
ಚಾಮರಾಜನಗರ: ತಾಲ್ಲೂಕಿನ ವೀರನಪುರದ ಆನೆಮಡುವಿನ ಕೆರೆಯ ಬಳಿ ಶುಕ್ರವಾರ ಮುಂಜಾನೆ 7 ವರ್ಷದ ಹೆಣ್ಣು ಹುಲಿ ಬೋನಿಗೆ ಬಿದ್ದಿದ್ದು, ನಾಲ್ಕು ಮರಿಗಳ ಜೊತೆಗೆ ಇತ್ತೀಚೆಗೆ ಕಾಣಿಸಿಕೊಂಡಿದ್ದು ಅದೇ ಹುಲಿ ಎಂದು ತಿಳಿದುಬಂದಿದೆ.
ನಂಜೇದೇವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ನಟೇಶ್ ಎಂಬುವರ ಜಮೀನಿನಲ್ಲಿ ತುಮಕೂರು ಮಾದರಿಯ ಬೋನು ಇರಿಸಿದ್ದರು. ಬೋನಿನಲ್ಲಿ ಸಿಲುಕಿದ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಆರೋಗ್ಯ ಪರೀಕ್ಷೆ ನಡೆಸಲಾಯಿತು. ನಾಲ್ಕು ಮರಿಗಳನ್ನು ಸೆರೆ ಹಿಡಿಯಲು ಅಧಿಕಾರಿಗಳು ಬೋನಿನಲ್ಲಿ ತಾಯಿ ಹುಲಿ ಹಾಗೂ ದನದ ಕಳೆಬರವನ್ನು ಇರಿಸಿ ಕಾಯುತ್ತಿದ್ದಾರೆ.
‘ತಾಯಿಯ ಹುಡುಕಾಟದಲ್ಲಿ ಮರಿಗಳು ಬೇರೆಡೆ ಹೋಗಿರುವ ಸಾಧ್ಯತೆಯೂ ಹೆಚ್ಚಾಗಿರುವುದರಿಂದ ಥರ್ಮಲ್ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಚಾಮರಾಜನಗರ ವೃತ್ತದ ಸಿಸಿಎಫ್ ಡಾ.ಮಾಲತಿ ಪ್ರಿಯಾ, ಬಿಆರ್‌ಟಿ ಡಿಎಫ್‌ಒ ಬಿ.ಎಸ್.ಶ್ರೀಪತಿ, ಎಸಿಎಫ್ ಮಂಜುನಾಥ್, ವೈದ್ಯ ಆದರ್ಶ್, ವಾಸಿಂ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
‘ತಾಯಿ ಹುಲಿ ಸಿಕ್ಕಿದ್ದರೂ, ನಾಪತ್ತೆಯಾಗಿರುವ ಮರಿಗಳು ಜನ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡಬಹುದು’ ಎಂಬ ಭೀತಿ ಗ್ರಾಮಸ್ಥರಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.