ADVERTISEMENT

ಕೊಳ್ಳೇಗಾಲ: ಅರ್ಧ ಕೆ.ಜಿ ಚಿನ್ನ ಕಳ್ಳತನ;ಮೂವರ ಬಂಧನ

ಪರಿಚಯಸ್ಥನಿಂದಲೇ ಕೃತ್ಯ, ಪ್ರೇಯಸಿ, ಸ್ನೇಹಿತನ ನೆರವಿನಿಂದ ಚಿನ್ನ ಮಾರಾಟಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 7:09 IST
Last Updated 4 ಫೆಬ್ರುವರಿ 2023, 7:09 IST
ಕೊಳ್ಳೇಗಾಲದ ಬಸವೇಶ್ವರ ನಗರದ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರ ತಂಡವು ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಚಿನ್ನಾಭರಣ ಹಾಗೂ ನಗದು ಹಣ ಪ್ರದರ್ಶಿಸಿತು
ಕೊಳ್ಳೇಗಾಲದ ಬಸವೇಶ್ವರ ನಗರದ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರ ತಂಡವು ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಚಿನ್ನಾಭರಣ ಹಾಗೂ ನಗದು ಹಣ ಪ್ರದರ್ಶಿಸಿತು   

ಕೊಳ್ಳೇಗಾಲ: ಇಲ್ಲಿನ ಶ್ರೀ ಬಸವೇಶ್ವರ ನಗರದಲ್ಲಿರುವ ದತ್ತ ಮೆಡಿಕಲ್ ಮಾಲೀಕ ವಿನಯ್ ಮನೆಯಲ್ಲಿ ನಡೆದ ಚಿನ್ನಾಭರಣ ಹಾಗೂ ನಗದು ಕಳ್ಳತನ ಪ್ರಕರಣದ ಎಲ್ಲ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಕಾಮಗೆರೆ ಗ್ರಾಮದ ಭರತ್ (23), ಗುಂಡ್ಲಪೇಟೆಯ ಕಾವ್ಯ (21), ಮೈಸೂರಿನ ಲೋಹಿತ್ ಕುಮಾರ್ (25) ಬಂಧಿತರು. ಅವರ ಬಳಿಯಿಂದ 513 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಡಿವೈಎಸ್‌ಪಿ ಸೋಮೇಗೌಡ ಅವರು ಪ್ರಕರಣ ವಿವರಗಳನ್ನು ನೀಡಿದರು. ವಶಪಡಿಸಿಕೊಂಡ ಚಿನ್ನಾಭರಣ ಹಾಗೂ ನಗದು ಹಣವನ್ನು ಪ್ರದರ್ಶಿಸಿದರು.

ADVERTISEMENT

ವಿನಯ್‌ ಸಹೋದರ ನಾಗರಾಜು ಬಾಬು ಅವರು ನಡೆಸುತ್ತಿದ್ದ ಮೆಡಿಕಲ್‌ನಲ್ಲಿ ಭರತ್‌ ಕೆಲಸ ಮಾಡುತ್ತಿದ್ದ. 10 ವರ್ಷಗಳಿಂದಲೂ ಅಲ್ಲಿದ್ದ ಆತ ನಂಬಿಕಸ್ಥ ನೌಕರನಾಗಿದ್ದ. ವಿನಯ್‌ ಮನೆಯಲ್ಲಿ ಚಿನ್ನಾಭರಣಗಳಿರುವ ವಿಷಯ ಆತನಿಗೆ ಗೊತ್ತಿತ್ತು. ಪೂರ್ವ ಯೋಜಿತವಾಗಿ, ಜನವರಿ 18ರಂದು ವಿನಯ್‌ ಶಿವಮೊಗ್ಗಕ್ಕೆ ಹೋಗಿದ್ದಾಗ, ಅವರ ಪತ್ನಿ ಮೆಡಿಕಲ್‌ನಲ್ಲಿ ಇದ್ದ ಸಮಯದಲ್ಲಿ ಕಳ್ಳತನ ಮಾಡಿದ್ದ. ನಂತರ ಮೈಸೂರಿನಲ್ಲಿ ಬ್ಯೂಟಿಪಾರ್ಲರ್‌ ನಡೆಸುತ್ತಿದ್ದ ತನ್ನ ಪ್ರೇಯಸಿ ಕಾವ್ಯ ಮೂಲಕ ಚಿನ್ನ ಮಾರಾಟ ಮಾಡಲು ಯತ್ನಿಸಿದ್ದ. ಈ ಕೃತ್ಯಕ್ಕೆ ಭರತ್ ಸ್ನೇಹಿತ ಲೋಹಿತ್‌ ಕುಮಾರ್‌ ಕೂಡ ಕೈಜೋಡಿಸಿದ್ದ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿವೈಎಸ್‌ಪಿ ಸೋಮೇಗೌಡ, ‘ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೆವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಎ.ಎಸ್.ಪಿ ಉದೇಶ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಅವರಿಂದ 513 ಗ್ರಾಂ ಚಿನ್ನಾಭರಣ, ₹20 ಸಾವಿರ ನಗದು, ಒಂದು ಬೈಕ್, ಒಂದು ಮೊಬೈಲ್ ಸೇರಿದಂತೆ ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದರು.

ತನಿಖಾ ತಂಡದಲ್ಲಿ ಇನ್‌ಸ್ಪೆಕ್ಟರ್‌ ಕೃಷ್ಣಪ್ಪ, ಪಿ.ಎಸ್.ಐಗಳಾ ಮಹೇಶ್ ಕುಮಾರ್, ರಾಮಸ್ವಾಮಿ, ಸಿಬ್ಬಂದಿ ಬಿಳಿಗೌಡ, ಶಿವಕುಮಾರ್, ಪ್ರಕಾಶ್, ವೆಂಕಟೇಶ್, ಕುಮಾರ್, ಸುನೀಲ್, ಸವಿರಾಜ್, ಅಮರೇಶ್, ಶಿವರಾಜ್, ಶಿವಪ್ರಸಾದ್ ನಾಯಕ, ರಾಧ, ಜ್ಯೋತಿ, ಯಶೋಧ, ಯಶೋಧಮ್ಮ, ರಾಜಣ್ಣ, ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.