ADVERTISEMENT

ಚಾಮರಾಜನಗರ: ಮೂರು ಸಾವು, 83 ಮಂದಿಗೆ ಸೋಂಕು

2000 ದಾಟಿದ ಪ್ರಕರಣಗಳು, 1,547 ಮಂದಿ ಸೋಂಕು ಮುಕ್ತ, 456 ಸಕ್ರಿಯ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 13:31 IST
Last Updated 23 ಆಗಸ್ಟ್ 2020, 13:31 IST
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ   

ಚಾಮರಾಜನಗರ: ಜಿಲ್ಲೆಯಲ್ಲಿ ಎರಡು ದಿನಗಳ ಅವಧಿಯಲ್ಲಿ ಕೋವಿಡ್‌ನಿಂದಾಗಿ ಮೂವರು ಮೃತಪಟ್ಟಿದ್ದಾರೆ. 75 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.119ಜನರು ಗುಣಮುಖರಾಗಿದ್ದಾರೆ.

ಶನಿವಾರ ಇಬ್ಬರು ಮೃತಪಟ್ಟಿದ್ದರೆ, ಭಾನುವಾರ ಒಬ್ಬರು ಸಾವಿಗೀಡಾಗಿದ್ದಾರೆ. ಗಣೇಶ ಹಬ್ಬದ ದಿನ 51 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. 60 ಜನರು ಸೋಂಕು ಮುಕ್ತರಾಗಿದ್ದಾರೆ. ಭಾನುವಾರ 24 ಪ್ರಕರಣಗಳು ವರದಿಯಾಗಿವೆ.59 ಜನರು ಗುಣಮುಖರಾಗಿದ್ದಾರೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 2000 ದಾಟಿದೆ. ಇದುವರೆಗೆ 2,039 ಮಂದಿ ಸೋಂಕಿತರಾಗಿದ್ದಾರೆ. ಗುಣಮುಖರಾದವರ ಸಂಖ್ಯೆ 1,547ಕ್ಕೆ ತಲುಪಿದೆ. 456 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 207 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 22 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಎರಡು ದಿನಗಳಲ್ಲಿ ಮೃತಪಟ್ಟ ಮೂವರು ಸೇರಿದಂತೆ, ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟ ಸೋಂಕಿತರ ಸಂಖ್ಯೆ 36ಕ್ಕೆ ಏರಿದೆ. 24 ಮಂದಿ ಕೋವಿಡ್‌ ಕಾರಣದಿಂದ ಪ್ರಾಣ ಕಳೆದುಕೊಂಡರೆ, ಸೋಂಕು ಇದ್ದರೂ ಬೇರೆ ಕಾಯಿಲೆಗಳಿಂದಾಗಿ 12 ಮಂದಿ ಮೃತಪಟ್ಟಿದ್ದಾರೆ.

ಚಾಮರಾಜನಗರದ ನಿವಾಸಿ 60 ವರ್ಷದ ವ್ಯಕ್ತಿಯೊಬ್ಬರು ಆಗಸ್ಟ್‌ 1ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ತಡರಾತ್ರಿ 1.05ಕ್ಕೆ ನಿಧನರಾಗಿದ್ದಾರೆ.

ಕೊಳ್ಳೇಗಾಲದ 68 ವರ್ಷದ ಮಹಿಳೆ (ರೋಗಿ ಸಂಖ್ಯೆ–2,51,355) ಆಗಸ್ಟ್‌ 18ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಮೃತಪಟ್ಟಿದ್ದಾರೆ. ಆಗಸ್ಟ್‌ 18ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೊಳ್ಳೇಗಾಲ ತಾಲ್ಲೂಕಿನ ಅಣಗಳ್ಳಿಯ 85 ವರ್ಷದ ವೃದ್ಧ (ರೋಗಿ ಸಂಖ್ಯೆ–2,49,685) ಶುಕ್ರವಾರ ಮೃತಪಟ್ಟಿದ್ದಾರೆ.

ಕಡಿಮೆ ಪರೀಕ್ಷೆ: ಭಾನುವಾರ ಜಿಲ್ಲೆಯಲ್ಲಿ ಕಡಿಮೆ ಪರೀಕ್ಷೆಗಳು ನಡೆದಿವೆ. ಕೇವಲ 102 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಆರ್‌ಟಿಪಿಸಿಆರ್‌ ವಿಧಾನದಲ್ಲಿ 81, ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ ಮೂಲಕ 21 ಪರೀಕ್ಷೆಗಳನ್ನು ನಡೆಸಲಾಗಿದೆ.

ವೈದ್ಯರ ಮುಷ್ಕರದಿಂದಾಗಿ ಚಾಮರಾಜನಗರ ಬಿಟ್ಟು ಬೇರೆ ಕಡೆಗಳಲ್ಲಿ ಹೆಚ್ಚು ಗಂಟಲು ದ್ರವದ ಮಾದರಿ ಸಂಗ್ರಹವಾಗಿಲ್ಲ.

ಶನಿವಾರ 235 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ (ಆರ್‌ಟಿಪಿಸಿಆರ್‌ 190, ರ‍್ಯಾ‍ಪಿಡ್‌ ಆ್ಯಂಟಿಜೆನ್‌‌–45) ನಡೆಸಲಾಗಿತ್ತು. ಈ ಪೈಕಿ 49 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಎರಡು ಪ್ರಕರಣಗಳು ಮೈಸೂರಿನಲ್ಲಿ ವರದಿಯಾಗಿದ್ದವು.

ಭಾನುವಾರ ದೃಢಪಟ್ಟ 24 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 17, ಗುಂಡ್ಲುಪೇಟೆ ನಾಲ್ಕು, ಕೊಳ್ಳೇಗಾಲ ತಾಲ್ಲೂಕಿನ ಎರಡು ಪ್ರಕರಣಗಳು ಸೇರಿವೆ. ಒಂದು ಪ್ರಕರಣ ಹೊರಜಿಲ್ಲೆಗೆ ಸಂಬಂಧಿಸಿದ್ದು.

ಗುಣಮುಖರಾದ 59 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 31, ಗುಂಡ್ಲುಪೇಟೆ ಹಾಗೂ ಯಳಂದೂರು ತಾಲ್ಲೂಕುಗಳ ತಲಾ 11, ಕೊಳ್ಳೇಗಾಲ ತಾಲ್ಲೂಕಿನ ಇಬ್ಬರು ಹಾಗೂ ಮೈಸೂರಿನ ಇಬ್ಬರು ಇದ್ದಾರೆ.

ಶನಿವಾರ ದೃಢಪ‍ಟ್ಟ 51 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 24, ಗುಂಡ್ಲುಪೇಟೆಯ 12, ಕೊಳ್ಳೇಗಾಲದ ಒಂಬತ್ತು ಹನೂರು ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯ ತಲಾ ಎರಡು ಪ್ರಕರಣಗಳು ಸೇರಿವೆ.

ಸೋಂಕು ಮುಕ್ತರಾದ 60 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 30, ಕೊಳ್ಳೇಗಾಲದ 14, ಗುಂಡ್ಲುಪೇಟೆಯ 11, ಯಳಂದೂರಿನ ಒಬ್ಬರು ಹಾಗೂ ಮೈಸೂರು ಜಿಲ್ಲೆಯ ನಾಲ್ವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.