ADVERTISEMENT

ಚಾಮರಾಜನಗರದಲ್ಲಿ ಮೂರು ಸಾವು, ಹೊಸ 64 ಪ್ರಕರಣ

ಕೋವಿಡ್‌: ಹೆಚ್ಚಿದ ಸೋಂಕಿತರ ಸಂಖ್ಯೆ, 51 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 16:30 IST
Last Updated 10 ಸೆಪ್ಟೆಂಬರ್ 2020, 16:30 IST
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ   

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ಕೋವಿಡ್‌ನಿಂದಾಗಿ ಮೂರು ಸಾವಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಮೃತಪಟ್ಟ ಸೋಂಕಿತರ ಸಂಖ್ಯೆ 60ಕ್ಕೆ ಏರಿದೆ. ಕೋವಿಡ್‌ನಿಂದಾಗಿ 42 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಸೋಂಕು ಇದ್ದರೂ, ಬೇರೆ ಅನಾರೋಗ್ಯದಿಂದಾಗಿ 18 ಜನರು ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟ ಮೂವರಲ್ಲಿ ಇಬ್ಬರು ಚಾಮರಾಜನಗರದವರು, ಇನ್ನೊಬ್ಬರು ತಾಲ್ಲೂಕಿನ ಹೊಂಗನೂರು ಗ್ರಾಮದವರು.

ಹೊಂಗನೂರು ಗ್ರಾಮದ 73 ವರ್ಷದ ವೃದ್ಧ (ರೋಗಿ ಸಂಖ್ಯೆ–4,42,779) ಬುಧವಾರ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ತಡರಾತ್ರಿ 2.30ಕ್ಕೆ ಮೃತಪಟ್ಟಿದ್ದಾರೆ.

ADVERTISEMENT

ನಗರದ 65 ವರ್ಷದ ಮಹಿಳೆ (ರೋಗಿ ಸಂಖ್ಯೆ–4,42,786) ಕೂಡ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದರು, ತಡ ರಾತ್ರಿ 3.20ಕ್ಕೆ ಅಸುನೀಗಿದ್ದಾರೆ.

ನಗರದ 72 ವರ್ಷದ ವೃದ್ಧ (ರೋಗಿ ಸಂಖ್ಯೆ–4,44,438) ಬುಧವಾರ ರಾತ್ರಿ 2.45ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ 64 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 51 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 2,835ಕ್ಕೆ ಏರಿದೆ. 2,251 ಮಂದಿ ಗುಣಮುಖರಾಗಿದ್ದಾರೆ. 525 ಸಕ್ರಿಯ ಪ್ರಕರಣಗಳಿವೆ. 149 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 34 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ 861 ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಆರ್‌ಟಿಪಿಸಿಆರ್‌–246, ರ‍್ಯಾಪಿಡ್‌ ಆ್ಯಂಟಿಜೆನ್‌ –553 ಹಾಗೂ ಟ್ರುನಾಟ್‌ 24 ಪರೀಕ್ಷೆಗಳನ್ನು ಮಾಡಲಾಗಿದೆ. 798 ವರದಿಗಳು ನೆಗೆಟಿವ್‌ ಬಂದಿವೆ. 63 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಒಂದು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ.

ದೃಢಪಟ್ಟ 64 ಪ್ರಕರಣಗಳಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ 21, ಚಾಮರಾಜನಗರದ 20, ಕೊಳ್ಳೇಗಾಲದ 13, ಹನೂರಿನ ಏಳು ಹಾಗೂ ಯಳಂದೂರಿನ ಮೂರು ಪ್ರಕರಣಗಳು ಸೇರಿವೆ.

ಸೋಂಕು ಮುಕ್ತರಾದ 51 ಮಂದಿಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ 19, ಚಾಮರಾಜನಗರದ 16, ಕೊಳ್ಳೇಗಾಲದ ಒಂಬತ್ತು, ಹನೂರಿನ ಆರು ಹಾಗೂ ಯಳಂದೂರು ತಾಲ್ಲೂಕಿನ ಒಬ್ಬರು ಇದ್ದಾರೆ.

ಸಿಸಿಎಫ್ ಗುಣಮುಖ, ಪ್ಲಾಸ್ಮಾ ದಾನದ ಇಂಗಿತ

ಕೋವಿಡ್–19ಗೆ ತುತ್ತಾಗಿದ್ದ ಅರಣ್ಯ ಇಲಾಖೆಯ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌, ಅವರ ಪತ್ನಿ ಹಾಗೂ ಪುತ್ರ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಮೈಕೈ ನೋವು, ಶೀತದ ರೋಗ ಲಕ್ಷಣ ಇದ್ದುದರಿಂದ ಪರೀಕ್ಷೆಗೆ ಒಳಗಾಗಿದ್ದರು. ಆಗಸ್ಟ್‌ 29ರಂದು ಮೂವರಿಗೂ ಸೋಂಕು ಇರುವುದು ದೃಢಪಟ್ಟಿತ್ತು. ಮಗಳ ಪರೀಕ್ಷಾ ವರದಿ ನೆಗೆಟಿವ್‌ ಬಂದಿತ್ತು.

ಮೂವರೂ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆದಿದ್ದರು. ಕೋವಿಡ್‌ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದರು. ನಾಲ್ಕೈದು ದಿನಗಳಲ್ಲಿ ಸುಧಾರಿಸಿದ್ದರು. ಸರ್ಕಾರದ ನಿಯಮದಂತೆ 13 ದಿನಗಳ ಕಾಲ ಮೂವರೂ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದರು.

ಅತ್ಯುತ್ತಮ ಚಿಕಿತ್ಸೆ ನೀಡಿದ ಜಿಲ್ಲಾಡಳಿತ, ಕೋವಿಡ್‌ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿರುವ ಮನೋಜ್‌ ಕುಮಾರ್‌ ಅವರು, ‘ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸಣ್ಣದಾಗಿ ರೋಗ ಲಕ್ಷಣ ಕಂಡು ಬಂದ ತಕ್ಷಣ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯಬೇಕು. ಇದರಿಂದ ಮುಂದೆ ಸೃಷ್ಟಿಯಾಗುವ ಗಂಭೀರ ಪರಿಸ್ಥಿತಿಯನ್ನು ತಪ್ಪಿಸಬಹುದು. ಸಕಾರಾತ್ಮಕ ಮನೋಭಾವದಿಂದ ಇದ್ದರೆ, ಸೋಂಕನ್ನು ಸುಲಭವಾಗಿ ಗೆಲ್ಲಬಹುದು’ ಎಂದು ಹೇಳಿದ್ದಾರೆ.

ಈಗ ಸೋಂಕು ಮುಕ್ತರಾಗಿರುವುದರಿಂದ, ಅಗತ್ಯವಿರುವ ರೋಗಿಗಳಿಗೆ ಪ್ಲಾಸ್ಮಾ ದಾನ ನೀಡುವ ‌ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.