ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಕಾಣಿಸಿಕೊಂಡಿದ್ದ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಾಕಾನೆ ಮೂಲಕ ಕೂಂಬಿಂಗ್ ಆರಂಭಿಸಿದೆ.
ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ಚನ್ನಮಲ್ಲಿಪುರ, ಮದ್ದಯ್ಯನಹುಂಡಿ, ಬೇರಂಬಾಡಿ ಸುತ್ತಮುತ್ತಲು ಸಾಕಾನೆ ರೋಹಿತ್ ಬಳಕೆ ಮಾಡಿಕೊಂಡು ಎಸಿಎಫ್ ಸುರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಪ್ರಮುಖ ಸ್ಥಳಗಳಲ್ಲಿ ಶೋಧ ನಡೆಸಿದೆ.
ಜೊತೆಗೆ ಡ್ರೋನ್ ಕೂಡ ಬಳಕೆ ಮಾಡಲಾಗಿದ್ದು, ನಿರ್ದಿಷ್ಟ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದೆ. ಹೀಗಿದ್ದರೂ ಕೂಡ ಹುಲಿ ಕಾಣಿಸಿಕೊಂಡಿಲ್ಲ ಎಂದು ಡಿಆರ್‌ಎಫ್‍ಒ ರವಿ ಮಾಹಿತಿ ನೀಡಿದ್ದಾರೆ.
ಕಳೆದ ಆ.30ರ ರಾತ್ರಿ ಕಗ್ಗಳದಹುಂಡಿ ಗ್ರಾಮದ ರೈತರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡು ಕಾಡು ಹಂದಿ ಬೇಟೆಯಾಡಿ ಕೊಂದು ಹಾಕಿತ್ತು. ಸೆ.4ರಂದು ಮದ್ದಯ್ಯನಹುಂಡಿ ಕೆರೆ ಬಳಿ ಹುಲಿ ಕಾಣಿಸಿದ್ದರಿಂದ ರೈತರು ಭಯಭೀತರಾಗಿ ಅರಣ್ಯ ಇಲಾಖೆಗೆ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ರೈತರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಅಧಿಕಾರಿಗಳು ಚೆನ್ನಮಲ್ಲಿಪುರ, ಬೇರಂಬಾಡಿ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತು ಆಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇಲಾಖೆ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ, ಡಿಆರ್‌ಎಫ್ಒ ರವಿ, ಗುಂಡ್ಲುಪೇಟೆ ಡಿಆರ್‌ಎಫ್ ಶಿವಕುಮಾರ್, ಎಸ್‌ಟಿಪಿಎಫ್ ಆರ್‌ಎಫ್‍ಒ ವೈರಮುಡಿ ಸೇರಿ ಒಟ್ಟು 62 ಮಂದಿ ಅರಣ್ಯ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.
ಹುಲಿ ಸೆರೆವರೆಗೂ ಕೂಂಬಿಂಗ್ ನಡೆಸಿ:
ಚನ್ನಮಲ್ಲಿಪುರ, ಮದ್ದಯ್ಯನಹುಂಡಿ, ಬೇರಂಬಾಡಿ, ಕಗ್ಗಳದಹುಂಡಿ ಗ್ರಾಮದ ಸುತ್ತಮುತ್ತಲು ಆಗಾಗ್ಗೆ ಹುಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಜಮೀನುಗಳಿಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಒಂದೆರಡು ದಿನಕ್ಕೆ ಕೂಂಬಿಂಗ್ ಮೊಟಕುಗೊಳಿಸದೆ ಹುಲಿ ಸೆರೆ ಹಿಡಿಯುವವರೆಗೂ ಕಾರ್ಯಾಚರಣೆ ನಡೆಸಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.