ADVERTISEMENT

ಗುಂಡ್ಲುಪೇಟೆ | ಹುಲಿ ದಾಳಿಗೆ ಮಹಿಳೆ ಬಲಿ: 9 ದಿನಗಳಲ್ಲಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:43 IST
Last Updated 19 ಜೂನ್ 2025, 14:43 IST
<div class="paragraphs"><p>ಹುಲಿ: ಸಾಂದರ್ಭಿಕ ಚಿತ್ರ</p></div>

ಹುಲಿ: ಸಾಂದರ್ಭಿಕ ಚಿತ್ರ

   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದ ದೇಶಿಪುರ ಬೀಟ್‌ನ ಕಾಡಂಚಿನ ಜಮೀನಿನಲ್ಲಿ ಹುಲಿದಾಳಿಗೆ ಮಹಿಳೆ ಮೃತಪಟ್ಟಿದ್ದಾರೆ.

ದೇಶಿಪುರ ಕಾಲೋನಿಯ ಪುಟ್ಟಮ್ಮ (32) ಮೃತರು. ಗುರುವಾರ ಮಧ್ಯಾಹ್ನ ಜಾನುವಾರು ಮೇಯಿಸುವಾಗ ಹುಲಿ ಏಕಾಏಕಿ ಮೇಲೆರಗಿದ್ದು ಕುತ್ತಿಗೆ, ಎದೆ ಹಾಗೂ ಹೊಟ್ಟೆ ಭಾಗವನ್ನು ಕಚ್ಚಿದೆ. ಬಳಿಕ ಮಹಿಳೆಯನ್ನು 100 ಮೀಟರ್ ದೂರಕ್ಕೆ ಎಳೆದೊಯ್ದು ಬಿಸಾಡಿದೆ. ದಾಳಿ ಸುದ್ದಿ ತಿಳಿದ ಗ್ರಾಮಸ್ಥರು ಶೋಧ ನಡೆಸಿದಾಗ ಪುಟ್ಟಮ್ಮನ ಶವ ಪತ್ತೆಯಾಗಿದೆ.

ADVERTISEMENT

’ಹುಲಿ ದಾಳಿಯಿಂದ ಮಹಿಳೆ ಮೃತಪಟ್ಟಿರುವುದು ದೃಢಪಟ್ಟಿದ್ದು ಮರಣೋತ್ತರ ಪರೀಕ್ಷೆ ಬಳಿಕ ಶವ ಹಸ್ತಾಂತರ ಮಾಡಲಾಗುವುದು. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಂಡೀಪುರ ಸಿಎಫ್ಒ ಪ್ರಭಾಕರನ್ ತಿಳಿಸಿದ್ದಾರೆ. 

ಹುಲಿ ಹಿಡಿಯಲು ಒತ್ತಾಯ: ಮಹಿಳೆಯನ್ನು ಕೊಂದ ಹುಲಿಯನ್ನು ಕೂಡಲೇ ಸೆರೆ ಹಿಡಿಯಬೇಕು, ಮೃತರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡಬೇಕು ಎಂದು ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಜೂನ್ 10ರಂದು ಬಿಳಿಗಿರಿರಂಗನಾಥ ಸ್ವಾಮಿ ಅರಣ್ಯ ವ್ಯಾಪ್ತಿಯ ಬೇಡಗುಳಿ ಸಮೀಪದ ರಾಮಯ್ಯನ ಪೋಡಿನಲ್ಲಿ ಹುಲಿ ದಾಳಿಗೆ ರಂಗಮ್ಮ ಮೃತಪಟ್ಟಿದ್ದರು. ರವಿ ಎಂಬುವರ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. 9 ದಿನಗಳ ಅಂತರದಲ್ಲಿ ಹುಲಿ ದಾಳಿಗೆ ಇಬ್ಬರು ಬಲಿಯಾಗಿರುವುದು ಕಾಡಂಚಿನ ಗ್ರಾಮಗಳಲ್ಲಿ ಭೀತಿ ಸೃಷ್ಟಿಸಿದೆ. ಜಾನುವಾರುಗಳನ್ನು ಮೇಯಿಸಲು ಹೋಗಲು ಭಯವಾಗುತ್ತಿದೆ ಎಂದು ಹಾಡಿ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.