್ರಜಾವಾಣಿ ವಾರ್ತೆ
Published 6 ಮೇ 2021, 3:54 IST
Last Updated 6 ಮೇ 2021, 3:54 IST
ವಲಸೆ ಪ್ರದೇಶಗಳಿಂದ ಕುರಿಗಳನ್ನು ಹೊಡೆದುಕೊಂಡು ಮಂಡ್ಯಕ್ಕೆ ತೆರಳುತ್ತಿರುವ ಕುರಿಗಾಯಿಗಳು
ವಲಸೆ ಪ್ರದೇಶಗಳಿಂದ ಕುರಿಗಳನ್ನು ಹೊಡೆದುಕೊಂಡು ಮಂಡ್ಯಕ್ಕೆ ತೆರಳುತ್ತಿರುವ ಕುರಿಗಾಯಿಗಳು   

ಯಳಂದೂರು: ರಾಜ್ಯದ ವಿವಿಧ ಭಾಗಗಳಿಂದ ಮೇವು- ನೀರು ಅರಸಿ ಗ್ರಾಮೀಣ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ ಕುರಿಗಾಯಿಗಳು ಈ ವರ್ಷವೂ ಕೋವಿಡ್-19ರ ಅಲೆಗೆ ಸಿಲುಕಿದ್ದಾರೆ. ಕುರಿಗಳಿಂದಲೇ ಬದುಕು ಕಟ್ಟಿಕೊಂಡಿರುವ ಇವರನ್ನು ಕೃಷಿಕರು ಮೊದಲಿನಂತೆ ಆಹಾರ ನೀರು ಕೊಟ್ಟು ಸಲುಹುತ್ತಿಲ್ಲ. ವ್ಯಾಪಾರಿಗಳು ಕುರಿ ಕೊಳ್ಳಲು ಬರುತ್ತಿಲ್ಲ, ಹೀಗಾಗಿ ವಲಸೆ ಬಂದ ಕುರಿಗಾಯಿಗಳು ತಮ್ಮೂರುಗಳತ್ತ ವಾಪಸ್ ಹೊರಟಿದ್ದಾರೆ.

ತಾಲ್ಲೂಕಿನ ಹೊಲಗದ್ದೆಗಳಲ್ಲಿ ಕುರಿಗಾಯಿಗಳು ಬೀಡು ಬಿಡುತ್ತಿದ್ದರು. ಮಂಡ್ಯ, ಬನ್ನೂರು, ದಾವಣಗೆರೆ, ಹಾವೇರಿ, ರಾಮನಗರ ಮೊದಲಾದ ಪ್ರದೇಶಗಳಿಂದ ಬಂದವರು, ಮರಳಿ ತಮ್ಮೂರು ತಲುಪಲು ವರ್ಷಗಳೇ ಬೇಕಾಗುತ್ತಿತ್ತು. ಒಂದೊಂದು ಗ್ರಾಮಗಳ ಹೊರವಲಯದ ಜಮೀನುಗಳಲ್ಲಿ ತಂಗುತ್ತ, ಆಹಾರ, ವಸತಿ ಪೂರೈಸಿಕೊಳ್ಳುತ್ತಿದ್ದರು. ಮೇಕೆ, ಆಡು, ಕತ್ತೆ, ನಾಯಿ ಮತ್ತು ತಮ್ಮ ಸಿಬ್ಬಂದಿ ಜೊತೆ ಗುಡಾರ ಹಾಕಿಕೊಂಡು ದಿನ ನೂಕುತ್ತಿದ್ದರು.

‘ಈಗ ಕೊರೊನಾ ಅಲೆ ಹೆಚ್ಚಾಗುತ್ತಿದೆ. ಹೊಲ, ಗದ್ದೆಗಳ ಮಾಲೀಕರು ಮೊದಲಿನಂತೆ ಹಣ, ದವಸ, ಧಾನ್ಯ ನೀಡಿ ಕುರಿ ಹಿಂಡನ್ನು ಹೊಲಗದ್ದೆಗಳಲ್ಲಿ ಬಿಟ್ಟುಕೊಳ್ಳುತ್ತಿಲ್ಲ. ಇದರಿಂದ ಪ್ರತಿದಿನ ಬರುತ್ತಿದ್ದ ಆದಾಯ ಕುಸಿದಿದೆ. ಆಹಾರದ ಸಮಸ್ಯೆ ಕಾಡುತ್ತಿದೆ. ವಾಪಸ್ ಗ್ರಾಮಗಳಿಗೆ ತೆರಳಬೇಕಿದೆ. ಕುರಿ ಕೊಳ್ಳುವವರು ಈಗ ವ್ಯಾಪಾರ ಮಾಡುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಕಳೆದ ವರ್ಷ ಕೊರೊನಾ ಸೋಂಕು ಹೆಚ್ಚಾದಾಗ ಸರ್ಕಾರ ಆಹಾರದ ಕಿಟ್ ನೀಡಿ ಸಂತೈಸಿದ್ದರು. ಈಗ ಕುರಿಗಾಯಿಗಳ ನೆರವಿಗೆ ಯಾರು ಬರುತ್ತಿಲ್ಲ’ ಎನ್ನುತ್ತಾರೆ ಮಂಡ್ಯದ ಕುರಿಗಾಯಿ ರಾಮಯ್ಯ.

ADVERTISEMENT

‘ಮುಂಗಾರು ಪೂರ್ವದಲ್ಲಿ ರೈತರು ಕುರಿಗಳನ್ನು ಜಮೀನುಗಳಲ್ಲಿ ತಂಗಿಸುತ್ತಿದ್ದರು. ಕುರಿಗಳ ಹಿಕ್ಕೆ ಮತ್ತು ಮೂತ್ರ ಸುಲಭವಾಗಿ ಭೂಮಿ ಸೇರುತ್ತಿತ್ತು. ಹಿಡುವಳಿದಾರರು ಪ್ರತಿಫಲವಾಗಿ ಹಣ ಮತ್ತು ಆಹಾರ ನೀಡಿ ನೆರವು ಕಲ್ಪಿಸುತ್ತಿದ್ದರು. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮಂದೆ ಕುರಿಗಳಿಗೂ ಬೇಡಿಕೆ ಕುಸಿದಿದೆ’ ಎನ್ನುತ್ತಾರೆ ಕುರಿಗಾಯಿ ತಿಪ್ಪಮ್ಮ.

‘ವಾಪಸ್ ಊರಿಗೆ ತೆರಳಿದರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಳೆಗಾಲ ಸಮೀಪಿಸಿದರೆ ಹುಟ್ಟೂರಿನಲ್ಲಿ ಕುರಿಗಳಿಗೆ ಮೇವು ಮತ್ತು ನೀರು ಸಿಕ್ಕುವ ಭರವಸೆ ಇದೆ. ಹಾಗಾಗಿ, ಜಾನುವಾರು ಸಮೇತ ಸ್ವಗ್ರಾಮಕ್ಕೆ ಮರಳಿ ಹೋಗುತ್ತಿದ್ದೇವೆ ಎನ್ನುತ್ತಾರೆ’ ಕುಯಿಗಾಯಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.